ಅನ್ಯ ದೇಶಗಳೊಂದಿಗೆ ಯುದ್ಧ ಸಾರುವ, ಭೂಪ್ರದೇಶ ವಿಸ್ತರಿಸುವ ಯಾವುದೇ ಉದ್ದೇಶ ಚೀನಾಗೆ ಇಲ್ಲ: ಕ್ಸಿ ಜಿನ್ ಪಿಂಗ್

ಚೀನಾ ಯಾವತ್ತಿಗೂ ಬೇರೆ ದೇಶಗಳೊಂದಿಗೆ ಯುದ್ಧ ಸಾರಲು ಬಯಸುವುದಿಲ್ಲ ಮತ್ತು ತನ್ನ ಪ್ರಾಬಲ್ಯ ಸ್ಥಾಪಿಸಲು, ಭೂ ಪ್ರದೇಶವನ್ನು ವಿಸ್ತರಿಸಲು, ಪ್ರಭಾವ ಮೆರೆಯಲು ನೋಡುವುದಿಲ್ಲ ಎಂದು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ಕ್ಸಿ ಜಿನ್ ಪಿಂಗ್
ಕ್ಸಿ ಜಿನ್ ಪಿಂಗ್

ಯುನೈಟೆಡ್ ನೇಷನ್ಸ್: ಚೀನಾ ಯಾವತ್ತಿಗೂ ಬೇರೆ ದೇಶಗಳೊಂದಿಗೆ ಯುದ್ಧ ಸಾರಲು ಬಯಸುವುದಿಲ್ಲ ಮತ್ತು ತನ್ನ ಪ್ರಾಬಲ್ಯ ಸ್ಥಾಪಿಸಲು, ಭೂ ಪ್ರದೇಶವನ್ನು ವಿಸ್ತರಿಸಲು, ಪ್ರಭಾವ ಮೆರೆಯಲು ನೋಡುವುದಿಲ್ಲ ಎಂದು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.

ಬೇರೆ ದೇಶಗಳೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆ, ಸಂಧಾನಗಳ ಮೂಲಕವೇ ಬಗೆಹರಿಸಲು ಚೀನಾ ನೋಡುತ್ತದೆ ಎಂದು ಹೇಳಿದ್ದಾರೆ. ಪೂರ್ವ ಲಡಾಕ್ ನಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಭಾರತ-ಚೀನಾ ಸೇನೆ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಉದ್ನಿಗ್ನ ಸ್ಥಿತಿ, ಕೇಳಿಬರುತ್ತಿರುವ ಅಭಿಪ್ರಾಯಗಳಿಗೆ ಅಲ್ಲಿನ ಅಧ್ಯಕ್ಷರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದ 75ನೇ ಸಭೆಯನ್ನುದ್ದೇಶಿಸಿ ನಿನ್ನೆ ರೆಕಾರ್ಡ್ ವಿಡಿಯೊ ಸಂದೇಶದಲ್ಲಿ ಮಾತನಾಡಿದ ಅವರು, ದೇಶಗಳ ಮಧ್ಯೆ ಭಿನ್ನಾಭಿಪ್ರಾಯವನ್ನು ತಗ್ಗಿಸಿ ವಿವಾದವನ್ನು ಶಾಂತಿ, ಸಂಧಾನ ಮಾತುಕತೆಗಳ ಮೂಲಕ ಬಗೆಹರಿಸಲು ನಾವು ಬಯಸುತ್ತೇವೆ ಎಂದರು.

ಮೇ 5ರ ನಂತರ ಪೂರ್ವ ಲಡಾಕ್ ನ ಗಡಿಯಲ್ಲಿ ಚೀನಾ ಸೇನೆ ನಿಲುಗಡೆಯಾದ ನಂತರ ಭಾರತೀಯ ಸೇನೆಯನ್ನು ಕೂಡ ಅಲ್ಲಿ ನಿಯೋಜಿಸಲಾಯಿತು. ನಂತರ ನಡೆದ ಕದನದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿ ಚೀನಾದ ಕಡೆಯ ಯೋಧರು ಕೂಡ ಅಪಾರ ಸಾವು ನೋವು ಕಂಡಿದ್ದರು. ಈ ಬೆಳವಣಿಗೆ ಬಳಿಕ ಜುಲೈ 4ರಂದು ಲಡಾಕ್ ಗೆ ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಭೇಟಿ ನೀಡಿದ್ದರು.

