ಅಮೆರಿಕದ ಅಧ್ಯಕ್ಷ ಜೋ ಬೈಡನ್- ಭಾರತ, ಮೋದಿ ಬಾಂಧವ್ಯ ಹೇಗಿದೆ ಗೊತ್ತೇ?: ನೀವು ತಿಳಿಯಬೇಕಾದ ಅಂಶಗಳು

ಅಮೆರಿಕ ಅಧ್ಯಕ್ಷೀಯ ಚುನಾವಣೆ-2020 ರಲ್ಲಿ ರಿಪಬ್ಲಿಕನ್ ಅಭ್ಯರ್ಥಿ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿರುವ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ 46 ನೇ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ- ಜೋ ಬೈಡನ್
ಪ್ರಧಾನಿ ನರೇಂದ್ರ ಮೋದಿ- ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆ-2020 ರಲ್ಲಿ ರಿಪಬ್ಲಿಕನ್ ಅಭ್ಯರ್ಥಿ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿರುವ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ 46 ನೇ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. 

ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಅವರು ಆಯ್ಕೆಯಾದರೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಹೇಗಿರಬಹುದು? ಭಾರತಕ್ಕೆ ಆಗುವ ಲಾಭ-ನಷ್ಟಗಳೇನು ಎಂಬುದರ ಲೆಕ್ಕಾಚಾರಗಳು ಅದಾಗಲೇ ಶುರುವಾಗಿಬಿಟ್ಟಿವೆ.

ಈ ಲೆಕ್ಕಾಚಾರಗಳನ್ನು ಲೆಕ್ಕ ಹಾಕುವ ಮೊದಲು ಭಾರತದೊಂದಿಗೆ ಜೋ ಬೈಡನ್ ಸಂಬಂಧ ಹೇಗಿದೆ? ಎಂಬ ಬಗ್ಗೆ ಮಾಹಿತಿ ಹೀಗಿದೆ. 

ಭಾರತದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಆಡಳಿತದ ಕಾಲಮಾನದಲ್ಲಿ, ಅಮೆರಿಕದಲ್ಲಿ ಆಯ್ಕೆಯಾಗಿರುವ ಮೂರನೇ ಅಧ್ಯಕ್ಷ ಜೋ ಬೈಡನ್! ಅಷ್ಟೇ ಅಲ್ಲ ಜೋ ಬೈಡನ್ ಅಮೆರಿಕದ ಉಪಾಧ್ಯಕ್ಷರಾಗಿ ಬರಾಕ್ ಒಬಾಮ ಅವಧಿಯಲ್ಲಿ ಕಾರ್ಯನಿರ್ವಹಿಸಿ ಅನುಭವವುಳ್ಳವರು. ತೀರಾ ಇತ್ತೀಚಿನ ಘಟನೆಗಳನ್ನು ಉದಾಹರಣೆಯಾಗಿ ನೀಡಬಹುದಾದರೆ, ಬರಾಕ್ ಒಬಾಮ ಭಾರತಕ್ಕೆ ಆಗಮಿಸಿದಾಗ ಹಾಗೂ ಮೋದಿ ಮೊದಲ ಅವಧಿಗೆ ಪ್ರಧಾನಿಯಾದ ಹೊಸತರಲ್ಲಿ ಅಮೆರಿಕಾಗೆ ಭೇಟಿ ವೇಳೆ ಮೋದಿ-ಬೈಡನ್ ನಡುವೆ ಸೌಹಾರ್ದ ಭೇಟಿ ಇದ್ದೇ ಇತ್ತು. 

2013 ರಲ್ಲಿ ಮುಂಬೈ ಗೆ ಆಗಮಿಸಿದ್ದ ಜೋ ಬೈಡನ್ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಭಾರತ-ಅಮೆರಿಕ ಪಾಲುದಾರಿಕೆ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು.

