ಚೀನಾ ನಿಬಂಧನೆಗಳ ಪ್ರಕಾರ ನಡೆದುಕೊಳ್ಳಲಿ, ಅಮೆರಿಕ ಮತ್ತೆ ವಿಶ್ವ ಆರೋಗ್ಯ ಸಂಸ್ಥೆಯನ್ನು ಸೇರಲಿದೆ: ಜೋ ಬೈಡನ್
ಅಮೆರಿಕ ಮತ್ತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಓ)ಯನ್ನು ಸೇರಲಿದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರು ಶುಕ್ರವಾರ ಘೋಷಿಸಿದ್ದಾರೆ.
Published: 20th November 2020 04:10 PM | Last Updated: 20th November 2020 04:10 PM | A+A A-

ಜೋ ಬೈಡನ್ (ಸಂಗ್ರಹ ಚಿತ್ರ)
ವಾಷಿಂಗ್ಟನ್: ಅಮೆರಿಕ ಮತ್ತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಓ)ಯನ್ನು ಸೇರಲಿದೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ದೇಶ ಚೀನಾ, ನಿಬಂಧನೆಗಳ ಪ್ರಕಾರ ನಡೆದುಕೊಳ್ಳುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ ಎಂದು ಬೈಡನ್ ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದ ಭಾಗವಾಗಿ ಚೀನಾ ಕುರಿತು ಬೈಡನ್ ನೀಡಿದ್ದ ಹೇಳಿಕೆ ಕುರಿತು ಪ್ರಶ್ನಿಸಿದಾಗ ಈ ಉತ್ತರ ನೀಡಿದ್ದಾರೆ. ಆದರೆ ಕೊರೋನಾ ವೈರಸ್ ಬಗ್ಗೆ ಚೀನಾ ವಿಶ್ವ ಆರೋಗ್ಯ ಸಂಸ್ಥೆಗೆ ನಿಖರವಾದ ಮಾಹಿತಿ ನೀಡಲಿಲ್ಲ, ಆ ದೇಶ ಹೇಳಿದಂತೆ ವಿಶ್ವ ಆರೋಗ್ಯ ಸಂಸ್ಥೆ ನಡೆದುಕೊಂಡಿದೆ ಎಂದು ಆರೋಪಿಸಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಂಸ್ಥೆಯೊಂದಿಗಿನ ಅಮೆರಿಕ ಸಂಬಂಧವನ್ನು ಕಡಿದುಕೊಂಡಿದ್ದರು.
ಚೀನಾವನ್ನು ಶಿಕ್ಷಿಸುವುದು ದೊಡ್ಡ ವಿಷಯವಲ್ಲ, ನಿಬಂಧನೆಗಳ ಪ್ರಕಾರ ನಡೆದುಕೊಳ್ಳಬೇಕು ಎಂಬುದನ್ನು ಆ ದೇಶಕ್ಕೆ ಅರ್ಥವಾಗುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ಬೈಡನ್ ಹೇಳಿದ್ದಾರೆ.
ನಾವು ಅಧಿಕಾರವಹಿಸಿಕೊಂಡ ಮೊದಲ ದಿನ ವಿಶ್ವ ಆರೋಗ್ಯ ಸಂಸ್ಥೆಗೆ ಮರಳುತ್ತೇವೆ. ಅದರಲ್ಲಿ ಸುಧಾರಣೆಗಳನ್ನು ಕೈಗೊಳ್ಳುವ ಅವಶ್ಯಕತೆಯಿದೆ. ನಾವು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೂ ಮತ್ತೆ ಸೇರುತ್ತೇವೆ. ಅಮೆರಿಕ ಹಾಗೂ ಇತರೆ ದೇಶಗಳು ಒಗ್ಗೂಡಿ ಸಮಸ್ಯೆ ಎದುರಿಸಬೇಕಿದೆ ಎಂದು ಗವರ್ನರ್ ಗಳೊಂದಿಗೆ ನಡೆದ ಸಮಾವೇಶದಲ್ಲಿ ಜೋ ಬೈಡನ್ ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಅಮೆರಿಕಾ -ಚೀನಾ ಸಂಬಂಧಗಳು ತೀವ್ರವಾಗಿ ಬಿಗಡಾಯಿಸಿವೆ. ವ್ಯಾಪಾರ ಯುದ್ಧ ಹಾಗೂ ಕೊರೋನಾ ವೈರಸ್ ಉಭಯ ದೇಶಗಳ ನಡುವೆ ಪ್ರಮುಖ ಸಮಸ್ಯೆಗಳಾಗಿ ಬದಲಾಗಿವೆ. ಕೊರೋನಾ 'ಚೀನಾ ವೈರಸ್' ಎಂದು ಟ್ರಂಪ್ ಪದೇ ಪದೇ ಟೀಕಿಸಿ ಚೀನಾ ವಿರುದ್ದ ಅಸಮಧಾನ ವ್ಯಕ್ತಪಡಿಸಿದ ಸಂಗತಿ ಎಲ್ಲರಿಗೂ ತಿಳಿದಿದೆ.