ಕೋವಿಡ್-19 ಲಸಿಕೆ ಪಡೆದವರಿಗಷ್ಟೇ ಮೆಕ್ಕಾ-ಮದೀನಾ ಪ್ರವೇಶ: ಸೌದಿ ಸರ್ಕಾರ

ಜಗತ್ತಿನಾದ್ಯಂತ ಮಾರಕ ಕೊರೋನಾ ವೈರಸ್ ಹಾವಳಿ ಮತ್ತೆ ಹೆಚ್ಚಾಗಿರುವಂತೆಯೇ ಇತ್ತ ಸೌದಿ ಸರ್ಕಾರ ಕೋವಿಡ್-19 ಲಸಿಕೆ ಪಡೆದವರಿಗಷ್ಟೇ ಮೆಕ್ಕಾ-ಮದೀನಾ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದೆ.

Published: 06th April 2021 09:28 AM  |   Last Updated: 06th April 2021 09:28 AM   |  A+A-


Mecca

ಮುಸ್ಲಿಂರ ಪವಿತ್ರ ಸ್ಥಳ ಮೆಕ್ಕಾ

Posted By : Srinivasamurthy VN
Source : AFP

ರಿಯಾದ್: ಜಗತ್ತಿನಾದ್ಯಂತ ಮಾರಕ ಕೊರೋನಾ ವೈರಸ್ ಹಾವಳಿ ಮತ್ತೆ ಹೆಚ್ಚಾಗಿರುವಂತೆಯೇ ಇತ್ತ ಸೌದಿ ಸರ್ಕಾರ ಕೋವಿಡ್-19 ಲಸಿಕೆ ಪಡೆದವರಿಗಷ್ಟೇ ಮೆಕ್ಕಾ-ಮದೀನಾ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದೆ.

ಹೌದು..ಪವಿತ್ರ ರಂಜಾನ್ ತಿಂಗಳಿನಿಂದ ಆರಂಭವಾಗುವ ಮೆಕ್ಕಾ, ಮದಿನಾ ಯಾತ್ರೆ ಸಂದರ್ಭದಲ್ಲಿ ಕೋವಿಡ್ ಸೋಂಕಿನ ಹಾವಳಿ ತಪ್ಪಿಸುವ ಉದ್ದೇಶದಿಂದ ಸೌದಿ ಅರೇಬಿಯಾ ಸರ್ಕಾರ ಕಠಿಣ ನಿಲುವು ತಳೆದಿದ್ದು, ಅದರಂತೆ ಮೆಕ್ಕಾ, ಮದಿನಾ ಸೇರಿ ಪವಿತ್ರ ಕ್ಷೇತ್ರಗಳ ಯಾತ್ರೆಗೆ ಕೋವಿಡ್-19 ಲಸಿಕೆ ಹಾಕಿಸಿಕೊಂಡವರು ಮತ್ತು ಪ್ರತಿಕಾಯಗಳನ್ನು ಹೊಂದಿರುವವರಿಗಷ್ಟೇ ಅವಕಾಶ ನೀಡಲಾಗುವುದು ಎಂದು ಘೋಷಣೆ ಮಾಡಿದೆ.

ಕೋವಿಡ್-19 ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರು, ಮೊದಲ ಡೋಸ್ ಪಡೆದು ಕನಿಷ್ಠ 14 ದಿನ ಪೂರೈಸಿದವರು ಮತ್ತು ಈಗಾಗಲೇ ಕೋವಿಡ್ ಸೋಂಕಿತರಾಗಿ ಗುಣಮುಖರಾದವರನ್ನು ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿದವರು ಎಂದು ಪರಿಗಣಿಸಲಾಗುವುದು ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ ಹೇಳಿದೆ. ಇಂಥವರಿಗೆ ಮಾತ್ರ ಯಾತ್ರೆ ಕೈಗೊಳ್ಳಲು, ಮೆಕ್ಕಾ ಹಾಗೂ ಮದಿನಾದ ಭವ್ಯ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಮದಿನಾದಲ್ಲಿರುವ ಪ್ರವಾದಿಗಳ ಮಸೀದಿ ಪ್ರವೇಶಿಸಬೇಕಿದ್ದರೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಈ ನೂತನ ನಿಯಮವು ರಂಜಾನ್‌ ತಿಂಗಳ ಆರಂಭದಿಂದ ಜಾರಿಗೆ ಬರಲಿದ್ದು, ಎಷ್ಟು ಸಮಯದ ವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ತಿಳಿಸಿಲ್ಲ. ಅಲ್ಲದೆ ವರ್ಷದ ಕೊನೆಯಲ್ಲಿ ಬರುವ ಹಜ್ ಯಾತ್ರೆಗೂ ಇದೇ ನಿಯಮ ಅನ್ವಯವಾಗಲಿದೆಯೇ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಿಲ್ಲ.

ಕೋವಿಡ್ ಎಫೆಕ್ಟ್; ಮೆಕ್ಕಾ ಇತಿಹಾಸದಲ್ಲೇ ಕಡಿಮೆ ಯಾತ್ರಾರ್ಥಿಗಳ ಭೇಟಿ
ಇನ್ನು ಮೆಕ್ಕಾ ಇತಿಹಾಸದಲ್ಲೇ ಕಳೆದ ವರ್ಷ ಅತ್ಯಂತ ಕಡಿಮೆ ಯಾತ್ರಾರ್ಥಿಗಳು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ ಮಾಹಿತಿ ನೀಡಿದ್ದು, ಕೊರೋನಾ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು ಎಂದು ಹೇಳಿದೆ. ಮೂಲಗಳ ಪ್ರಕಾರ ಸೌದಿ ಅರೇಬಿಯಾದ 10,000 ಮುಸ್ಲಿಂ ನಿವಾಸಿಗಳಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿತ್ತು. ಆದರೆ ಪ್ರತೀ ವರ್ಷ ವಿಶ್ವಾದ್ಯಂತ 2.5 ಮಿಲಿಯನ್ ಮುಸ್ಲಿಮರು ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದರು ಎನ್ನಲಾಗಿದೆ.  

ಇನ್ನು ಸೌದಿ ಅರೇಬಿಯಾದಲ್ಲಿ ಕೋವಿಡ್‌ನಿಂದ ಈವರೆಗೆ 3,93,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು 6,700 ಸಾವು ಸಂಭವಿಸಿದೆ. ಈ ಮಧ್ಯೆ, 50 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
 

Stay up to date on all the latest ಅಂತಾರಾಷ್ಟ್ರೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp