'ಫಲಿತಾಂಶ ಮುಂದಿನ ವಾರ ಬರಲು ಆರಂಭವಾಗುತ್ತದೆ, ನಾವು ಗೆದ್ದೇ ಗೆಲ್ಲುತ್ತೇವೆ': ಪಟ್ಟು ಬಿಡದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದು ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ಶ್ವೇತಭವನದ ಗದ್ದುಗೆ ಏರಲು ಸಿದ್ಧವಾಗಿರುವಾಗಲೇ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹಠ ಮುಂದುವರಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದು ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ಶ್ವೇತಭವನದ ಗದ್ದುಗೆ ಏರಲು ಸಿದ್ಧವಾಗಿರುವಾಗಲೇ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹಠ ಮುಂದುವರಿಸಿದ್ದಾರೆ.

ನಿನ್ನೆ ಶ್ವೇತಭವನದಲ್ಲಿ ಮಾತನಾಡಿದ ಅವರು, ತಾವು ಗೆದ್ದುಬರಲಿದ್ದು ಜೊ ಬೈಡನ್ ಅವರು ಬದಲಾವಣೆ ಮಾಡಲು ಹೊರಟಿರುವ ಸಿದ್ಧತೆಗಳಿಗೆ ತಡೆಯೊಡ್ಡುವುದಾಗಿ ಹೇಳಿದ್ದಾರೆ. 

ನಾವು ಖಂಡಿತಾ ಗೆಲ್ಲುತ್ತೇವೆ, ಮುಂದಿನ ವಾರ ಫಲಿತಾಂಶ ಹೊರಬೀಳಲು ಆರಂಭವಾಗುತ್ತದೆ. ಅಮೆರಿಕವನ್ನು ಮತ್ತೆ ದೊಡ್ಡ ರಾಷ್ಟ್ರವನ್ನಾಗಿ ಮಾಡೋಣ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ತಾವು ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ, ಬೈಡನ್ ಅವರು ಗೆದ್ದ ರಾಜ್ಯಗಳಲ್ಲಿನ ಮತದಾನ, ಮತ ಎಣಿಕೆ ವಿರುದ್ಧ ಕೋರ್ಟ್ ಗೆ ಮೊರೆ ಹೋಗಿ ಇದರಲ್ಲಿ ಜಯ ಗಳಿಸುತ್ತೇನೆ ಎಂಬ ವಾದ ಟ್ರಂಪ್ ಅವರದ್ದು. 

ಮೊನ್ನೆ ನವೆಂಬರ್ 3ರಂದು ಚುನಾವಣೆ ನಡೆದು ಮತ ಎಣಿಕೆಯಾಗಿ ಫಲಿತಾಂಶ ಹೊರಬಂದ ನಂತರ ಟ್ರಂಪ್ ಅವರು ತಮ್ಮ ಗಾಲ್ಫ್ ಕೋರ್ಸ್ ನಲ್ಲಿ ಹೋಗಿ ಎರಡು ಬಾರಿ ಆಟವಾಡಿದ್ದು ಬಿಟ್ಟರೆ ಹೊರಗೆ ಕಾಣಿಸಿಕೊಂಡಿದ್ದು ಅಪರೂಪ. ಮಾಧ್ಯಮಗಳ ಜೊತೆ ಕೂಡ ಮಾತನಾಡಿಲ್ಲ. ಕೋವಿಡ್-19 ಸಾಂಕ್ರಾಮಿಕದ ಬಗ್ಗೆ ಏನಾಗುತ್ತಿದೆ ಎಂದು ಕೂಡ ಹೇಳುತ್ತಿಲ್ಲ.

ಅದರ ಬದಲು ಟ್ರಂಪ್ ಅವರು ಟ್ವೀಟ್ ಮಾಡುವುದರಲ್ಲಿಯೇ ಹೆಚ್ಚು ಸಮಯ ಕಳೆದಿದ್ದಾರೆ. 

