ಕೊರೋನಾ ವೈರಸ್: ಹೈಡ್ರಾಕ್ಸಿಕ್ಲೋರೋಕ್ವಿನ್ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಡೆ

ಮಾರಕ ಕೊರೋನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎಂದೇ ಹೇಳಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಡೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಿನೆವಾ: ಮಾರಕ ಕೊರೋನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎಂದೇ ಹೇಳಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಡೆ ನೀಡಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮದ್ದಿನಿಂದಾಗಿ ಕೊರೋನಾ ವೈರಸ್ ರೋಗಿಗಳು ಗುಣಮುಖರಾಗುವುದಕ್ಕಿಂತ ಸಾಯುವ ಅಪಾಯವೇ ಹೆಚ್ಚು ಎಂಬ ವೈದ್ಯಕೀಯ ವರದಿಯ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕಾ ಕ್ರಮವಾಗಿ ಈ ತಡೆ ನೀಡಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್‌ ಅವರು, ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವದಾದ್ಯಂತ ಸಾವಿರಾರು ಆಸ್ಪತ್ರೆಗಳು ಕ್ಲಿನಿಕಲ್‌ ಟ್ರಯಲ್‌ಗಾಗಿ ರೋಗಿಗಳನ್ನು ಆರೋಗ್ಯ  ಸಂಸ್ಥೆಯ ಕಾರ್ಯನಿರ್ವಾಹಕ ಗುಂಪಿನ  ಸಾಲಿಡಾರಿಟಿ ಟ್ರಯಲ್‌ನಲ್ಲಿ (ಒಗ್ಗಟ್ಟಿನ ಪ್ರಯೋಗ) ನೊಂದಾಯಿಸಿವೆ. ಈ ಕ್ಲಿನಿಕಲ್‌ ಪ್ರಯೋಗದಲ್ಲಿ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅಂತೆಯೇ ಹೈಡ್ರಾಕ್ಸಿಕ್ಲೋರೋಕ್ವಿನ್‌  ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಅದರ ಕ್ಲಿನಿಕಲ್‌ ಟ್ರಯಲ್‌ಗೆ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ತಂಡವು ತಾತ್ಕಾಲಿಕ ತಡೆ ನೀಡಿದೆ. ಇನ್ನುಳಿದ ಎಲ್ಲ ಪ್ರಯೋಗಗಳು ಎಂದಿನಂತೇ ನಡೆಯಲಿವೆ ಎಂದು ಅವರು ಹೇಳಿದರು.  

ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಈ ನಿರ್ಧಾರದ ಹಿಂದೆ ವೈದ್ಯಕೀಯ ವರದಿಯೊಂದು ಕಾರಣವಾಗಿದ್ದು, ಖ್ಯಾತ ಆರೋಗ್ಯ ನಿಯತಕಾಲಿಕೆ 'ದಿ ಲಾನ್ಸೆಟ್' ನಲ್ಲಿ 'ಮಲೇರಿಯಾ ರೋಗಿಗಳಿಗೆ ನೀಡುವ ಹೈಡ್ರೊಕ್ಲೋರೊಕ್ವಿನ್ ಮತ್ತು ಕ್ಲೋರೊಕ್ವಿನ್ ಮಾತ್ರೆಗಳ ಸೇವನೆಯಿಂದ ಕೋವಿಡ್–19  ರೋಗಿಗಳಿಗೆ ಯಾವುದೇ ಉಪಯೋಗವಿಲ್ಲ. ಬದಲಿಗೆ ಕೋವಿಡ್ ರೋಗಿಗಳು ಸಾವನ್ನಪ್ಪುವ ಅಪಾಯವನ್ನು ಈ ಮಾತ್ರೆಗಳು ಹೆಚ್ಚಿಸುತ್ತವೆ ಎಂದು ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ ಎಂದು  ಹೇಳಲಾಗಿದೆ.

ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್ ಗೆ ಔಷಧಿ ಕಂಡು ಹಿಡಿಯುವ ಸಲುವಾಗಿ ವಿಶ್ವಾದ್ಯಂತ ನೂರಾರು ಔಷಧ ತಯಾರಿಕಾ ಸಂಸ್ಥೆಗಳು ಸಂಶೋಧನೆಯಲ್ಲಿ ತೊಡಗಿವೆ. ತಮ್ಮ ಸಂಶೋಧನೆಗಾಗಿ ಸಾವಿರಾರು ಕೊರೋನಾ  ರೋಗಿಗಳನ್ನು ತಮ್ಮ ಸಂಶೋಧನೆಗೆ ಬಳಸಿಕೊಳ್ಳುತ್ತಿವೆ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಈ ಕಠಿಣ ಕ್ರಮ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com