ವುಹಾನ್ ಲ್ಯಾಬ್ ಕುರಿತ ವಿವಾದದ ನಡುವೆ ಚೀನಾದಿಂದ ಮತ್ತಷ್ಟು ಬಯೋ ಲ್ಯಾಬ್ ಗಳ ನಿರ್ಮಾಣ!

ವುಹಾನ್ ನಲ್ಲಿರುವ ಪ್ರಯೋಗಾಲಯದಿಂದ ಕೋವಿಡ್-19 ಹುಟ್ಟಿಕೊಂಡಿದೆಯೇ ಎಂಬ ಪ್ರಶ್ನೆಗಳ ನಡುವೆ ದೇಶದಲ್ಲಿ ಹೆಚ್ಚಿನ ಜೈವಿಕ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಸುರಕ್ಷಿತ ಕಾರ್ಯಾಚರಣೆಗೆ ಕಾನೂನು ವ್ಯಾಪ್ತಿಯನ್ನು ಬಲಪಡಿಸಲು ಚೀನಾ ತನ್ನ ಹೊಸ ಜೈವಿಕ ಸುರಕ್ಷತಾ ಕಾನೂನನ್ನು ಕಾರ್ಯಗತಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ವುಹಾನ್ ನಲ್ಲಿರುವ ಪ್ರಯೋಗಾಲಯದಿಂದ ಕೋವಿಡ್-19 ಹುಟ್ಟಿಕೊಂಡಿದೆಯೇ ಎಂಬ ಪ್ರಶ್ನೆಗಳ ನಡುವೆ ದೇಶದಲ್ಲಿ ಹೆಚ್ಚಿನ ಜೈವಿಕ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಸುರಕ್ಷಿತ ಕಾರ್ಯಾಚರಣೆಗೆ ಕಾನೂನು ವ್ಯಾಪ್ತಿಯನ್ನು ಬಲಪಡಿಸಲು ಚೀನಾ ತನ್ನ ಹೊಸ ಜೈವಿಕ ಸುರಕ್ಷತಾ ಕಾನೂನನ್ನು ಕಾರ್ಯಗತಗೊಳಿಸಿದೆ.

ಡಿಸೆಂಬರ್ 2019ರಲ್ಲಿ ಚೀನಾದ ವುಹಾನ್ ನಗರದಿಂದ ಹೊರಹೊಮ್ಮಿದ್ದ ಕೊರೋನಾ ವೈರಸ್, ತದನಂತರ ಸಾಂಕ್ರಾಮಿಕವಾಗಿ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸಿದೆ.

ಹೊಸ ಜೀವ ಸುರಕ್ಷತಾ ಕಾನೂನಿನಡಿಯಲ್ಲಿ, ಸೂಕ್ಷ್ಮ ಮತ್ತು ವೈಜ್ಞಾನಿಕ ರೀತಿಯೊಂದಿಗೆ ಸುಧಾರಿತ ರೋಗಕಾರಕ ಸೂಕ್ಷ್ಮ ಜೀವವಿಜ್ಞಾನದಲ್ಲಿ ಪರಿಣತಿ ಹೊಂದಿರುವ ಹೆಚ್ಚಿನ ಪ್ರಯೋಗಾಲಯಗಳಿಗೆ ಅನುಮೋದನೆ ಹಾಗೂ ಸ್ಥಾಪನೆಯನ್ನು ಮುಂದುವರೆಸುವುದಾಗಿ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಉಪ ಸಚಿವ ಕ್ಸಿಯಾಂಗ್ ಲಿಬಿನ್ ಹೇಳಿದ್ದಾರೆ.

ಭವಿಷ್ಯದ ಸಾಂಕ್ರಾಮಿಕ ರೋಗಗಳ ವಿರುದ್ಧ ಚೀನಾ ತನ್ನ ಜೈವಿಕ ಸುರಕ್ಷತೆ ವಿಜ್ಞಾನ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲಿದೆ ಎಂದು ಕ್ಸಿಯಾಂಗ್ ಹೇಳಿರುವುದಾಗಿ ಸರ್ಕಾರದ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ಹೇಳಿದೆ. ಚೀನಾದಲ್ಲಿ ಮೂರು ಪಿ 4 ಲ್ಯಾಬ್ ಗಳು ಅಥವಾ ಪಿ 3 ಲ್ಯಾಬ್ ಗಳ ಸ್ಥಾಪನೆಗೆ ಸಚಿವಾಲಯ ಪರಿಶೀಲನೆ ನಡೆಸಿ ಅನುಮೋದನೆ ನೀಡಿರುವುದಾಗಿ ಕ್ಸಿಯಾಂಗ್ ತಿಳಿಸಿದ್ದಾರೆ. 

ಚೀನಾ ಎರಡು ಪಿ 4 ಲ್ಯಾಬ್ ಗಳನ್ನು ಹೊಂದಿದ್ದು, 81 ಪಿ3 ಲ್ಯಾಬ್ ಗಳ ಕಾರ್ಯಾಚರಣೆ ಅಥವಾ ನಿರ್ಮಾಣಕ್ಕೆ ಅನುಮೋದನೆಯಾಗಿರುವುದಾಗಿ ಚೀನಾ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಬಾಯಿ ಚುಹ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಹೇಳಿದ್ದರು. ಇದಕ್ಕೆ ವಿರುದ್ಧವಾಗಿ ಅಮೆರಿಕ 12 ಪಿ4 ಮತ್ತು 1500 ಪಿ3 ಲ್ಯಾಬ್ ಗಳನ್ನು ಹೊಂದಿರುವುದಾಗಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಪಿ-4 ಬಯೋ ಲ್ಯಾಬ್ ಆಗಿರುವ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಯಿಂದ ಕೋವಿಡ್-19 ಹೊರಹೊಮ್ಮಿರಬಹುದು ಎಂದು ಅಮೆರಿಕ  ಆರೋಪಿಸಿರುವುದರಿಂದ ಬಯೋ ಲ್ಯಾಬ್‌ಗಳು ಮಹತ್ವವನ್ನು ಪಡೆದುಕೊಂಡಿವೆ. ಚೀನಾ ಈ ಆರೋಪವನ್ನು ಬಲವಾಗಿ ನಿರಾಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com