ಅಷ್ಟೇ ಅಲ್ಲದೇ ಭಾರತದ ಅಧಿಕಾರಿಗಳೊಂದಿಗೂ ಸಾಕಷ್ಟು ವ್ಯವಹರಿಸಿ ತಿಳಿದಿರುವ ಬೈಡನ್ ಗೆ ಭಾರತ ಹಾಗೂ ಇಲ್ಲಿನ ಅಂಶಗಳು ಹೊಸತೇನು ಅಲ್ಲ. ಈ ಹಿಂದೆ 2008 ರಲ್ಲಿ ಅಮೆರಿಕ-ಭಾರತ ನ್ಯೂಕ್ಲಿಯರ್ ಅಗ್ರಿಮೆಂಟ್ ನಡೆದಾಗ ಜೋ ಬೈಡನ್ ಸೆನೆಟ್ ನ ವಿದೇಶಾಂಗ ಸಂಬಂಧಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಭಾರತ ಮೊದಲ ಬಾರಿಗೆ  ಅಮೆರಿಕ ನಿರ್ಮಾಣದ ವಾರ್ ಶಿಪ್- ಐಎನ್ಎಸ್ ಜಲಾಶ್ವವನ್ನು ಖರೀದಿಸಿದಾಗ 2005 ರ ನೌಕಾ ಹಡಗುಗಳ ವರ್ಗಾವಣೆ ಕಾಯ್ದೆಯಲ್ಲಿ ಕೋ-ಸ್ಪಾನ್ಸರ್ ಆಗಿಯೂ ಜೋ ಬೈಡನ್ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಭಾರತದ ನಾಯಕತ್ವ ಹಾಗೂ ಅಧಿಕಾರಿಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.

ರಾಜತಾಂತ್ರಿಕ ವಿಭಾಗದಲ್ಲಿ ಜೋ ಬೈಡನ್ ಅವರಿಗೆ 4 ದಶಕಗಳ ಅನುಭವ ಈಗ ಅಧ್ಯಕ್ಷರಾದ ನಂತರ ಆಡಳಿತದಲ್ಲಿ ಸಹಕಾರಿಯಾಗಲಿರುವುದು ಸಕಾರಾತ್ಮಕ ಅಂಶ. 

ಬೈಡನ್ ಬರಾಕ್ ಒಬಾಮ ಅವಧಿಯಲ್ಲಿದ್ದಂತೆಯೇ ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವನ್ನಾಗಿ (ಎಂಡಿಪಿ) ಮುಂದುವರೆಸುವುದರ ಸಾಧ್ಯತೆ ಅತಿ ಹೆಚ್ಚಾಗಿದೆ.  ಇದರಿಂದಾಗಿ ಭಾರತ- ಅಮೆರಿಕದ ದ್ವಿಪಕ್ಷೀಯ ಸಂಬಂಧದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದ್ದು, ಸ್ಟ್ರಾಟೆಜಿಕ್ ಟ್ರೇಡ್ ಆಥರೈಸೇಷನ್-1 ವರ್ಗದಲ್ಲಿ ಭಾರತವನ್ನು ಗುರುತಿಸುವುದು ಸೂಕ್ಷ್ಮ ತಂತ್ರಜ್ಞಾನಗಳ ವರ್ಗಾವಣೆಗೆ ಅಗತ್ಯವಿರುವ ಕ್ರಮಗಳು ಮುಂದುವರೆಯಬಹುದು.

