ಶಾಂತಿಯುತವಾಗಿ ಹಸ್ತಾಂತರಕ್ಕೆ ನಕಾರ: ಪಂಜ್ ಶಿರ್ ಕಣಿವೆಯತ್ತ ಸಾಗಿದ ತಾಲಿಬಾನ್ ಪಡೆ, ಸಂಪೂರ್ಣ ತೆಕ್ಕೆಗೆ ಯತ್ನ

ಅಫ್ಘಾನಿಸ್ತಾನದಲ್ಲಿ ಇನ್ನೂ ಕೆಲವು ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದಿರುವ ತಾಲಿಬಾನ್ ಪಂಜ್ ಶಿರ್ ಕಣಿವೆ ಪ್ರದೇಶದತ್ತ ತಮ್ಮ ನೂರಾರು ಸೈನಿಕರು ಹೋಗುತ್ತಿರುವುದಾಗಿ ಘೋಷಿಸಿಕೊಂಡಿದೆ.
ಕಾವಲು ಕಾಯುತ್ತಿರುವ ತಾಲಿಬಾನ್ ಪಡೆ
ಕಾವಲು ಕಾಯುತ್ತಿರುವ ತಾಲಿಬಾನ್ ಪಡೆ

ದುಬೈ: ಅಫ್ಘಾನಿಸ್ತಾನದಲ್ಲಿ ಇನ್ನೂ ಕೆಲವು ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದಿರುವ ತಾಲಿಬಾನ್ ಪಂಜ್ ಶಿರ್ ಕಣಿವೆ ಪ್ರದೇಶದತ್ತ ತಮ್ಮ ನೂರಾರು ಸೈನಿಕರು ಹೋಗುತ್ತಿರುವುದಾಗಿ ಘೋಷಿಸಿಕೊಂಡಿದೆ.

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ, ಕಾಬೂಲ್‌ನ ಉತ್ತರದಲ್ಲಿರುವ ಪಂಜ್‌ಶಿರ್‌ನಲ್ಲಿ ಕೆಲವು ಮಾಜಿ-ಸರ್ಕಾರಿ ಪಡೆಗಳು ಜಮಾಯಿಸುವುದರೊಂದಿಗೆ ಪ್ರತಿರೋಧ ವ್ಯಕ್ತವಾಗತೊಡಗಿತು, ಇದು ಬಹುಕಾಲದಿಂದ ತಾಲಿಬಾನ್ ವಿರೋಧಿ ಭದ್ರಕೋಟೆ ಎಂದು ಕರೆಯಲ್ಪಡುತ್ತದೆ.

ಸ್ಥಳೀಯ ರಾಜ್ಯ ಅಧಿಕಾರಿಗಳು ಅದನ್ನು ಶಾಂತಿಯುತವಾಗಿ ಹಸ್ತಾಂತರಿಸಲು ನಿರಾಕರಿಸಿದ ನಂತರ, ಇಸ್ಲಾಮಿಕ್ ಎಮಿರೇಟ್‌ನ ನೂರಾರು ಮುಜಾಹಿದ್ದೀನ್ ಗಳು ಪಂಜ್‌ಶಿರ್ ರಾಜ್ಯದ ಕಡೆಗೆ ಹೋಗುತ್ತಿದ್ದಾರೆ ಎಂದು ತಾಲಿಬಾನ್ ತನ್ನ ಅರೆಬಿಕ್ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.

ತಾಲಿಬಾನ್ ರಾಜಧಾನಿ ಕಾಬೂಲ್ ಮೇಲೆ ದಾಳಿ ನಡೆಸಿ ದೇಶದ ಮೇಲೆ ಹಿಡಿತ ಸಾಧಿಸಿದ ನಂತರ, ಸಾವಿರಾರು ಜನರು ಪಂಜ್ ಶಿರ್ ಗೆ ತೆರಳಿದ್ದಾರೆ ಎಂದು ತಾಲಿಬಾನ್ ವಿರೋಧಿ ಪಡೆಗಳ ವಕ್ತಾರರು ತಿಳಿಸಿದ್ದಾರೆ. ಕಾಬುಲ್ ನಿಂದ ಸುಮಾರು 120 ಕಿಲೋ ಮೀಟರ್ ದೂರದಲ್ಲಿರುವ ಪಂಜ್ ಶಿರ್ ಪ್ರಾಂತ್ಯ ಬೆಟ್ಟ ಗುಡ್ಡಗಳಿಂದ ಕೂಡಿ ಕಿರಿದಾಗಿದೆ. ಅಲ್ಲಿಗೆ ಹೋಗಲು ತಾಲಿಬಾನ್ ಸೈನಿಕರಿಗೆ ಕಷ್ಟವಾಗುತ್ತಿದೆ. 

