ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಿಡುಗಡೆಗೆ ಯಾವುದೇ ಒತ್ತಡವಿರಲಿಲ್ಲ: ಪಾಕಿಸ್ತಾನ
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆ ಮಾಡಲು ಯಾವುದೇ ಒತ್ತಡಗಳಿರಲಿಲ್ಲ ಎಂದು ಪಾಕಿಸ್ತಾನ ಹೇಳಿದೆ.
Published: 30th October 2020 08:37 AM | Last Updated: 30th October 2020 08:46 AM | A+A A-

ಪಾಕಿಸ್ತಾನದಿಂದ ಬಿಡುಗಡೆಗೊಂಡು ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಬಂದಿದ್ದ ಸಂದರ್ಭ
ಇಸ್ಲಾಮಾಬಾದ್: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆ ಮಾಡಲು ಯಾವುದೇ ಒತ್ತಡಗಳಿರಲಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಉನ್ನತ ಮಟ್ಟದ ಸಭೆಯೊಂದರಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಸರ್ಕಾರಕ್ಕೆ ಪರಿಪರಿಯಾಗಿ ಮನವಿ ಮಾಡಿ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆ ಮಾಡುವಂತೆ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಮೇಲೆ ದಾಳಿ ಮಾಡಬಹುದು ಎಂದು ಎಚ್ಚರಿಕೆ ನೀಡಿದ್ದರು, ಈ ಸಂದರ್ಭದಲ್ಲಿ ಪಾಕ್ ಸೇನಾ ಮುಖ್ಯಸ್ಥ ವಿಪರೀತ ನಡುಗಿ ಹೋಗಿದ್ದರು ಎಂದು ಅಲ್ಲಿನ ಸಂಸದ ಅಯಾಝ್ ಸಾದಿಕ್ ಹೇಳಿರುವುದು ವ್ಯಾಪಕ ಸುದ್ದಿಯಾಗಿದೆ.
ಸಾದಿಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಝಾಹಿದ್ ಹಫೀಝ್ ಚೌಧರಿ, ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಗೆ ಪಾಕಿಸ್ತಾನದ ಮೇಲೆ ಯಾವುದೇ ರೀತಿಯ ಒತ್ತಡಗಳಿರಲಿಲ್ಲ. ಶಾಂತಿ ಸೌಹಾರ್ದತೆಯ ದ್ಯೋತಕವಾಗಿ ಪಾಕಿಸ್ತಾನ ಸರ್ಕಾರ ಅಭಿನಂದನ್ ಬಿಡುಗಡೆಯ ಬಗ್ಗೆ ತೀರ್ಮಾನಿಸಿತು, ಅದನ್ನು ಅಂತಾರಾಷ್ಟ್ರೀಯ ಸಮುದಾಯ ಶ್ಲಾಘಿಸಿದೆ ಕೂಡ ಎಂದರು.
ಹಣಕಾಸು ಕಾರ್ಯಪಡೆ ಬಗ್ಗೆ ಮಾತನಾಡಿದ ಅವರು, ಜಾಗತಿಕ ಉಗ್ರ ಹಣಕಾಸು ಮತ್ತು ಅಕ್ರಮ ಹಣ ಸಾಗಣೆಯ ಕಾವಲು ಕಾಯುತ್ತಿರುವ ಸಂಸ್ಥೆಯ ತಾಂತ್ರಿಕ ಪ್ರಕ್ರಿಯೆಯನ್ನು ರಾಜಕೀಯಗೊಳಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಆಪಾದಿಸಿದ್ದಾರೆ.