ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ: ಓರ್ವ ಅಫ್ಘನ್ ಸೈನಿಕ ಸಾವು, ಮೂವರಿಗೆ ಗಾಯ

ಅಫ್ಘಾನಿಸ್ತಾನ್ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಪ್ರದೇಶದಲ್ಲಿ ವಿದೇಶಿ ಭದ್ರತಾ ಪಡೆ, ಅಫ್ಘಾನ್ ಸೇನೆ ವಿರುದ್ಧ ಅಪರಿಚಿತ ಗನ್ ಮ್ಯಾನ್ ಗಳು ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಬುಲ್: ಅಫ್ಘಾನಿಸ್ತಾನ್ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಪ್ರದೇಶದಲ್ಲಿ ವಿದೇಶಿ ಭದ್ರತಾ ಪಡೆ, ಅಫ್ಘಾನ್ ಸೇನೆ ವಿರುದ್ಧ ಅಪರಿಚಿತ ಗನ್ ಮ್ಯಾನ್ ಗಳು ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ತಾಲಿಬಾನ್ ಆಡಳಿತದಿಂದ ಭೀತಿಗೊಳಗಾಗಿರುವ ಸಾವಿರಾರು ಮಂದಿ ಅಫ್ಘಾನ್ ನಾಗರಿಕರು ಮತ್ತು ವಿದೇಶಿಯರು ಅಫ್ಘಾನ್ ನಿಂದ ಪರಾರಿಯಾಗಲು ವಿಮಾನ ನಿಲ್ದಾಣ ಸೇರಿದ್ದಾರೆ. 

ಈ ಸಂದರ್ಭದಲ್ಲಿಯೇ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಅಫ್ಘಾನ್ ಸೈನಿಕನೊಬ್ಬ ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. 

ಈ ಕುರಿತು ಜರ್ಮನಿಯ ಮಿಲಿಟರಿ ಟ್ವೀಟ್ ಮಾಡಿದ್ದು, ಕಾಬೂಲ್‌ ವಿಮಾನ ನಿಲ್ದಾಣದ ಉತ್ತರ ಭಾಗದ ದ್ವಾರದಲ್ಲಿ ಸೋಮವಾರ ಬೆಳಿಗ್ಗೆ ಅಫ್ಗನ್‌ ಭದ್ರತಾ ಪಡೆಗಳು ಮತ್ತು ‘ಅನಾಮಿಕ ದಾಳಿಕೋರರ’ ನಡುವೆ ಗುಂಡಿನ ದಾಳಿ ನಡೆದಿದ್ದು, ಒಬ್ಬ ಭದ್ರತಾ ಅಧಿಕಾರಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಬಳಿಕ ಅಮೆರಿಕ ಮತ್ತು ಜರ್ಮನಿಯ ಪಡೆಗಳೂ ಭದ್ರತಾ ವ್ಯವಸ್ಥೆಯನ್ನು ಬಲಗೊಳಿಸಿದವು. ಜರ್ಮನಿಯ ಸೈನಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿಸಿದೆ. 

ಗುಂಡಿನ ದಾಳಿ ನಡೆಸಿದ್ದು ತಾಲಿಬಾನ್ ಉಗ್ರರೇ ಅಥವಾ ಅಪರಿಚಿತ ದುಷ್ಕರ್ಮಿಗಳೋ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಗಳು ತಿಳಿದುಬಂದಿಲ್ಲ. ವಿಮಾನನಿಲ್ದಾಣದ ಹೊರವಲಯದಲ್ಲಿ ಕಾವಲು ಕಾಯುತ್ತಿರುವ ತಾಲಿಬಾನಿಗಳು ಇದುವರೆಗೆ ನ್ಯಾಟೊ ಅಥವಾ ಅಫ್ಗನ್ ಪಡೆಗಳ ಮೇಲೆ ಗುಂಡು ಹಾರಿಸಿಲ್ಲ,

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ್ ಆಡಳಿತವನ್ನು ವಶಕ್ಕೆ ಪಡೆದ ನಂತರ ರಾಜಧಾನಿ ಕಾಬೂಲ್ ನಲ್ಲಿ ಅಮೆರಿಕ ಮತ್ತು ಅಂತರಾಷ್ಟ್ರೀಯ ಪಡೆಗಳು ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಅಫ್ಘಾನ್ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಕಾಬೂಲ್ ನಲ್ಲಿ ಕಾಲ್ತುಳಿತ ಮತ್ತು ಗುಂಡು ಹಾರಾಟದಿಂದ ಏಳು ಮಂದಿ ಸಾವನ್ನಪ್ಪಿದ್ದರು. 

ಈ ನಡುವೆ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್ ಉಗ್ರರಿಗೆ ಪಂಜ್ ಶಿರ್ ಕಣಿವೆಯಲ್ಲಿ ಪ್ರಬಲ ವಿರೋಧ ವ್ಯಕ್ತವಾಗುತ್ತಿದ್ದು, ಅಫ್ಭಾನಿಸ್ತಾನ ರಾಜಧಾನಿ ಕಾಬುಲ್ ನ್ನು ವಶಪಡಿಸಿಕೊಂಡು ಬೀಗುತ್ತಿರುವ ತಾಲಿಬಾನಿಗಳು ಇದೀಗ ಪಂಜ್ ಶಿರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರನ್ನು ರವಾನಿಸಿದೆ. 

ಆಪ್ಘನ್‌ ರಾಜಧಾನಿ ಕಾಬೂಲ್‌ನಿಂದ ಉತ್ತರಕ್ಕಿರುವ ಪಂಜ್‌ಶಿರ್‌ ಕಣಿವೆಯನ್ನು ತಾಲಿಬಾನ್‌ ಉಗ್ರರಿಗೆ ಬಿಟ್ಟುಕೊಡಲು ಅಲ್ಲಿನ ಸರ್ಕಾರಿ ಸೇನೆ, ಬುಡಕಟ್ಟು ಸೇರಿ ಇತರೆ ಹೋರಾಟಗಾರರು ಒಪ್ಪಿಲ್ಲ. ಈ ಹಿನ್ನೆಲೆ ಪಂಜ್‌ಶಿರ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ತಾಲಿಬಾನ್‌ ತನ್ನ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಪಂಜಶಿರ್‌ ಪ್ರಾಂತ್ಯಕ್ಕೆ ಕಳುಹಿಸಿದ್ದು, ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗಿದೆ.

ನಿನ್ನೆಯಷ್ಟೇ ಟ್ವೀಟ್ ಮಾಡಿದ್ದ ತಾಲಿಬಾನ್ ಉಗ್ರರು ಪಂಜ್‌ಶಿರ್‌ ಕಣಿವೆಯನ್ನು ಶಾಂತಿಯುತವಾಗಿ ಹಸ್ತಾಂತರಿಸಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಅನಿವಾರ್ಯವಾಗಿ ಕಾರ್ಯಾಚರಣೆ ನಡೆಸಿ ಪಂಜ್‌ಶಿರ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಇಸ್ಲಾಮಿಕ್‌ ಎಮಿರೇಟ್‌ನ ನೂರಾರು ಉಗ್ರರು ಹೋಗುತ್ತಿದ್ದಾರೆ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com