ಅಮೆರಿಕ ಸಿಐಆರ್`ಎಫ್ ನಿಂದ ದೆಹಲಿ ಹಿಂಸಾಚಾರ ಖಂಡನೆ, ಭಾರತ ತಿರುಗೇಟು

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರವನ್ನು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ(ಯುಎಸ್ ಸಿಐಆರ್ ಎಫ್) ಖಂಡಿಸಿದೆ.
ಸಿಐಆರ್`ಎಫ್ ನಿಂದ ದೆಹಲಿ ಹಿಂಸಾಚಾರ ಖಂಡನೆ
ಸಿಐಆರ್`ಎಫ್ ನಿಂದ ದೆಹಲಿ ಹಿಂಸಾಚಾರ ಖಂಡನೆ

ವಾಷಿಂಗ್ಟನ್: ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರವನ್ನು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ(ಯುಎಸ್ ಸಿಐಆರ್ ಎಫ್) ಖಂಡಿಸಿದೆ.

ಹೌದು.. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರಗಳ ಬಗ್ಗೆ ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ(ಯುಎಸ್ ಸಿಐಆರ್ ಎಫ್) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಯುಎಸ್ ಸಿಐಆರ್ ಎಫ್ ಆಯುಕ್ತರಾದ ಅನುರಿಮಾ ಭಾರ್ಗವ ಅವರು, ದೆಹಲಿ ಹಿಂಸಾಚಾರವನ್ನು ಕ್ರೂರ ಮತ್ತು ಪರೀಕ್ಷಿಸದ ಹಿಂಸಾಚಾರ ಎಂದು ಹೇಳಿದ್ದಾರೆ. ಅಲ್ಲದೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅಮಾಯಕ ಪ್ರಜೆಗಳ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿ ಪೊಲೀಸರ ವಿರುದ್ಧವೂ ಕಿಡಿಕಾರಿರುವ ಅನುರಿಮಾ ಭಾರ್ಗವ ಅವರು, ಅಲ್ಪಸಂಖ್ಯಾತರ ವಿರುದ್ಧದ ದಾಳಿಯನ್ನು ತಡೆಯುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ. ಸರ್ಕಾರ ಕೂಡ ನಾಗರಿಕರ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಭಾವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಯುಎಸ್ ಸಿಐಆರ್ ಎಫ್ ಅಧ್ಯಕ್ಷ ಟೋನಿ ಪರ್ಕಿನ್ಸ್ ಅವರು, ದೆಹಲಿ ಹಿಂಸಾಚಾರದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ದಾಳಿಯಲ್ಲಿ ಅವರ ನಿವಾಸಗಳು, ಅಂಗಡಿಗಳು ಮತ್ತು ಮಸೀದಿಗಳನ್ನು ಧ್ವಂಸ ಮಾಡಲಾಗಿದೆ. ನಾಗರಿಕರನ್ನು ಎಲ್ಲ ವಿಧದಲ್ಲೂ ರಕ್ಷಣೆ ಮಾಡಬೇಕಾದ ಸರ್ಕಾರವೇ ಇದರಲ್ಲಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ನಡುವೆಯೇ ಈಶಾನ್ಯ ದೆಹಲಿಯಲ್ಲಿ ಮಾರಕ ಗಲಭೆಗಳು ಮತ್ತು ಹಿಂಸಾಚಾರಗಳು ನಡೆದಿವೆ. ಈವರೆಗೆ, ಹಿಂಸಾಚಾರದಲ್ಲಿ 34 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವರದಿಗಳಂತೆ ಅನೇಕ ಪ್ರಾರ್ಥನಾ ಸ್ಥಳಗಳು ಮತ್ತು ಮಂದಿರಗಳನ್ನೂ ಧ್ವಂಸಗೊಳಿಸಲಾಗಿದೆ. 2019 ರ ಡಿಸೆಂಬರ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ವ್ಯಾಪಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಉಂಟಾಗಿದೆ.

ಭಾರತ ತಿರುಗೇಟು
ಇನ್ನು ಯುಎಸ್ ಸಿಐಆರ್ ಎಫ್ ಖಂಡನೆಗೆ ಭಾರತ ಸರ್ಕಾರ ಕೂಡ ತಿರುಗೇಟು ನೀಡಿದ್ದು, ಯುಎಸ್ ಸಿಐಆರ್ ಎಫ್ ನ ಪ್ರಕಟಣೆ ವಾಸ್ತವವಾಗಿ ತಪ್ಪಾದ, ದಾರಿತಪ್ಪಿಸುವಂತಿದೆ ಎಂದು ಹೇಳಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರಾವೀಶ್ ಕುಮಾರ್ ಅವರು, ಅಮೆರಿಕ ಸಂಸ್ಥೆಯ ಪ್ರತಿಕ್ರಿಯೆ ಕೇವಲ ಕೆಲವರನ್ನು ಮಾತ್ರ ಉದ್ದೇಶಿಸಿ ಮಾಡಿರುವಂತಿದೆ. ಸಂಸ್ಥೆಯ ವರದಿಯಲ್ಲಿ ವಾಸ್ತವವಾಗಿ ತಪ್ಪಾದ, ದಾರಿತಪ್ಪಿಸುವಂತಹ ಅಂಶಗಳಿದ್ದು, ಪ್ರಕರಣವನ್ನು ರಾಜಕೀಯಗೊಳಿಸುವ ಹುನ್ನಾರವಿದೆ ಎಂದು ಖಂಡಿಸಿದ್ದಾರೆ.

ದೆಹಲಿಯಲ್ಲಿ ಶಾಂತಿ ಮರು ಸ್ಥಾಪನೆಗೆ ಕೇಂದ್ರ ಸರ್ಕಾರ ಶತ ಪ್ರಯತ್ನ ಮಾಡಿದೆ. ಸ್ವತಃ ಪ್ರಧಾನಿ ಮೋದಿ ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಸರ್ಕಾರದ ಉನ್ನತಾಧಿಕಾರಿಗಳು ದೆಹಲಿಯಲ್ಲಿ ಶಾಂತಿ ಸ್ಥಾಪನೆಗಾಗಿ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಂತಹ ಪ್ರಮುಖ ಸಂಸ್ಥೆಗಳ ಬೇಜವಾಬ್ದಾರಿಯುತ ಹೇಳಿಕೆಗಳಿಂದ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯುಂಟಾಗಲಿದೆ ಎಂದು ರಾವೀಶ್ ಕುಮಾರ್ ಕಿಡಿಕಾರಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com