ಸಾಮಾನ್ಯವಾಗಿ ನೂತನ ಅಧ್ಯಕ್ಷರ ಘೋಷಣೆಯಾದಾಗ ನಿರ್ಗಮಿತ ಅಧ್ಯಕ್ಷರು ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿ ವ್ಯವಸ್ಥೆ ಬಗ್ಗೆ ತೋರಿಸಿಕೊಡಬೇಕು, ಔಪಚಾರಿಕವಾಗಿ ಶುಭಾಶಯ ತಿಳಿಸಬೇಕಾಗುತ್ತದೆ. ಆದರೆ ಅದಾವ ಕೆಲಸಗಳನ್ನು ಕೂಡ ಡೊನಾಲ್ಡ್ ಟ್ರಂಪ್ ಮಾಡಿಲ್ಲ. ಜೊ ಬೈಡನ್ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿಲ್ಲ. ಮುಂಬರುವ ಅಧ್ಯಕ್ಷರಿಗೆ ಸಿಗುವ ಯಾವ ಸೌಲಭ್ಯಗಳು ಕೂಡ, ಅದರಲ್ಲೂ ಬದಲಾವಣೆ ರೂಪಾಂತರ ನಿಧಿ ಜೊ ಬೈಡನ್ ಅವರಿಗೆ ಸಿಗದಂತೆ ಡೊನಾಲ್ಡ್ ಟ್ರಂಪ್ ಅವರು ತಡೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ರೂಪಾಂತರ ನಿಧಿ ಆಡಳಿತದ ಸಾಮಾನ್ಯ ಸೇವೆಗಳ ಮುಖ್ಯಸ್ಥ ಎಮಿಲಿ ಮುರ್ಫಿ ಅವರ ನಿಯಂತ್ರಣದಲ್ಲಿರುತ್ತದೆ, ಅವರನ್ನು ನೇಮಕ ಮಾಡಿದ್ದು ಡೊನಾಲ್ಡ್ ಟ್ರಂಪ್ ಅವರು. ಜೊ ಬೈಡನ್ ಅವರಿಗೆ ಪ್ಯಾಕೇಜ್ ಗಳನ್ನು ನೀಡದಂತೆ ಟ್ರಂಪ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಜೊ ಬೈಡನ್ ಶ್ವೇತಭವನದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಜನವರಿ 20ರಂದು, ಇನ್ನು 71 ದಿನಗಳು ಇವೆ, ಅಷ್ಟರೊಳಗೆ ಡೊನಾಲ್ಡ್ ಟ್ರಂಪ್ ಯಾವಾಗ ನಿರ್ಗಮಿಸುತ್ತಾರೆ ಎಂದು ಕಾದುನೋಡಬೇಕಿದೆ. ಅವರ ಮನವೊಲಿಸುವ ಪ್ರಭಾವಶಾಲಿ ಯಾರಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ಈ ಮಧ್ಯೆ, ಡೊನಾಲ್ಡ್ ಟ್ರಂಪ್ ಪುತ್ರ ಎರಿಕ್ ಟ್ರಂಪ್, ಮಿನ್ನಸೊಟಾ ಜನ ಮನೆಯಿಂದ ಹೊರಬಂದು ಮತ ಹಾಕಿ ಎಂದು ಟ್ವೀಟ್ ಮಾಡಿದ್ದು ಭಾರೀ ವೈರಲ್ ಆಗಿದೆ. ಆಗಿರುವ ಪ್ರಮಾದ ಗೊತ್ತಾಗಿ ನಿಮಿಷಗಳಲ್ಲಿಯೇ ಅವರು ಟ್ವೀಟ್ ನ್ನು ಡಿಲೀಟ್ ಮಾಡಿದ್ದರೂ ಕೂಡ ಅದರ ಸ್ಕ್ರೀನ್ ಶಾಟ್ ತೆಗೆದವರು ಅದನ್ನು ಪೋಸ್ಟ್ ಮಾಡುತ್ತಾ ತರಹೇವಾರಿ ಕಮೆಂಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com