ಆ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ವಿಸ್ತರಣೆಯ ಯುಗ ಮುಗಿಯಿತು, ತಮ್ಮ ಭೂಪ್ರದೇಶವನ್ನು ವಿಸ್ತರಿಸಲು ನೋಡಿದವರು ಇತಿಹಾಸದಲ್ಲಿ ಅಳಿದುಹೋಗಿದ್ದಾರೆ ಇಲ್ಲವೇ ನಾಶ ಹೊಂದಿದ್ದಾರೆ ಎಂದು ಚೀನಾಕ್ಕೆ ನೇರವಾದ ಸಂದೇಶ ಕೊಟ್ಟಿದ್ದರು.

ಇದಕ್ಕೆ ಪ್ರತಿಯಾಗಿ ಎಂಬಂತೆ ನಿನ್ನೆಯ ಭಾಷಣದಲ್ಲಿ ಕ್ಸಿ ಜಿನ್ ಪಿಂಗ್ ಉತ್ತರ ಕೊಟ್ಟಿದ್ದು, ನಾಲ್ಕು ಗೋಡೆಗಳ ಹಿಂದೆ ನಿಂತು ಏನು ಬೆಳವಣಿಗೆಗಳಾಗುತ್ತಿದೆ ಎಂದು ತಮ್ಮ ದೇಶ ನೋಡುವುದಿಲ್ಲ. ಬದಲಾಗಿ, ಪರಸ್ಪರ ಬಲಪಡಿಸುವ ಹೊಸ ಅಭಿವೃದ್ಧಿ ಮಾದರಿಯನ್ನು ಬೆಳೆಸುವ ಗುರಿಯನ್ನು ನಾವು ಹೊಂದಿದ್ದೇವೆ.ಇದರಿಂದ ಚೀನಾದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಜಾಗವನ್ನು ಸೃಷ್ಟಿಸುತ್ತದೆ ಮಾತ್ರವಲ್ಲದೆ ಜಾಗತಿಕ ಆರ್ಥಿಕ ಚೇತರಿಕೆ ಮತ್ತು ಬೆಳವಣಿಗೆಗೆ ಪ್ರಚೋದನೆಯನ್ನು ನೀಡುತ್ತದೆ ಎಂದರು.

ಕೋವಿಡ್-19 ಸಾಂಕ್ರಾಮಿಕ ಹರಡಲು ಚೀನಾ ದೇಶ ಕಾರಣ ಮತ್ತು ನಿಜವಾದ ಅಂಕಿಅಂಶಗಳನ್ನು, ವಾಸ್ತವಾಂಶವನ್ನು ನೀಡದೆ ಚೀನಾ ಮುಚ್ಚಿಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕ್ಸಿ ಜಿನ್ ಪಿಂಗ್, ವೈರಸ್ ಅನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು. ಇಲ್ಲಿ ವಿಜ್ಞಾನದ ಮಾರ್ಗದರ್ಶನವನ್ನು ಅನುಸರಿಸಬೇಕು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸಬೇಕು, ಈ ಸಾಂಕ್ರಾಮಿಕ ರೋಗವನ್ನು ಸದೆಬಡಿಯಲು ಜಂಟಿ ಅಂತರರಾಷ್ಟ್ರೀಯ ಪ್ರತಿಕ್ರಿಯೆಯನ್ನು ಪ್ರಾರಂಭಿಸಬೇಕು. ಸಮಸ್ಯೆಯನ್ನು ರಾಜಕೀಯಗೊಳಿಸುವುದರಿಂದ ಪ್ರಯೋಜನವಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com