ಸಿಎಎ ಜಾರಿ ಅಗತ್ಯವಿರಲಿಲ್ಲ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ
ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯವಿರಲಿಲ್ಲ, ಮೇಲಾಗಿ ಇದರ ಉದ್ದೇಶವೂ ಅರ್ಥವಾಗುತ್ತಿಲ್ಲ ಎಂದು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯೆ ನೀಡಿದ್ದಾರೆ.
Published: 20th January 2020 01:40 PM | Last Updated: 20th January 2020 01:40 PM | A+A A-

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ-ಪ್ರಧಾನಿ ಮೋದಿ
ದುಬೈ: ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯವಿರಲಿಲ್ಲ, ಮೇಲಾಗಿ ಇದರ ಉದ್ದೇಶವೂ ಅರ್ಥವಾಗುತ್ತಿಲ್ಲ ಎಂದು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯೆ ನೀಡಿದ್ದಾರೆ.
ಅಬುದಾಭಿಯಲ್ಲಿ ಗಲ್ಫ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶೇಖ್ ಹಸೀನಾ ಅವರು, 'ಬಾಂಗ್ಲಾದೇಶ ಮತ್ತು ಇತರ ನೆರೆಯ ದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿರುವ ಹಿಂದೂಗಳಿಗಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರ ಯಾವ ಅರ್ಥದಲ್ಲಿ ಹೇಳುತ್ತಿದೆಯೋ ತಮಗೆ ಗೊತ್ತಾಗುತ್ತಿಲ್ಲ. ಭಾರತ ಸರ್ಕಾರಕ್ಕೆ ಈ ಕಾಯ್ದೆ ಅನಿವಾರ್ಯವಾಗಿರಲಿಲ್ಲ. ಆದರೂ ಇದು ಭಾರತದ ಆಂತರಿಕ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ 'ಸಿಎಎಯಿಂದಾಗಿ ಭಾರತದಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕಾಯ್ದೆಯನ್ನು ಆತುರಾತುರವಾಗಿ ಜಾರಿ ಮಾಡುವ ಅಗತ್ಯ ಏನಿತ್ತು ಎಂಬುದು ತಮಗೆ ಅರ್ಥವಾಗುತ್ತಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ನೆಲೆಯಲ್ಲಿ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿಕೆಯನ್ನು ತ್ವರಿತಗೊಳಿಸುವುದು ಕಾಯ್ದೆಯ ಉದ್ದೇಶ. ಪಾಕಿಸ್ತಾನದ ಜತೆಗೆ ಬಾಂಗ್ಲಾದೇಶವನ್ನು ಯಾಕೆ ಸೇರಿಸಲಾಗಿದೆ? ಬಾಂಗ್ಲಾ ದೇಶದ ಜನಸಂಖ್ಯೆಯಲ್ಲಿ ಶೇ 10.7ರಷ್ಟು ಹಿಂದೂಗಳಿದ್ದಾರೆ. ಬಾಂಗ್ಲಾ ದೇಶದಲ್ಲಿ ಹಿಂದುಗಳಿಗೆ ಕಿರುಕುಳ ನೀಡಿದ ಘಟನೆಗಳು ವರದಿಯಾಗಿಲ್ಲ. ಮ್ಯಾನ್ಮಾರ್ ನಿಂದ ವಾಪಸಾಗಿರುವ ರೋಹಿಂಗ್ಯಾ ನಿರಾಶ್ರಿತರಿಗೆ ಬಾಂಗ್ಲಾ ಕಾಕ್ಸ್ ಬಜಾರ್ ಕ್ಯಾಂಪ್ ನಲ್ಲಿ ಆಶ್ರಯ ನೀಡಿರುವುದಾಗಿ ಶೇಖ್ ಹಸೀನಾ ಹೇಳಿದ್ದಾರೆ.
ಇನ್ನು ಸಿಎಎ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಮಾತನಾಡಿರುವುದು ಇದೇ ಮೊದಲು. ಈ ವಿವಾದಿತ ಕಾಯ್ದೆಯ ಬಗ್ಗೆ ಬಾಂಗ್ಲಾದೇಶದಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿವೆ. ಭಾರತವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬಳಿಕ ಬಾಂಗ್ಲಾದೇಶದ ಮೂವರು ಮಂತ್ರಿಗಳು ಭಾರತಕ್ಕೆ ಭೇಟಿ ನೀಡುವ ಅಧಿಕೃತ ಕಾರ್ಯಕ್ರಮವನ್ನು ರದ್ದುಪಡಿಸಿದ್ದರು.