ಗಲ್ಲುಶಿಕ್ಷೆ ಪ್ರಶ್ನಿಸಲು ಕುಲಭೂಷಣ್ ಜಾಧವ್ ಗೆ ಮತ್ತೆ 4 ತಿಂಗಳ ಕಾಲಾವಕಾಶ; ಸುಗ್ರೀವಾಜ್ಞೆಗೆ ಪಾಕ್ ಸಂಸತ್ತು ಅನುಮೋದನೆ

ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಧಿಕಾರಿ ಕುಲಭೂಷಣ್ ಜಾಧವ್ ತಮ್ಮ ವಿರುದ್ಧದ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಮತ್ತೆ ನಾಲ್ಕು ತಿಂಗಳ ಕಾಲಾವಕಾಶ ನೀಡುವ ಸುಗ್ರೀವಾಜ್ಞೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ. 
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಧಿಕಾರಿ ಕುಲಭೂಷಣ್ ಜಾಧವ್ ತಮ್ಮ ವಿರುದ್ಧದ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಮತ್ತೆ ನಾಲ್ಕು ತಿಂಗಳ ಕಾಲಾವಕಾಶ ನೀಡುವ ಸುಗ್ರೀವಾಜ್ಞೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ. 

ಈ ಹಿಂದೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗಕ್ಕೀಡಾಗಿದ್ದ ಪಾಕಿಸ್ತಾನ ಕುಲಭೂಷಣ್ ಜಾಧವ್ ಗೆ ರಾಯಭಾರ ಕಚೇರಿಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಮತ್ತು ತಮಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಬೇಕು ಎಂದು ಆದೇಶ ನೀಡಿತ್ತು. ಈ ಆದೇಶದ  ಅನ್ವಯ ಪಾಕಿಸ್ತಾನ ಸಂಸತ್ ಇದೀಗ ಕುಲಭೂಷಣ್ ಜಾಧವ್ ಗೆ ಗಲ್ಲು ಶಿಕ್ಷೆ ಪ್ರಶ್ನಿಸುವ ಅರ್ಜಿ ಸಲ್ಲಿಕೆ ಮಾಡಲು 4 ತಿಂಗಳ ಕಾಲವಕಾಶ ನೀಡಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

ಈ ಹಿಂದೆ ಮೇ ತಿಂಗಳಲ್ಲಿ ಪ್ರಕಟವಾದ ಅಂತಾರಾಷ್ಟ್ರೀಯ ನ್ಯಾಯಾಲಯ (ವಿಮರ್ಶೆ ಮತ್ತು ಮರುಪರಿಶೀಲನೆ) ಸುಗ್ರೀವಾಜ್ಞೆಯ ಅವಧಿ ಇದೇ ಸೆಪ್ಟೆಂಬರ್ 17 ರಂದು ಮುಕ್ತಾಯಗೊಳ್ಳಲಿದೆ. ಆದರೆ ಪಾಕಿಸ್ತಾನದ ಸಂಸತ್ ಧ್ವನಿ ಮತದ ಮೂಲಕ ಈ ಸುಗ್ರೀವಾಜ್ಞೆಯನ್ನು ನಾಲ್ಕು ತಿಂಗಳ ಅವಧಿಗೆ ವಿಸ್ತರಿಸಿದೆ. 

ಈ ಹಿಂದೆ ಕುಲಭೂಷಣ್‌ ಜಾಧವ್‌ ಪರ ವಾದ ಮಂಡಿಸುವುದಕ್ಕಾಗಿ ವಕೀಲರನ್ನು ನೇಮಕ ಮಾಡಿಕೊಳ್ಳಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಮಾಡುವ ಕುರಿತು  ಭಾರತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪಾಕಿಸ್ತಾನ ಹೇಳಿತ್ತು. ರಾಜತಾಂತ್ರಿಕ ಮಾರ್ಗದ ಮೂಲಕ ಕುಲಭೂಷಣ್ ಜಾಧವ್ ಪರ ವಕೀಲರ ನೇಮಕ ಮಾಡುವಂತೆ ಭಾರತಕ್ಕೆ ಸಂದೇಶ ರವಾನಿಸಲಾಗಿತ್ತು. ಆದರೆ, ಈ ವರೆಗೂ ಭಾರತದಿಂದ ಯಾವುದೇ ಪ್ರತಿಕ್ರಿಯೆಗಳೂ ಬಂದಿಲ್ಲ ಎಂದು ಪಾಕಿಸ್ತಾನ  ವಿದೇಶಾಂಗ ಕಚೇರಿಯ ವಕ್ತಾರ ಜಾಹಿದ್ ಹಫೀಜ್ ಚೌಧರಿ ಹೇಳಿದ್ದರು. 

ಪಾಕಿಸ್ತಾನದಲ್ಲಿ ಗೂಢಚಾರಿಕೆ ಮತ್ತು ಭಯೋತ್ಪಾದನೆ ನಡೆಸಿದ ಆರೋಪದ ಮೇರೆಗೆ 2017ರಲ್ಲಿ ಪಾಕ್ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್ ನ ಮೊರೆ ಹೋಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com