ಅಮೆರಿಕ: ಮಾನವರ ಮೇಲೆ ಕೊರೋನಾ ವೈರಸ್ ಲಸಿಕೆ ಪ್ರಯೋಗ ಆರಂಭ!

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಮದ್ದು ಕಂಡು ಹಿಡಿಯುವ ಪ್ರಯತ್ನ ಸಮರೋಪಾದಿಯಲ್ಲಿ ಸಾಗಿದ್ದು, ಈ ಪೈಕಿ ಅಮೆರಿಕದ ಸಂಶೋಧಕರು ತಾವು ಕಂಡು ಹಿಡಿದಿರುವ ಲಸಿಕೆಯನ್ನು ಮಾನವರ ಮೇಲೆ ಆರಂಭಿಕ ಪ್ರಯೋಗ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಮದ್ದು ಕಂಡು ಹಿಡಿಯುವ ಪ್ರಯತ್ನ ಸಮರೋಪಾದಿಯಲ್ಲಿ ಸಾಗಿದ್ದು, ಈ ಪೈಕಿ ಅಮೆರಿಕದ ಸಂಶೋಧಕರು ತಾವು ಕಂಡು ಹಿಡಿದಿರುವ ಲಸಿಕೆಯನ್ನು ಮಾನವರ ಮೇಲೆ ಆರಂಭಿಕ ಪ್ರಯೋಗ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಮೂಲಗಶ ಪ್ರಕಾರ ಅಮೆರಿಕದ ಸಿಯಾಟೆಲ್ ನಲ್ಲಿರುವ ಕೈಸರ್ ಪರ್ಮನೆಂಟೆ ವಾಷಿಂಗ್ಟನ್ ಆರೋಗ್ಯ ಸಂಶೋಧನಾ ಸಂಸ್ಥೆ (Kaiser Permanente Washington Health Research Institute-KPWHRI) ಕೇಂದ್ರದಲ್ಲಿ ಕೊರೋನಾ ವೈರಸ್ ಲಸಿಕೆಯನ್ನು ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದೆ ಎಂದು ಹೇಳಲಾಗಿದೆ. 

ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ NIAID ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳು ಈ ಮಹತ್ತರ ಪ್ರಯೋಗಕ್ಕೆ ಆರ್ಥಿಕ ನೆರವು ನೀಡಿವೆ ಎಂದು ಹೇಳಲಾಗಿದ್ದು, 18ರಿಂದ 55 ವರ್ಷದೊಳಗಿನ 45 ಮಂದಿ ಆರೋಗ್ಯವಂತ ಸ್ವಯಂಸೇವಕರು ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಇದೇ ವಿಚಾರವಾಗಿ ನಿನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೈಟ್ ಹೌಸ್ ನಲ್ಲಿ ಹೇಳಿಕೆ ನೀಡಿದ್ದರು. ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಕಾರ್ಯದಲ್ಲಿ ಅಮೆರಿಕ ಸಂಶೋಧಕರ ಮಹತ್ತರ ಹೆಜ್ಜೆಯನ್ನಿರಿಸಿದ್ದು, ಮಾನವರ ಮೇಲೆ ಪ್ರಯೋಗ ಮಾಡುತ್ತಿದ್ದಾರೆ. ಇದು ಮಾನವ ಇತಿಹಾಸದಲ್ಲಿಯೇ ಅತಿ ವೇಗವಾಗಿ ಕಂಡು ಹಿಡಿಯಲ್ಪಟ್ಟ ಮೊದಲ ಲಸಿಕೆ ಎಂದೂ ಅವರು ಸಂಶೋಧಕರನ್ನು ಶ್ಲಾಘಿಸಿದ್ದರು.

mRNA-1273 ಲಸಿಕೆಯ ಹೆಸರು
ಇನ್ನು ಪ್ರಸ್ತುತ ಸಂಶೋಧಕರು ಕಂಡು ಹಿಡಿದಿರುವ ಈ ಲಸಿಕೆಗೆ mRNA-1273 ಎಂದು ಹೆಸರಿಡಲಾಗಿದ್ದು, ಲಸಿಕೆಯ ಪ್ರಮಾಣ ಮತ್ತು ಗುಣಮಟ್ಟದ ಕುರಿತು ಪ್ರಯೋಗದ ಬಳಿಕ ನಿರ್ಧರಿಸಲಾಗುತ್ತದೆ. ಪ್ರಸ್ತುತ ಈ ಲಸಿಕೆ ಪ್ರಾಥಮಿಕ ಹಂತದಲ್ಲಿದ್ದು, ಸೋಂಕು ಪೀಡಿತನ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸಲು ಈ ಲಸಿಕೆ ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಹೇಳಲಾಗಿದೆ. 

