'ಕಾಶ್ಮೀರ ವಿವಾದ ಬಗೆಹರಿಸಲು ನಾವು ಸಹಾಯಕ್ಕೆ ಸಿದ್ದ': ಡೊನಾಲ್ಡ್ ಟ್ರಂಪ್ ಪುನರುಚ್ಛಾರ 

ಕಾಶ್ಮೀರ ವಿವಾದ ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಗತ್ಯಬಿದ್ದರೆ ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ.

Published: 22nd January 2020 08:16 AM  |   Last Updated: 22nd January 2020 09:03 AM   |  A+A-


Posted By : Sumana Upadhyaya
Source : PTI

ದಾವೊಸ್: ಕಾಶ್ಮೀರ ವಿವಾದ ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಗತ್ಯಬಿದ್ದರೆ ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ.


ಸ್ವಿಡ್ಜರ್ಲೆಂಡ್ ನ ದಾವೊಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದ ಪೂರ್ವದಲ್ಲಿ ಮಾತನಾಡಿದ ಅವರು, ಕಾಶ್ಮೀರ ವಿವಾದಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಸಹಾಯ ಮಾಡಲು ಸಾಧ್ಯವಾಗುವುದಾದರೆ ಖಂಡಿತವಾಗಿಯೂ ಮುಂದುವರಿಯಲು ಸಿದ್ಧವಿದೆ. ಎರಡು ದೇಶಗಳ ಮಧ್ಯೆ ನಡೆಯುತ್ತಿರುವ ವಿವಾದಗಳನ್ನು ಅಮೆರಿಕಾ ಬಹಳ ಸೂಕ್ಷ್ಮವಾಗಿ ಹತ್ತಿರದಿಂದ ಗಮನಿಸುತ್ತಿದೆ ಎಂದರು.


ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಮ್ಮುಖದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರ ವಿವಾದದಿಂದ ಪಾಕಿಸ್ತಾನ ಮತ್ತು ಭಾರತ ಮಧ್ಯೆ ಏನು ನಡೆಯುತ್ತಿವೆ ಎಂಬುದರ ಕುರಿತು ನಾವು ಮಾತನಾಡುತ್ತಿದ್ದೇವೆ. ನಮ್ಮ ಕಡೆಯಿಂದ ಸಹಾಯಹಸ್ತ ಚಾಚಲು ಸಾಧ್ಯವಾಗುವುದಾದರೆ ನಾವು ಖಂಡಿತಾ ಸಿದ್ದರಿದ್ದೇವೆ ಎಂದು ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೊವನ್ನು ವೈಟ್ ಹೌಸ್ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದೆ. ಟ್ರಂಪ್ ಅವರು ಹೀಗೆ ಹೇಳಿದಾಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮ್ಮ ತಲೆಯಾಡಿಸಿ ಅವರ ಮಾತನ್ನು ಒಪ್ಪಿಕೊಂಡ ಸೂಚನೆ ಕಂಡುಬಂತು.

ಕಳೆದ ವರ್ಷ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಉಂಟಾದ ಉದ್ವಿಗ್ನ ಸ್ಥಿತಿಗೆ ಹೀಗೆ ಬಹಿರಂಗವಾಗಿ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರ ವಿವಾದದಲ್ಲಿ ಅಮೆರಿಕಾ ಸಹಾಯ ಮಾಡಲು ಸಿದ್ದವಿದೆ ಎಂದು ಹೇಳುತ್ತಿರುವುದು ನಾಲ್ಕನೇ ಸಲ. ತೀರಾ ಇತ್ತೀಚೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕೂಡ ಹೇಳಿದ್ದರು. 


ಆದರೆ ಹಿಂದಿನಿಂದಲೂ ಭಾರತ ಅಮೆರಿಕಾ ಪ್ರಸ್ತಾಪವನ್ನು ತಿರಸ್ಕರಿಸುತ್ತಾ ಬಂದಿದೆ. ಕಾಶ್ಮೀರ ವಿವಾದ ಕೇವಲ ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಚಾರವಾಗಿದೆ. ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ವಿವಾದಗಳನ್ನು ಶಿಮ್ಲಾ ಮತ್ತು ಲಾಹೊರ್ ಒಪ್ಪಂದಗಳ ಅಡಿಯಲ್ಲಿಯೇ ಬಗೆಹರಿಸಬೇಕಾಗಿದ್ದು ಇದರಲ್ಲಿ ಮೂರನೇ ದೇಶದ ಮಧ್ಯಪ್ರವೇಶಕ್ಕೆ ಅಥವಾ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದಿದೆ.


ಇನ್ನು ಕೆಲ ವಾರಗಳಲ್ಲಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುತ್ತಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp