ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಹೈಪ್ರೊಫೈಲ್ ಐಸಿಸ್-ಕೆ ಉಗ್ರರು ಹತ
ಅಫ್ಘಾನಿಸ್ತಾನದಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಹೈಪ್ರೊಫೈಲ್ ಸಂಚುಕೋರ ಉಗ್ರರು ಹತರಾಗಿದ್ದಾರೆ ಎಂದು ಅಮೆರಿಕ ಸೇನೆ ಶನಿವಾರ ತಿಳಿಸಿದೆ.
Published: 28th August 2021 11:48 PM | Last Updated: 29th August 2021 02:05 AM | A+A A-

ಕಾಬೂಲ್ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆಯ ಚಿತ್ರ
ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಹೈಪ್ರೊಫೈಲ್ ಸಂಚುಕೋರ ಉಗ್ರರು ಹತರಾಗಿದ್ದಾರೆ ಎಂದು ಅಮೆರಿಕ ಸೇನೆ ಶನಿವಾರ ತಿಳಿಸಿದೆ.
ಗುರುವಾರ ಕಾಬೂಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹತ್ಯಾ ಬಾಂಬರ್ ದಾಳಿಯಲ್ಲಿ 13 ಅಮೆರಿಕದ ಸೈನಿಕರು ಮತ್ತು 169 ಮಂದಿ ಆಪ್ಘನ್ನರು ಮೃತಪಟ್ಟಿದ್ದರು. ಈ ಹೊಣೆಯನ್ನು ಐಸಿಸ್ ಖುರಾಸನ್ ಘಟಕ ಹೊತ್ತುಕೊಂಡಿತ್ತು.
ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಹೇಳಿದ್ದರು. ಅದರಂತೆ ಇಬ್ಬರು ಉಗ್ರರನ್ನು ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಒಬ್ಬರು ಗಾಯಗೊಂಡಿದ್ದಾರೆ. ಯಾವುದೇ ನಾಗರಿಕರು ಗಾಯಗೊಂಡಿಲ್ಲ ಎಂದು ಅಮೆರಿಕದ ಪ್ರಾದೇಶಿಕ ಕಾರ್ಯಾಚರಣೆಗಾಗಿ ಜಂಟಿ ಸಿಬ್ಬಂದಿಯ ಉಪ ನಿರ್ದೇಶಕ ಮೇಜರ್ ಜನರಲ್ ಹ್ಯಾಂಕ್ ಟೇಲರ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಹೆಚ್ಚುವರಿ ದಾಳಿ ಸಾಧ್ಯತೆ ಕುರಿತಂತೆ ಪ್ರತಿಕ್ರಿಯಿಸಿರುವ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ, ಬೆದರಿಕೆಗಳು ಇನ್ನೂ ತುಂಬಾ ನೈಜವಾಗಿವೆ, ಅವು ತುಂಬಾ ಕ್ರಿಯಾತ್ಮಕವಾಗಿವೆ ಮತ್ತು ನಾವು ಅವುಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಅಗತ್ಯವಿರುವವರ ಸ್ಥಳಾಂತರ ಮುಂದುವರಿಸುವಿಕೆ ಮತ್ತು ಆಗಸ್ಟ್ 31 ರೊಳಗೆ ಮಿಷನ್ ಅವಶ್ಯಕತೆಗಳನ್ನು ಪೂರೈಸುವುದು ನಮ್ಮ ಧ್ಯೇಯವಾಗಿದೆ. ಅದನ್ನು ಕಮಾಂಡರ್‌ಗಳು ಕಾರ್ಯಗತಗೊಳಿಸುತ್ತಿದ್ದಾರೆ. ನಾವು ನಮ್ಮನ್ನು ಮತ್ತು ನಮ್ಮ ಕಾರ್ಯಾಚರಣೆಗಳನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತೇವೆ ಎಂದು ಕಿರ್ಬಿ ಹೇಳಿದರು. ಈ ಕಾರ್ಯಾಚರಣೆಯ ಮುಂದಿನ ಕೆಲವು ದಿನಗಳು ಅತ್ಯಂತ ಅಪಾಯಕಾರಿ ಅವಧಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.