ಹೆಚ್-1 ಬಿ ವೀಸಾದಲ್ಲಿ ಟ್ರಂಪ್ ಆಡಳಿತ ತೀರಾ ಹಿಂಸೆಯಾಗುವಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಆದರೆ ಜೋ ಬೈಡನ್ ಅವರ ಆಡಳಿತ ಹೆಚ್-1 ಬಿ ವೀಸಾ ಸುಧಾರಣೆಗಳಿಗೆ ಕೈ ಹಾಕಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಉಳಿದಂತೆ ಕಾಶ್ಮೀರ ವಿಚಾರ, ಸಿಎಎ, ಮಾನವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಕೆಲವು ವಿಷಯಗಳಲ್ಲಿ ಅಮೆರಿಕದೊಂದಿಗೆ ತಿಕ್ಕಾಟವಿದ್ದು ಜೋ ಬೈಡನ್ ಭಾರತಕ್ಕೆ ಸ್ವಲ್ಪ ಅಡ್ಡಿಯಾಗಬಹುದು. ಇವೆಲ್ಲವೂ ಸಾಮಾನ್ಯವಾಗಿ ಅಮೆರಿಕ-ಭಾರತದ ನಡುವೆ ಕಂಡುಬರುವ ಭಿನ್ನಾಭಿಪ್ರಾಯದ ಸಮಸ್ಯೆಗಳಾಗಿವೆ. ಈ ಹಿಂದೆ ಕಾಶ್ಮೀರ ಸೇರಿದಂತೆ ಟ್ರಂಪ್ ಆಡಳಿತ ಭಾರತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷಿಸಿದ್ದ ಪ್ರಶ್ನೆಗಳನ್ನು ಜೋ ಬೈಡನ್ ಆಡಳಿತ ಕಿರಿಕಿರಿ ಉಂಟು ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಮೋದಿ ಸರ್ಕಾರ ಆರ್ಟಿಕಲ್ 370 ರದ್ದು ಮಾಡಿದ್ದಾಗ ಡೆಮಾಕ್ರಾಟ್ಸ್ ಗಳು ಟ್ರಂಪ್ ಆಡಳಿತದ ನಿರ್ಲಕ್ಷ್ಯ ಮನಸ್ಥಿತಿಯನ್ನು ಟೀಕಿಸಿ ಪ್ರಶ್ನಿಸಿದ್ದರು. ಜೋ ಬೈಡನ್ ನ ಮುಸ್ಲಿಂ ಅಮೆರಿಕನ್ ಸಮುದಾಯಕ್ಕಾಗಿ ಇದ್ದ ಕ್ಯಾಂಪೇನ್ ಅಜೆಂಡಾದಲ್ಲಿ, ಕಾಶ್ಮೀರದ ಮುಸ್ಲಿಮರ ಪರಿಸ್ಥಿತಿಯನ್ನು ಮಯನ್ಮಾರ್ ನ ರೋಹಿಂಗ್ಯಾ ಹಾಗೂ ಚೀನಾದ ಉಯ್ಘರ್ ಗಳೊಂದಿಗೆ ಹೋಲಿಕೆ ಮಾಡಲಾಗಿತ್ತು.

ಆದರೆ ಸಧ್ಯಕ್ಕೆ ಜೋ ಬೈಡನ್ ಗೆ ಕೋವಿಡ್-19 ನಿಭಾಯಿಸುವುದು ಹಾಗೂ ತಮ್ಮದೇ ರಾಷ್ಟ್ರದ ಆರ್ಥಿಕ-ಉದ್ಯೋಗ ಸುಧಾರಣೆಗಳನ್ನು ಜಾರಿಗೆ ತರುವ ಬಹುದೊಡ್ಡ ಜವಾಬ್ದಾರಿ ಹೆಗಲ ಮೇಲಿದ್ದು, ಭಿನ್ನಾಭಿಪ್ರಾಯಗಳನ್ನು ಸದ್ಯದ ಮಟ್ಟಿಗೆ ಪಕ್ಕಕ್ಕೆ ಇಟ್ಟು, ಸಮಾನ ಅಂಶಗಳತ್ತ ಗಮನ ಹರಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ ಹೇಳಿದಂತೆ ಜೋ ಬೈಡನ್ ಭಾರತದೊಂದಿಗೆ ಸಾಕಷ್ಟು ವ್ಯವಹರಿಸಿರುವ ನಿದರ್ಶನಗಳಿದ್ದು, ನುರಿತ ರಾಜಕಾರಣಿ, ರಾಜತಾಂತ್ರಿಕ ಅನುಭವಗಳನ್ನು ಹೊಂದಿದ್ದಾರೆ. ಹೀಗಾಗಿ ಟ್ರಂಪ್ ಸೋತರೆ ಭಾರತದ ಪರ, ನೀತಿಗಳಲ್ಲಿ ಭಾರತದ ಈಗಿನ ಆಡಳಿತಕ್ಕೆ ಸಮಾನ ಮನಸ್ಕನ್ನೆನ್ನುವಂತೆ ಬಿಂಬಿಸಲಾಗಿದ್ದ ಅಧ್ಯಕ್ಷನೋರ್ವ ನಿರ್ಗಮಿಸುತ್ತಿದ್ದಾರೆ. ಜೋ ಬೈಡನ್ ಪಾಕಿಸ್ತಾನದ ಪರವಾಗಿರುವ ವ್ಯಕ್ತಿ, ಇವರು ಅಧ್ಯಕ್ಷರಾದರೆ ಪಾಕ್ ಪರ ನಿಲುವು ತಳೆಯುತ್ತಾರೆ,  ಭಾರತಕ್ಕೇನೋ ನಷ್ಟವಾಗುವಂತಹ ಸನ್ನಿವೇಶ ನಿರ್ಮಾಣವಾಗಿಬಿಡುತ್ತದೆ ಎಂಬಂತಹ ಸ್ಥಿತಿ ಸದ್ಯಕ್ಕಂತೂ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com