ಮ್ಯಾನ್ಮಾರ್ ಸಂಘರ್ಷ: ಭದ್ರತಾ ಪಡೆಗಳಿಂದ 24 ಗಂಟೆಗಳಲ್ಲಿ 82 ಮಂದಿ ಪ್ರತಿಭಟನಾಕಾರರ ಹತ್ಯೆ

ಮಿಲಿಟರಿ ಆಡಳಿತ ವಿರೋಧಿಸಿ ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಶನಿವಾರ ಒಂದೇ ದಿನ ಬರೊಬ್ಬರಿ 82 ಮಂದಿ ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ತಿಳಿದುಬಂದಿದೆ.
ಬಗೋ ನಗರದಲ್ಲಿ ಗಲಭೆ (ಎಎಫ್ ಪಿ ಚಿತ್ರ)
ಬಗೋ ನಗರದಲ್ಲಿ ಗಲಭೆ (ಎಎಫ್ ಪಿ ಚಿತ್ರ)

ಯಾಂಗೊನ್‌: ಮಿಲಿಟರಿ ಆಡಳಿತ ವಿರೋಧಿಸಿ ಮ್ಯಾನ್ಮಾರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಶನಿವಾರ ಒಂದೇ ದಿನ ಬರೊಬ್ಬರಿ 82 ಮಂದಿ ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ವರದಿ ಮಾಡಿದ್ದು, ಪ್ರಜಾಪ್ರಭುತ್ವದ ಪರವಾಗಿ, ಮಿಲಿಟರಿ ಆಡಳಿತ ವಿರೋಧಿಸಿ ಮ್ಯಾನ್ಮಾರ್‌ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆಯಲ್ಲಿ 82 ಮಂದಿ ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ವರದಿ ಮಾಡಿವೆ. ಶನಿವಾರ ಭದ್ರತಾ ಪಡೆಗಳು  ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಕನಿಷ್ಠ 82 ಜನರ ಹತ್ಯೆಯಾಗಿದೆ. ಆ ಮೂಲಕ ಫೆಬ್ರವರಿಯಿಂದ ಈ ವರೆಗೂ ನಡೆದ ಘರ್ಷಣೆಯಲ್ಲಿ ಸಾವಿಗೀಡಾದ ಪ್ರತಿಭಟನಾಕಾರರ  701ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಮುಖವಾಗಿ ಕಳೆದ ಮಾರ್ಚ್‌ 14ರ  ನಂತರ ಬಗೋ ನಗರದಲ್ಲಿ ಶನಿವಾರ ಅತಿ ಹೆಚ್ಚು ಪ್ರತಿಭಟನಾಕಾರರನ್ನು ಕೊಲ್ಲಲಾಗಿದೆ ಎನ್ನಲಾಗಿದೆ.

ಬಗೋದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಭದ್ರತಾ ಪಡೆಗಳು ಶವಗಳನ್ನು ಸಂಗ್ರಹಿಸಿ ಬೌದ್ಧ ಮಂದಿರದ ಮೈದಾನದಲ್ಲಿ ಹಾಕಿವೆ. ಗ್ರೆನೇಡ್‌ಗಳು, ಮಾರ್ಟರ್‌ಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಗಳನ್ನು ಬಳಸಿ ಭದ್ರತಾ ಪಡೆಗಳು ಜನರ ಮೇಲೆ ದಾಳಿ ಮಾಡಿದ್ದು, ಕೆಲವು  ಪ್ರತಿಭಟನಾಕಾರರು ಆತ್ಮ ರಕ್ಷಣೆಯ ನಿಟ್ಟಿನಲ್ಲಿ ಫೈರ್‌ಬಾಂಬ್‌ಗಳು, ಬೇಟೆಗೆ ಬಳಸುವ ರೈಫಲ್‌ಗಳನ್ನು ಹಿಡಿದು ಹೋರಾಟ ಮಾಡುತ್ತಿದ್ದಾರೆ. ಕಲಾಯ್‌ ಪ್ರದೇಶದಲ್ಲಿ ಮಿಲಿಟರಿ ಪಡೆಯ ವಿರುದ್ಧ ಬೇಟೆಯ ರೈಫಲ್‌ಗಳನ್ನು ಬಳಸಿ, ಮೂವರು ಯೋಧರ ಹತ್ಯೆ ಮಾಡಿರುವುದು ವರದಿಯಾಗಿದೆ. ಕಾನೂನು ಸುವ್ಯವಸ್ಥೆ,  ದೇಶದ ಸ್ಥಿರತೆ ಅಭದ್ರವಾಗಲು ಹರಡುತ್ತಿರುವ ಮಾಹಿತಿಯೇ ಕಾರಣವೆಂದು ಆರೋಪಿಸಿ, ಇತ್ತೀಷೆಗಷ್ಟೇ ಮಿಲಿಟರಿ ಆಡಳಿತವು ಕಲೆ ಮತ್ತು ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ 140 ಜನರ ವಾಂಟೆಡ್‌ ಪಟ್ಟಿ ಪ್ರಕಟಿಸಿದೆ. ಅವರ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದೆ.

ಯಾಂಗೊನ್‌ನಲ್ಲಿ ಮಾರ್ಚ್‌ 27ರಂದು ಮಿಲಿಟರಿ ಅಧಿಕಾರಿಯ ಹತ್ಯೆಗೆ ಸಂಬಂಧಿಸಿದಂತೆ ಸೇನಾ ನ್ಯಾಯಾಲಯವು 19 ಜನರಿಗೆ ಮರಣದಂಡನೆ ವಿಧಿಸಿರುವುದಾಗಿ ಸರ್ಕಾರ ಸ್ವಾಮ್ಯದ ಎಂಆರ್‌ಟಿವಿ ಚಾನೆಲ್‌ ಶುಕ್ರವಾರ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com