ಭಾರತದ ಹೊರಗೆ ಮೊದಲ ಯೋಗ ವಿವಿ; ಲಾಸ್‌ ಏಂಜಲಿಸ್‌ನಲ್ಲಿ ಯೋಗ ವಿಶ್ವವಿದ್ಯಾಲಯ ಆರಂಭ

ಭಾರತದ ಹೊರಗೆ ಜಗತ್ತಿನ ಮೊದಲ ಯೋಗ ವಿಶ್ವವಿದ್ಯಾಲಯ ತಲೆ ಎತ್ತಿದ್ದು, ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ ಮಂಗಳವಾರ ಯೋಗ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್‌: ಭಾರತದ ಹೊರಗೆ ಜಗತ್ತಿನ ಮೊದಲ ಯೋಗ ವಿಶ್ವವಿದ್ಯಾಲಯ ತಲೆ ಎತ್ತಿದ್ದು, ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ ಮಂಗಳವಾರ ಯೋಗ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ.

ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಹೆಸರಿನಲ್ಲಿ ಆರಂಭಿಸಲಾಗಿರುವ ಈ ಶೈಕ್ಷಣಿಕ ಸಂಸ್ಥೆಗೆ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್‌ ಮತ್ತು ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿ ಅವರು ನ್ಯೂಯಾರ್ಕ್‌ನಲ್ಲಿ ಭಾರತದ ರಾಯಭಾರ ಕಚೇರಿಯಲ್ಲಿ ನಡೆದ ‘ವರ್ಚುವಲ್‌’ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು. ಭಾರತದ ಖ್ಯಾತ ಯೋಗ ಗುರು ಮತ್ತು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ. ಎಚ್‌. ಆರ್‌. ನಾಗೇಂದ್ರ ಅವರು ಈ ವಿಶ್ವವಿದ್ಯಾಲಯದ ಮೊದಲ ಅಧ್ಯಕ್ಷರಾಗಿದ್ದಾರೆ.

ವೈಜ್ಞಾನಿಕ ತತ್ವಗಳು ಮತ್ತು ಆಧುನಿಕ ಸಂಶೋಧನೆ ಅಡಿಯಲ್ಲಿ ಆನ್‌ಲೈನ್‌ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಈ ವಿಶ್ವವಿದ್ಯಾಲಯ ಮೂಲಕ ನೀಡಲು ಉದ್ದೇಶಿಸಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಆಗಸ್ಟ್‌ 24ರಿಂದ ‘ವರ್ಚುವಲ್‌’ ವ್ಯವಸ್ಥೆ ಮೂಲಕ ಆರಂಭವಾಗಲಿವೆ. ಈ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರನ್ನು ಭಾರತದ ಮೊದಲ ಯೋಗ ವಿಶ್ವವಿದ್ಯಾಲಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿದುಬಂದಿದೆ.

ಈ ವೇಳೆ ಮಾತನಾಡಿದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ. ಎಚ್‌. ಆರ್‌. ನಾಗೇಂದ್ರ ಅವರು, 'ಈ ವಿಶ್ವವಿದ್ಯಾಲಯದ ಮೂಲಕ ಪೂರ್ವ ಮತ್ತು ಪಶ್ಚಿಮಗಳಲ್ಲಿನ ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು. ಪೂರ್ವ ರಾಷ್ಟ್ರದಲ್ಲಿ ಯೋಗ ಅತ್ಯುತ್ತಮವಾಗಿದ್ದರೆ, ಪಶ್ಚಿಮದಲ್ಲಿ ಆಧುನಿಕ ವಿಜ್ಞಾನದ ಸಂಶೋಧನೆಯಲ್ಲಿ ಅಪಾರ ಪ್ರಗತಿ ಸಾಧಿಸಲಾಗಿದೆ. ಅಲೋಪತಿ ಮತ್ತು ಆಯುಷ್‌ ವ್ಯವಸ್ಥೆಗಳ ಮೂಲಕ ಸಮಗ್ರವಾದ ಆರೋಗ್ಯ ರಕ್ಷಣೆಯನ್ನು ಜಗತ್ತಿಗೆ ಒದಗಿಸುವ ನಿಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲಾಗುವುದು’ ಎಂದು ನಾಗೇಂದ್ರ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. 

ಯೋಗ ವಿವಿ ಕುರಿತು ಮಾತನಾಡಿದ ಯೋಗ ಗುರು ಬಾಬಾ ರಾಮ್ ದೇವ್ ಅವರು, 'ಭಾರತದ ಆಚೆಗೆ ಯೋಗ ವಿಶ್ವವಿದ್ಯಾಲಯದ ಪ್ರಾರಂಭವು "ಹೆಮ್ಮೆಯ ವಿಷಯ" ಮತ್ತು ಯೋಗ ಸಂಶೋಧನಾ ಕ್ಷೇತ್ರದಲ್ಲಿ ಮುಂದಿನ ವರ್ಷಗಳಲ್ಲಿ ಇದು ಭಾರತದ ಹೆಮ್ಮೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com