ಶರಿಯಾ, ಇದು ಸರಿಯಾ?: ಆಫ್ಘನ್ ಹೆಣ್ಣುಮಕ್ಕಳ ಹಣೆಬರಹ ಹೇಳಲಿರುವ ಶರಿಯಾ ಕಾನೂನು!

ಮಹಿಳೆ ಮನೆಯಿಂದ ಹೊರ ಹೋಗುವಾಗ ಆಕೆಯ ಜೊತೆ ಕಡ್ಡಾಯವಾಗಿ ಆಕೆಯ ಪುರುಷ ಇರಲೇಬೇಕು ಎಂದು ಶರಿಯಾದಲ್ಲಿ ಹೇಳಿಲ್ಲ. ಮಹಿಳೆ ಉದ್ಯೋಗ ಮಾಡುವ ಹಾಗಿಲ್ಲ ಎಂದೂ ಶರಿಯಾದಲ್ಲಿ ಹೇಳಲಾಗಿಲ್ಲ. ಅವೆಲ್ಲಾ 90ರ ದಶಕದ ಅಂತ್ಯದಲ್ಲಿ ತಾಲಿಬಾನ್ ತಂದ ಶರಿಯಾ ಕಾನೂನಿನ ಆವೃತ್ತಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಜಗತ್ತಿನ ಎಲ್ಲಾ ದೇಶಗಳೂ ಅಫ್ಘಾನಿಸ್ತಾನ ಮಹಿಳೆಯರ ಹಕ್ಕುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ತಾಲಿಬಾನಿಗಳು ಮಾಡಿದ ರಾದ್ಧಾಂತಗಳು ಅದಕ್ಕೆ ಕಾರಣ. ಜಗತ್ತನ್ನು ಸಮಾಧಾನಿಸಲು ತಾಲಿಬಾನಿಗಳು ಅಫ್ಘಾನಿಸ್ತಾನದ ಮಹಿಳೆಯರಿಗೆ ಶರಿಯಾ ಕಾನೂನಿನ ಪ್ರಕಾರ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ನೀಡಲಾಗುವುದು ಎಂದು ಹೇಳುತ್ತಲೇ ಬಂದಿದ್ದಾರೆ. ತಾಲಿಬಾನಿಗಳ ಶರಿಯಾ ಕಾನೂನಿನ ಜಪ ಒಂದು ಕಡೆ ಇರಲಿ. ಶರಿಯಾ ಕಾನೂನಿನ ಇತ್ಯೋಪರಿ ತಿಳಿದುಕೊಳ್ಳುವ ಸಮಯವಿದು. ಸರ್ಕಾರ ರಚನೆಗೆ ತಾಲಿಬಾನ್ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಶರಿಯಾ ಕಾನೂನಿನ ಸ್ವರೂಪ ನಮ್ಮ ಓದುಗರಿಗಾಗಿ ಇಲ್ಲಿದೆ.

ಶರಿಯಾ ಎಂದರೆ ಏನು?

ಇಸ್ಲಾಂ ಧರ್ಮ ಗ್ರಂಥ ಖುರಾನ್ ನಲ್ಲಿ ಪ್ರವಾದಿ ಮೊಹಮ್ಮದ್ ಅವರ ಜೀವನದ ಕತೆಗಳು ಸೇರಿದಂತೆ ಹಲವು ಮಂದಿ ವಿದ್ವಾಂಸರ ಟಿಪ್ಪಣಿಗಳು, ಇಸ್ಲಾಂ ಆಚರಣೆ ಕುರಿತಾದ ಸೂಚನೆಗಳನ್ನು ನೀಡಲಾಗಿದೆ. ಇಸ್ಲಾಂ ಧರ್ಮವನ್ನು ಆಚರಿಸಲು ಪ್ರವಾದಿ ಮೊಹಮ್ಮದ್ ರ ಕತೆಗಳು ಸೇರಿದಂತೆ ಧಾರ್ಮಿಕ ವಿದ್ವಾಂಸರ ಸೂಚನೆಗಳು ನೆರವಾಗುತ್ತವೆ. ಇವು ವ್ಯಕ್ತಿಯೊಬ್ಬ ನೀತಿವಂತನಾಗಿ ಬದುಕಲು ಭದ್ರವಾದ ತಳಪಾಯ ಒದಗಿಸುತ್ತದೆ. ಆದರೆ ಅನೇಕ ಮಂದಿ ತಿಳಿದಂತೆ ಖುರಾನಿನಲ್ಲಿ ನಿರ್ದಿಷ್ಟ ಬಗೆಯ ಕಾನೂನು, ಮಾರ್ಗಸೂಚಿ ಪಟ್ಟಿಯನ್ನು ನೀಡಲಾಗಿಲ್ಲ.

