ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್

"ಒಸಾಮಾ ಬಿನ್ ಲ್ಯಾಡನ್ ಓರ್ವ ಹುತಾತ್ಮ"

ಉಗ್ರ ಒಸಾಮಾ ಬಿನ್ ಲ್ಯಾಡನ್ ನ್ನು ಪಾಕಿಸ್ತಾನದ ಪ್ರಧಾನಿ ಓರ್ವ ಹುತಾತ್ಮ ಎಂದು ಬಣ್ಣಿಸಿರುವ ವಿಡಿಯೋ ವೈರಲ್ ಆಗತೊಡಗಿದೆ.

ಇಸ್ಲಾಮಾಬಾದ್: ಉಗ್ರ ಒಸಾಮಾ ಬಿನ್ ಲ್ಯಾಡನ್ ನ್ನು ಪಾಕಿಸ್ತಾನದ ಪ್ರಧಾನಿ ಓರ್ವ ಹುತಾತ್ಮ ಎಂದು ಬಣ್ಣಿಸಿರುವ ವಿಡಿಯೋ ವೈರಲ್ ಆಗತೊಡಗಿದೆ. ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, 9/11 ರ ಮಾಸ್ಟರ್ ಮೈಂಡ್ ಒಸಾಮ ಬಿನ್ ಲ್ಯಾಡನ್ ನ್ನು ಹುತಾತ್ಮ ಎಂದು ಹೇಳಿದ್ದಾರೆ.

"ಹಿಂದೊಮ್ಮೆ ಒಂದು ಘಟನೆ ನಡೆಯಿತು, ಅಮೆರಿಕನ್ನರು ಅಬ್ಬೋಟಾಬಾದ್ ಗೆ ನುಗ್ಗಿ ಒಸಾಮಾ ಬಿನ್ ಲ್ಯಾಡನ್ ನ್ನು ಹತ್ಯೆ ಮಾಡಿದರು, ಹುತಾತ್ಮನನ್ನಾಗಿಸಿದರು ಎಂದು ಹೇಳಿದ್ದಾರೆ. ಪತ್ರಕರ್ತರಾದ ನೈಲಾ ಇನ್ಯಾತ್ ಇದನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಇಮ್ರಾನ್ ಖಾನ್ ಒಸಾಮಾ ವಿಷಯದಲ್ಲಿ ಅಮೆರಿಕಾವನ್ನು ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇಮ್ರಾನ್ ಖಾನ್ ಹೇಳಿಕೆಗೆ ಪಾಕಿಸ್ತಾನದ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. ಪಿಎಂಎಲ್ ನ ನಾಯಕ ಖಾವಾಜ ಅಸೀಫ್ " ಇಮ್ರಾನ್ ಖಾನ್ ಒಸಾಮನನ್ನು ಹುತಾತ್ಮನೆಂದು ಕರೆದಿದ್ದಾರೆ. ಬಿನ್ ಲ್ಯಾಡನ್ ಭಯೋತ್ಪಾದನೆಯನ್ನು ನಮ್ಮ ನೆಲಕ್ಕೆ ತಂದ, ಲ್ಯಾಡನ್ ಓರ್ವ ಭಯೋತ್ಪಾದಕ ಆದರೂ ಪ್ರಧಾನಿ ಆತನನ್ನು ಹುತಾತ್ಮನೆಂದು ಕರೆಯುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ವಕ್ತಾರ ಮುಸ್ತಾಫ ನವಾಜ್ ಖೋಖರ್ ಸಹ ಇಮ್ರಾನ್ ಖಾನ್ ಅವರ ಹೇಳಿಕೆಯನ್ನು ಖಂಡಿಸಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ" ಎಂದು ಹೇಳಿದ್ದಾರೆ.

"ಒಸಾಮಾ ಬಿನ್ ಲ್ಯಾಡನ್ ನ್ನು ಹುತಾತ್ಮ ಎಂದು ಹೇಳುವ ಮೂಲಕ ಖಾನ್ ದೇಶದ ಭದ್ರತೆಗೆ ಅಪಾಯಕಾರಿಯಾಗಿ ಮಾರ್ಪಾಡಾಗಿದ್ದಾರೆ. ಒಸಾಮಾ ಬಿನ್ ಲ್ಯಾಡನ್ ಹುತಾತ್ಮನಾದರೆ, ಅಲ್-ಖೈದಾ ದಾಳಿಯಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿಗಳು, ನಾಗರಿಕರೆಲ್ಲರನ್ನೂ ಏನೆನ್ನಬೇಕು? ಎಂದು  ಮುಸ್ತಾಫ ನವಾಜ್ ಪ್ರಶ್ನಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com