ಸೆಪ್ಟೆಂಬರ್ 11,2001ರ ದಾಳಿಗೆ ಎರಡು ದಿನ ಮೊದಲು ಅಲ್ ಖೈದಾ ಉಗ್ರರಿಂದ ಹತ್ಯೆಗೀಡಾಗಿದ್ದ ಮುಜಾಹಿದ್ದೀನ್ ನ ಖ್ಯಾತ ಕಮಾಂಡರ್ ಅಹ್ಮದ್ ಶಾ ಮಸ್ಸೌದ್ ನ ಪುತ್ರ ಅಹ್ಮದ್ ಮಸ್ಸೌದ್ ಉಗ್ರರನ್ನು ಸದೆಬಡಿಯಲು ಸುಮಾರು 9 ಸಾವಿರ ಸೈನಿಕರನ್ನು ಒಟ್ಟು ಸೇರಿಸಲು ಯೋಜನೆ ಹಾಕಿಕೊಂಡಿದ್ದ ಎಂದು ತಾಲಿಬಾನ್ ವಿರೋಧಿ ಪಡೆ ವಕ್ತಾರ ಅಲಿ ಮೈಸಮ್ ನಾಝರಿ ಎಎಫ್ ಪಿಗೆ ತಿಳಿಸಿದ್ದಾರೆ.

ಕಾಬೂಲ್‌ನ ಈಶಾನ್ಯದ ಕಣಿವೆಯ ಉದ್ದಕ್ಕೂ ಹಲವಾರು ಶಸ್ತ್ರಸಜ್ಜಿತ ಹಮ್ವೀಗಳು ಓಡಾಡುತ್ತಿರುವುದು ಕಂಡುಬಂದಿದ್ದು ಅಲ್ಲಿ ಹತ್ತಾರು ಮಂದಿ ತರಬೇತಿ ಪಡೆಯುತ್ತಿರುವುದು ಎಎಫ್ ಪಿ ಸುದ್ದಿಸಂಸ್ಥೆಗೆ ಸಿಕ್ಕಿದೆ. ಹೊಸ ವಿಧದ ಸರ್ಕಾರಕ್ಕೆ ತಾಲಿಬಾನ್ ಪಡೆ ಬಯಸುತ್ತಿದ್ದು ಅಗತ್ಯಬಿದ್ದರೆ ಹೋರಾಡಲೂ ಸಿದ್ಧ ಎಂದು ಹೇಳಿದೆ.

ಹಲವಾರು ಅಫ್ಘಾನ್ ಪ್ರಾಂತ್ಯಗಳಿಂದ ಸರ್ಕಾರಿ ಪಡೆಗಳು ಪಂಜ್‌ಶಿರ್‌ಗೆ ಬಂದವು ಎಂದು ಮಸೂದ್ ಭಾನುವಾರ ಸೌದಿ ಅರೇಬಿಯಾದ ಅಲ್-ಅರೇಬಿಯಾ ಬ್ರಾಡ್‌ಕಾಸ್ಟರ್‌ಗೆ ತಿಳಿಸಿದರು. ಈ ಹಾದಿಯಲ್ಲಿ ಮುಂದುವರಿದರೆ ತಾಲಿಬಾನ್ ಹೆಚ್ಚು ಕಾಲ ಉಳಿಯುವುದಿಲ್ಲ. ನಾವು ಅಫ್ಘಾನಿಸ್ತಾನವನ್ನು ರಕ್ಷಿಸಲು ಸಿದ್ಧರಿದ್ದೇವೆ, ರಕ್ತಪಾತಕ್ಕೂ ಸಿದ್ದರಿದ್ದೇವೆ ಎಂದು ನಝರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com