ಪ್ರತೀಕಾರ: ಚೆಂಗ್ಡು ನಲ್ಲಿರುವ ಅಮೆರಿಕ ದೂತವಾಸ ಕಚೇರಿ ಸ್ಥಗಿತಕ್ಕೆ ಚೀನಾ ಆದೇಶ

ಹೂಸ್ಟನ್ ನಲ್ಲಿ ಚೀನಾ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಪ್ರತೀಕಾರಕ್ಕೆ ಮುಂದಾಗಿರುವ ಚೀನಾ, ಚೆಂಗ್ಡುವಿನಲ್ಲಿರುವ ಅಮೆರಿಕಾದ ದೂತವಾಸ ಕಚೇರಿ ಸ್ಥಗಿತಕ್ಕೆ ಆದೇಶ ನೀಡಿದೆ. 
ಚೀನಾ
ಚೀನಾ

ಬೀಜಿಂಗ್: ಹೂಸ್ಟನ್ ನಲ್ಲಿ ಚೀನಾ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಪ್ರತೀಕಾರಕ್ಕೆ ಮುಂದಾಗಿರುವ ಚೀನಾ, ಚೆಂಗ್ಡುವಿನಲ್ಲಿರುವ ಅಮೆರಿಕಾದ ದೂತವಾಸ ಕಚೇರಿ ಸ್ಥಗಿತಕ್ಕೆ ಆದೇಶ ನೀಡಿದೆ. 

ಈ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು ಅಮೆರಿಕದ ದೂತವಾಸ ಕಚೇರಿಯ ಕಾರ್ಯನಿರ್ವಹಣೆಗೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಿ, ಚಟುವಟಿಕೆಗಳನ್ನು ನಿಲ್ಲಿಸುವಂತೆ ಹೇಳಿದೆ. 

ಜು.22 ರಂದು (ಬುಧವಾರ) ಅಮೆರಿಕ ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಲು ಆದೇಶ ನೀಡಿತ್ತು. ಅಮೆರಿಕನ್ನರ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿರುವುದಾಗಿ ಅಮೆರಿಕ ಹೇಳಿತ್ತು. 

ಅಮೆರಿಕದ ಈ ನಡೆಯನ್ನು ಹಿಂದೆಂದೂ ಕಾಣದ ತೀವ್ರತರವಾದದ್ದು ಎಂದು ಚೀನಾ ಖಂಡಿಸಿತ್ತು. ಅಲ್ಲದೇ ಅಮೆರಿಕ ತನ್ನ ಆದೇಶವನ್ನು ಹಿಂಪಡೆಯದೇ ಮುನ್ನಡೆದಿದ್ದೇ ಆದರೆ ತಾವೂ ಸಹ ಪ್ರತೀಕಾರಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿತ್ತು.

ಈಗ ಅಮೆರಿಕದ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸುವ ತನ್ನ ಆದೇಶವನ್ನು ಚೀನಾ ಸಮರ್ಥಿಸಿಕೊಂಡಿದ್ದು, ಅಮೆರಿಕಾದ ಅನುಚಿತ ನಡೆಗಳಿಗೆ ಅಗತ್ಯವಿರುವ ಪ್ರತಿಕ್ರಿಯೆ ನೀಡುವುದಕ್ಕೆ ತನಗೆ ಹಕ್ಕಿದೆ ಎಂದು ಹೇಳಿದೆ. ಚೀನಾದ ದೂತವಾಸ, ರಾಯಭಾರಿ ಕಚೇರಿಗಳನ್ನು ಮುಚ್ಚಿಸುತ್ತಿರುವ ಅಮೆರಿಕಾದ ಕ್ರಮ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದ್ದು, ಚೀನಾ-ಅಮೆರಿಕಾದ ಸಂಬಂಧಕ್ಕೆ ತೀವ್ರವಾದ ಧಕ್ಕೆ ಉಂಟಾಗಲಿದೆ ಎಂದು ಚೀನಾ ಎಚ್ಚರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com