ಇನ್ನು ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಲ್ಲಿ ಕಳೆದ ನವೆಂಬರ್ ನಲ್ಲಿ ತನ್ನ ಪ್ರತಾಪ ಆರಂಭಿಸಿದ್ದ ಕೊರೋನಾ ವೈರಸ್ ಗೆ ಈ ವರೆಗೂ ವಿಶ್ವದ ಯಾವುದೇ ಮೂಲೆಯಲ್ಲೂ ಲಸಿಕೆ ತಯಾರಿಸಿಲ್ಲ. ನವೆಂಬರ್ ನಿಂದಲು ವಿಶ್ವಗ ಪ್ರಮುಖ ಲ್ಯಾಬ್ ಗಳಲ್ಲಿ ಕೊರೋನಾ ವೈರಸ್ ಮತ್ತು ಅದರ ಲಸಿಕೆ ಕುರಿತಂತೆ ಸಂಶೋಧನೆಗಳು ನಿರಂತರವಾಗಿ ಸಾಗುತ್ತದೆ. 

ವಿಶ್ವಾದ್ಯಂತ 7 ಸಾವಿರಕ್ಕೂ ಅಧಿಕ ಬಲಿ
ವಿಶ್ವದಾದ್ಯಂತ ಕೊರೋನಾ ವೈರಸ್'ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಮಹಾಮಾರಿಗೆ ಈ ವರೆಗೂ ಜಗತ್ತಿನಾದ್ಯಂದ ಒಟ್ಟು 7,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1,75,500ಕ್ಕೆ ಏರಿಕೆಯಾಗಿದೆ.  ವಿಶ್ವದ 145 ದೇಶಗಳಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಸೋಮವಾರ ಒಂದೇ ದಿನದಲ್ಲಿ 11,597 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. 

ಕೊರೋನಾ ಪೀಡಿತ ರಾಷ್ಟ್ರ ಚೀನಾ ಒಂದೇ ರಾಷ್ಟ್ರದಲ್ಲಿ 3,213 ಮಂದಿ ಸಾವನ್ನಪ್ಪಿದ್ದು, ಸೋಂಕು ಪೀಡಿದ ಲಕ್ಷಾಂತರ ಮಂದಿಯಲ್ಲಿ 67,490 ಮಂದಿ ಇದೀಗ ವೈರಸ್ ನಿಂದ ಗುಣಮುಖರಾಗಿದ್ದಾರೆ.  ಇಟಲಿ ರಾಷ್ಟ್ರದಲ್ಲಿ 2,158 ಮಂದಿ ಸಾವನ್ನಪ್ಪಿದ್ದರೆ, ಇರಾನ್ ರಾಷ್ಟ್ರದಲ್ಲಿ 853, ಸ್ಪೇನ್ 309, ಫ್ರಾನ್ಸ್ 127 ಮಂದಿ ಸಾವನ್ನಪ್ಪಿದ್ದಾರೆ. ಏಷ್ಯಾದಲ್ಲಿ 3,337, ಯೂರೋಪ್ 2,711, ಮಿಡ್ಲ್ ಈಸ್ಟ್ 869, ಅಮೆರಿಕಾ ಹಾಗೂ ಕೆನಡಾದಲ್ಲಿ 70, ಲ್ಯಾಟಿನ್ ಅಮೆರಿಗಾ ಹಾಗೂ ಕೆರಿಬಿಯನ್ 7 ಮಂದಿ, ಆಫ್ರಿಕಾ 8 ಮತ್ತು ಓಷಿಯಾನಿಯಾ 5 ಮಂದಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com