ಶರಿಯಾ ಎನ್ನುವ ಪದದ ಅರ್ಥ ಸ್ಪಷ್ಟವಾದ, ತಿಳಿಯಾದ ನೀರಿಗೆ ದಾರಿ. ಅಂದರೆ ಸುಂದರ ಬದುಕನ್ನು ಪಡೆಯಲು ಅನುಸರಿಸಬೇಕಾದ ಧಾರ್ಮಿಕ ಹಾದಿ. ಆದರೆ ಆಧುನಿಕ ಜಗತ್ತಿನಲ್ಲಿ ಶರಿಯಾ ಕಾನೂನು ಹೊಸದೊಂದು ಅರ್ಥ ಹೊಂದಿದೆ. ಮಹಿಳೆಯರ ಹಕ್ಕುಗಳನ್ನು ಕುರಿತಾದ ಕಾನೂನು ಎನ್ನುವುದು. ತಾಲಿಬಾನಿಗಳು ಮಹಿಳೆಯರ ಮೇಲೆ ನಿರ್ಬಂಧ ಹೇರಲು ಇಸ್ಲಾಂ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಪರಿಣತರು ಆರೋಪಿಸಿದ್ದಾರೆ. 

ಶರಿಯಾ ಏನು ಹೇಳುತ್ತದೆ?

ಶರಿಯಾದಲ್ಲಿ ಹಲವು ಬಗೆಯ ಅಪರಾಧಗಳನ್ನು ಪಟ್ಟಿ ಮಾಡಲಾಗಿದೆ. ಕಳ್ಳತನ, ವ್ಯಭಿಚಾರ ಅವುಗಳಲ್ಲೊಂದು. ಈ ಪಟ್ಟಿಯಲ್ಲಿರುವ ಅಪರಾಧಗಳನ್ನು ಯಾರಾದ್ರೂ ಮಾಡಿದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗುವುದು. ಅಲ್ಲದೆ ಶಿಕ್ಷೆಯನ್ನು ಹೊರತುಪಡಿಸಿ ಅಪರಾಧಿಗಳಿಗೆ ನೀತಿ ಬೋಧೆ, ಧಾರ್ಮಿಕ ಪಠಣ ಮುಂತಾದ ಮಾರ್ಗಗಳನ್ನೂ ತೋರಲು ಅವಕಾಶವಿದೆ. ಅಲ್ಲದೆ ಜನಸಾಮಾನ್ಯರಿಗೆ ದಿನಿಕ ಬದುಕಿನಲ್ಲಿ ಎದುರಾಗುವ ದ್ವಂದ್ವಗಳು, ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಲಾಗಿದೆ. ಉದಾಹರಣೆಗೆ ಎಷ್ಟು ಬಾರಿ ಪ್ರಾರ್ಥನೆ ಸಲ್ಲಿಸಬೇಕು, ಎಷ್ಟು ಮದುವೆಯಾಗಬಹುದು, ವಿಚ್ಚೇದನ ಮತ್ತಿತರ ವಿಚಾರಗಳ ಬಗ್ಗೆಯೂ ಉಲ್ಲೇಖವಿದೆ. ಮಹಿಳೆ ಮನೆಯಿಂದ ಹೊರ ಹೋಗುವಾಗ ಆಕೆಯ ಜೊತೆ ಕಡ್ಡಾಯವಾಗಿ ಆಕೆಯ ಪುರುಷ ಇರಲೇಬೇಕು ಎಂದು ಶರಿಯಾದಲ್ಲಿ ಹೇಳಿಲ್ಲ. ಮಹಿಳೆ ಉದ್ಯೋಗ ಮಾಡುವ ಹಾಗಿಲ್ಲ ಎಂದೂ ಶರಿಯಾದಲ್ಲಿ ಹೇಳಲಾಗಿಲ್ಲ. 

