ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಗೆಲುವಿನ ಸನಿಹದಲ್ಲಿ ಜೋ ಬೈಡನ್; ಕಾನೂನು ಮೊರೆ ಹೋಗುವತ್ತ ಟ್ರಂಪ್‍ ಚಿಂತನೆ!

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 ಮುಗಿದ ಒಂದು ದಿನ ಬಳಿಕ ನಿಜವಾದ ಹೋರಾಟ ಆರಂಭವಾಗಿದೆ. ಈ ಬಾರಿ ಶ್ವೇತ ಭವನದ ಚುಕ್ಕಾಣಿ ಯಾರು ಹಿಡಿಯುತ್ತಾರೆ, ಜೊ ಬೈಡನ್ ನೇತೃತ್ವದ ಡೆಮಾಕ್ರಟ್ ಪಕ್ಷ ಅಥವಾ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಎಂಬುದು ಸದ್ಯ ಇರುವ ಪ್ರಶ್ನೆಯಾಗಿದೆ.
ಜೊ ಬೈಡನ್-ಟ್ರಂಪ್
ಜೊ ಬೈಡನ್-ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 ಮುಗಿದ ಒಂದು ದಿನ ಬಳಿಕ ನಿಜವಾದ ಹೋರಾಟ ಆರಂಭವಾಗಿದೆ. ಈ ಬಾರಿ ಶ್ವೇತ ಭವನದ ಚುಕ್ಕಾಣಿ ಯಾರು ಹಿಡಿಯುತ್ತಾರೆ, ಜೊ ಬೈಡನ್ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ನೀಲಿ ಅಲೆ ಶ್ವೇತಭವನವನ್ನು ಕಂಗೊಳಿಸುತ್ತದೆಯೇ ಅಥವಾ ಡೊನಾಲ್ಡ್ ಟ್ರಂಪ್ ನೇತೃತ್ವದ ಕೆಂಪು ಬಣ್ಣದ ರಿಪಬ್ಲಿಕನ್ ಪಕ್ಷ ಶ್ವೇತಭವನದಲ್ಲಿ ಮುಂದುವರಿಯುತ್ತದೆಯೇ ಎಂಬುದು ಸದ್ಯ ಇರುವ ಪ್ರಶ್ನೆಯಾಗಿದೆ.

ಡೆಮಾಕ್ರಟಿಕ್ ಪಕ್ಷದ ಬಣ್ಣ ನೀಲಿ ಮತ್ತು ಪಕ್ಷದ ಗುರುತು ಕತ್ತೆಯಾಗಿದ್ದು, ರಿಪಬ್ಲಿಕನ್ ಪಕ್ಷದ್ದು ಕೆಂಪಾಗಿದೆ ಮತ್ತು ಪಕ್ಷದ ಚಿಹ್ನೆ ಆನೆ. 

ಅಮೆರಿಕ ಆಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಉಪಾಧ್ಯಕ್ಷ ಜೋ ಬೈಡನ್ ಪ್ರಮುಖ ಮಿಚಿಗನ್ ರಾಜ್ಯವನ್ನು ಗೆಲ್ಲುವ ಮೂಲಕ ಶ್ವೇತ ಭವನ ಪ್ರವೇಶಿಸಲು ಸನಿಹದಲ್ಲಿದ್ದಾರೆ ಎಂದು ಸಿಎನ್ಎನ್ ಮಾಧ್ಯಮ ಗುರುವಾರ ತಿಳಿಸಿದೆ.

ಜೋ ಬೈಡನ್ ಕೆಲ ಪ್ರಮುಖ ರಾಜ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದರೆ, ತಮ್ಮ ಪ್ರತಿಸ್ಪರ್ಧಿ ಹಾಗೂ ಹಾಲಿ ಅಧ್ಯಕ್ಷ ಟ್ರಂಪ್ ಕಾನೂನಿ ಮೊರೆ ಹೋಗುವತ್ತ ಚಿಂತಿಸುತ್ತಿದ್ದಾರೆ. ಬೈಡನ್ ಅಂತಿಮ ಗೆರೆ ದಾಟದಂತೆ ಪೆನ್ಸಿಲ್ವೇನಿಯಾದ ಮತ ಎಣಿಕೆಯನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ. 

ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್‍ ಗೆಲ್ಲಲೇಬೇಕಾಗಿರುವುದರಿಂದ ಅನಿಶ್ಚಿತತೆ ಹೆಚ್ಚಾಗಿದೆ. ಬುಧವಾರ ರಾತ್ರಿಯವರೆಗೆ ಅರಿಜೋನಾದಲ್ಲಿ ಹೊಸ ಕಂತಿನ ಮತ ಎಣಿಕೆಗೆ ದೇಶ ಕುತೂಹಲದಿಂದ ಕಾಯುತ್ತಿತ್ತು. ನೆವಾಡದಲ್ಲಿ ಹೊಸ ಕಂತಿನ ಫಲಿತಾಂಶಗಳನ್ನು ಗುರುವಾರ ಮಧ್ಯಾಹ್ನದವರೆಗೆ ಪ್ರಕಟಿಸುವುದಿಲ್ಲ ಎಂದು ಘೋಷಿಸಲಾಗಿದೆ. 

ಮಿಚಿಗನ್‌ ಮತ್ತು ಪೆನ್ಸಿಲ್ವೇನಿಯಾದಲ್ಲಿನ ಗೆಲುವು ಬೈಡನ್ ಗೆ ಪಶ್ಚಿಮ ಮಧ್ಯ ಪ್ರಾಂತ್ಯದಲ್ಲಿ ಮೂರನೇ ಎರಡರಷ್ಟು ಬಹುಮತ ತಂದುಕೊಟ್ಟಿದೆ. ಟ್ರಂಪ್‌ಗೆ 2016 ರಲ್ಲಿ ಅಧ್ಯಕ್ಷ ಸ್ಥಾನ ಗೆಲ್ಲುವುದಕ್ಕೆ ಇದೇ ಪ್ರಾಂತ್ಯ ಅವಕಾಶ ಮಾಡಿಕೊಟ್ಟಿತ್ತು. ನೆವಾಡಾ ಮತ್ತು ಅರಿಜೋನಾದಲ್ಲಿ ಬೈಡನ್ ಮುನ್ನಡೆ ಕಾಯ್ದುಕೊಂಡರೆ ಮುಂದಿನ ಜನವರಿಯಲ್ಲಿ ಅವರು 46 ನೇ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಪ್ರವೇಶಿಸಲು ಅಗತ್ಯ ಮತಗಳನ್ನು ಹೊಂದಿರುತ್ತಾರೆ. ಡೆಮೋಕ್ರಾಟಿಕ್ ಅಭ್ಯರ್ಥಿ ಪರವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಲಕ್ಷಾಂತರ ಮೇಲ್-ಇನ್ ಮತ್ತು ಆರಂಭಿಕ ಗೈರುಹಾಜರಿ ಮತಗಳನ್ನು ಪೆನ್ಸಿಲ್ವೇನಿಯಾದಲ್ಲಿ ಇನ್ನೂ ಎಣಿಕೆ ಮಾಡುತ್ತಿದ್ದು, ಬೈಡನ್ ಎದುರಾಳಿ ಟ್ರಂಪ್‌ರನ್ನು ಹಿಂದಿಕ್ಕುವ ಸೂಚನೆ ಇದೆ. 

ಮತ್ತೊಂದೆಡೆ ಚುನಾವಣಾ ದಿನದ ನಂತರ ಪೆನ್ಸಿಲ್ವೇನಿಯಾ ಮತಪತ್ರಗಳನ್ನು ಎಣಿಸಲು ಅವಕಾಶ ಮಾಡಿಕೊಟ್ಟ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೇಳಲು ಟ್ರಂಪ್‍ ಚುನಾವಣಾ ಪ್ರಚಾರ ತಂಡ ನ್ಯಾಯಾಲಯ ಮೆಟ್ಟಿಲೇರಲು ಯೋಚಿಸಿತ್ತು. ನ್ಯಾಯಮೂರ್ತಿಗಳು ಚುನಾವಣೆಗೆ ಮುಂಚಿತವಾಗಿ ಮೇಲ್ಮನವಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದರು. ಪ್ರಕರಣವನ್ನು ತೆಗೆದುಕೊಳ್ಳಬೇಕೆ? ಬೇಡವೇ ಎಂದು ಪರಿಗಣಿಸುತ್ತಿದ್ದಾರೆ.

ಚುನಾವಣಾ ಮತಎಣಿಕೆಯಲ್ಲಿ ಬಿಡೆನ್ 253-213 ಮುನ್ನಡೆ ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಅಭ್ಯರ್ಥಿಯು 270 ಮತಗಳನ್ನು ಪಡೆಯಬೇಕು. ಅರಿಜೋನಾ, ಜಾರ್ಜಿಯಾ, ನೆವಾಡಾ, ನಾರ್ತ್ ಕೆರೊಲಿನಾ ಮತ್ತು ಪೆನ್ಸಿಲ್ವೇನಿಯಾದಲ್ಲಿ ಬೈಡನ್ ಹೆಚ್ಚು ಮತಗಳಿಸುವ ಸಾಧ್ಯತೆ ಇದೆ. ಬುಧವಾರ ಮಧ್ಯಾಹ್ನ ಬಿಡೆನ್‍ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ, 270 ಮತಗಳನ್ನು ಗೆಲ್ಲುವ ವಿಶ್ವಾಸವಿದೆ. ಆದರೆ ಪ್ರಮುಖ ರಾಜ್ಯಗಳಲ್ಲಿ ಎಣಿಕೆ ಪೂರ್ಣಗೊಳ್ಳುವವರೆಗೆ ತಾವು ಜಯ ಘೋಷಿಸುತ್ತಿಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿನ ಹೆಚ್ಚಿನ ಪ್ರಮಾಣದ ಮತದಾನದಿಂದ ತಮಗೆ ಬೆಂಬಲ ದೊರಕಿದೆ ಎಂದು ಹೇಳಿದ್ದಾರೆ. 

ಟ್ರಂಪ್ ಬುಧವಾರ ಗೆಲುವು ಪ್ರಕಟಿಸಿದ್ದರು. ಅಕ್ರಮದಿಂದ ಮಾತ್ರ ತಮಗೆ ಅಧ್ಯಕ್ಷ ಸ್ಥಾನ ಕೈತಪ್ಪಬಹುದು ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com