ಕೋವಿಡ್ ವಿರುದ್ಧದ ಹೋರಾಟದ ಸವಾಲನ್ನು ಒಗ್ಗೂಡಿ ಎದುರಿಸಬೇಕು; ಭಾರತದೊಂದಿಗೆ ನಾವಿದ್ದೇವೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಕೊರೋನಾ ಸಾಂಕ್ರಾಮಿಕ ಸವಾಲನ್ನು ನಾವು ಒಗ್ಗೂಡಿ ಎದುರಿಸಬೇಕು... ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಕೊರೋನಾ ಸಾಂಕ್ರಾಮಿಕ ಸವಾಲನ್ನು ನಾವು ಒಗ್ಗೂಡಿ ಎದುರಿಸಬೇಕು... ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಾವಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಭಾರತದಲ್ಲಿ ದಿನೇ ದಿನೇ ಮಾರಕ ಕೋವಿಡ್‌ ಸಾಂಕ್ರಾಮಿಕ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ದೇಶಾದ್ಯಂತ ಆಕ್ಸಿಜನ್ ಮತ್ತು ಆಸ್ಪತ್ರೆ ಬೆಡ್ ಗಳಿಗಾಗಿ ಹಾಹಾಕಾರ ಆರಂಭವಾಗಿದೆ. ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಅಲಭ್ಯವಾಗಿ ರೋಗಿಗಳು ಮೃತಪಡುತ್ತಿದ್ದು, ಇನ್ನು ಕೆಲವೆಡೆ  ಯಾವುದೇ ಔಷಧಿಗಳು ಲಭ್ಯವಾಗುತ್ತಿಲ್ಲ. ಭಾರತದಲ್ಲಿನ ಈ ಪರಿಸ್ಥಿತಿ ಇದೀಗ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದ್ದು, ಇದೇ ವಿಚಾರವಾಗಿ ಪಾಕಿಸ್ತಾನ ಸರ್ಕಾರ ಪ್ರತಿಕ್ರಿಯೆ ನೀಡಿದೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಭಾರತೀಯರೊಂದಿಗೆ ನಾವಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅವರು, 'ಅಪಾಯಕಾರಿ ಕೋವಿಡ್-‌19 ವಿರುದ್ಧ ಹೋರಾಟ ನಡೆಸುತ್ತಿರುವ ಭಾರತದ ಜನರೊಂದಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ನಮ್ಮ ನೆರೆಯ ದೇಶ ಮತ್ತು ಇಡೀ ಜಗತ್ತಿನಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದ ಬಳಲುತ್ತಿರುವವರು ಶೀಘ್ರ  ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮಾನವೀಯತೆಯು ಎದುರಿಸುತ್ತಿರುವ ಈ ಜಾಗತಿಕ ಸವಾಲಿನ ವಿರುದ್ಧ ನಾವು ಒಗ್ಗೂಡಿ ಹೋರಾಡಬೇಕು' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಕೂಡ ಭಾರತದ ಜನರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಕೋವಿಡ್ ಬಿಕ್ಕಟ್ಟಿನಂತಹ ಮಾನವೀಯ ವಿಷಯಗಳಿಗೆ ರಾಜಕೀಯ ಪರಿಗಣನೆಗೆ ಮೀರಿದ ಪ್ರತಿಕ್ರಿಯೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ತೀವ್ರವಾಗಿ ಕಾಡುತ್ತಿರುವ ಕೋವಿಡ್-19 ಸೋಂಕಿನ 2ನೇ ಅಲೆ ಹಿನ್ನೆಲೆಯಲ್ಲಿ ನಾವು ಭಾರತದ ಜನರಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ. ಪಾಕಿಸ್ತಾನದ ಜನರ ಪರವಾಗಿ ಭಾರತದ ಸೋಂಕು ಪೀಡಿತ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಹಾನುಭೂತಿಯನ್ನು  ಅರ್ಪಿಸುತ್ತೇವೆ ಎಂದು ಖುರೇಷಿ ಟ್ವೀಟ್ ಮಾಡಿದ್ದಾರೆ.

ಅಂತೆಯೇ  ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಹಕಾರವನ್ನು ಹೆಚ್ಚಿಸಲು ಪಾಕಿಸ್ತಾನವು ಸಾರ್ಕ್ ರಾಷ್ಟ್ರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದೆ ಎಂದು ಅವರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com