1996- 2001ರ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ್ದ ತಾಲಿಬಾನ್ ಟಿ.ವಿ ಯನ್ನು ನಿಷೇಧಿಸಿತ್ತು. ಸಂಗೀತ ಉಪಕರಣ ನುಡಿಸುವುದನ್ನೂ ಬಹಿಷ್ಕರಿಸಿತ್ತು. ಹೊಸದಾಗಿ ಪ್ರತ್ಯೇಕವಾಗಿ ನೀತಿ ಖಾತೆಯನ್ನೇ ಪ್ರಾರಂಭಿಸಿತ್ತು. ಹೆಣ್ಣುಮಕ್ಕಳಿಗೆ ನೇಲ್ ಪಾಲಿಶ್ ಹಾಕುವಂತಿರಲಿಲ್ಲ. ಮಹಿಳೆ ವ್ಯಭಿಚಾರ ಮಾಡಿದ್ದು ಕಂಡುಬಂದರೆ ಆಕೆಯನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಲಾಗುತ್ತಿತ್ತು. ಇವ್ಯಾವುವೂ ಶರಿಯಾ ಕಾನೂನಿನಲ್ಲಿ ಇಲ್ಲ. ಇದು ತಾಲಿಬಾನ್ ಸಂಘಟನೆಯ ಶರಿಯಾ ಆವೃತ್ತಿ. 

ಹೊಸ ಸರ್ಕಾರದಲ್ಲಿ ಶರಿಯಾ ಕಾನೂನು

90ರ ದಶಕದ ಅಂತ್ಯದಲ್ಲಿ ತಾಲಿಬಾನ್ ತಂದ ವಿವಾದಾತ್ಮಕ ಕಾನೂನುಗಳೇ ಈಗ ಆತಂಕಕ್ಕೆ ಕಾರಣವಾಗಿರುವುದು. ಮತ್ತೆ ತಾಲಿಬಾನ್ ಅಂಥವೇ ಹೀನ ಕಾನೂನುಗಳನ್ನು ಜಾರಿಗೆ ತರಲಿದೆ ಎನ್ನುವ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಆದರೆ ಕಳೆದ ವಾರ ತಾಲಿಬಾನ್ ವಕ್ತಾರ ಮಹಿಳಾ ಪತ್ರಕರ್ತೆಗೆ ನೀಡಿದ ಸಂದರ್ಶನದಿಂದ ಒಂದಂಶ ಸ್ಪಷ್ಟವಾಗುತ್ತದೆ. ತಮ್ಮ ಹಳೆಯ ಕೆಟ್ಟ ಇಮೇಜಿನಿಂದ ಹೊರಬರಲು ತಾಲಿಬಾನ್ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ತಾಲಿಬಾನ್ ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುತ್ತಿದೆ. ಅವರು ಉದ್ಯೋಗ ಮಾಡಬಹುದು ಎನ್ನುತ್ತಿದೆ. ಅಲ್ಲದೆ ಸರ್ಕಾರದಲ್ಲಿ ಮಹಿಳೆಯರೂ ಪಾಲ್ಗೊಳ್ಳಬಹುದು ಎಂದು ಕರೆ ನೀಡಿದೆ. ಹೀಗಾಗಿ ಶರಿಯಾ ಕಾನೂನನ್ನು ಜಪಿಸುತ್ತಿರುವ ತಾಲಿಬಾನ್ ಈ ಬಾರಿ ತಮ್ಮ ಆವೃತ್ತಿಯ ಶರಿಯಾ ಕಾನೂನಿನಲ್ಲಿ ಏನನ್ನು ಸೇರಿಸುತ್ತಾರೆ, ಯಾವ ಬಗೆಯ ಬದಲಾವಣೆ ಮಾಡುತ್ತಾರೆ ಎಂದು ತಿಳಿಯಲು ಜಗತ್ತೇ ಕಾದು ಕುಳಿತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com