ತೈವಾನ್ ರೈಲು ಅಪಘಾತ: ಮೃತರ ಸಂಖ್ಯೆ 51ಕ್ಕೆ ಏರಿಕೆ, ಸಂತಾಪ ಸೂಚಿಸಿದ ಭಾರತ
ತೈವಾನ್ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಸಂಭವಿಸಿದ್ದ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದ್ದು, ದುರಂತದ ಕುರಿತು ಭಾರತ ಸಂತಾಪ ಸೂಚಿಸಿದೆ.
Published: 03rd April 2021 04:03 PM | Last Updated: 03rd April 2021 04:03 PM | A+A A-

ಹಳಿ ತಪ್ಪಿದ ರೈಲು
ನವದೆಹಲಿ: ತೈವಾನ್ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಸಂಭವಿಸಿದ್ದ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದ್ದು, ದುರಂತದ ಕುರಿತು ಭಾರತ ಸಂತಾಪ ಸೂಚಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕೇಂದ್ರ ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಅವರು, 'ತೈವಾನ್ನಲ್ಲಿ ನಿನ್ನೆ ಸಂಭವಿಸಿದ ರೈಲ್ವೆ ಅಪಘಾತದಲ್ಲಿ ಸಾಕಷ್ಟು ಜೀವ ಹಾನಿಯಾದ ಕುರಿತು ನಮಗೆ ತೀವ್ರ ಬೇಸರವಿದೆ. ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ತೈವಾನ್ ನ ಕರಾವಳಿ ನಗರ ಹುವಾಲಿಯನ್ ನ ಪೂರ್ವ ರೈಲ್ವೆ ಮಾರ್ಗದ ಸುರಂಗದಲ್ಲಿ ಶುಕ್ರವಾರ 490 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ರೈಲು ಹಳಿ ತಪ್ಪಿತ್ತು. ಹಳಿ ಮೇಲೆ ನಿಂತಿದ್ದ ಸರಕು ಸಾಗಾಣಿಕಾ ಟ್ರಕ್ ಗೆ ರೈಲು ಢಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ರೈಲಿನ ಐದಕ್ಕೂ ಹೆಚ್ಚು ಬೋಗಿಗಳು ಹಳಿ ತಪ್ಪಿದ್ದವು.
ಇದೀಗ ಈ ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಅಂತೆಯೇ ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ರೈಲಿನ ಸುಮಾರು 5ಕ್ಕೂ ಹೆಚ್ಚು ಬೋಗಿಗಳು ಜಖಂ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಹಳಿ ಮೇಲೆ ಟ್ರಕ್ ತಂದ ಚಾಲಕ ಮಾಲೀಕನ ವಿರುದ್ಧ ಕಾನೂನು ಕ್ರಮ
ಇನ್ನು ರೈಲು ದುರಂತಕ್ಕೆ ಹಳಿ ಮೇಲೆ ಟ್ರಕ್ ತಂದು ನಿಲ್ಲಿಸಿದ್ದೇ ಎಂದು ಹೇಳಲಾಗಿದ್ದು, ಈ ಕೂಡಲೇ ಟ್ರಕ್ ತಂದ ಚಾಲಕ ಮತ್ತು ಟ್ರಕ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸುವಂತೆ ವಿಪಕ್ಷಗಳು ಆಗ್ರಹಿಸಿವೆ.