ಅಫ್ಘಾನಿಸ್ತಾನದಲ್ಲಿ ಅಮೆರಿಕಾ ವಾಯುದಾಳಿ: ಇಸಿಸ್-ಕೆ 'ಸಂಚುಕೋರ' ಹತ್ಯೆ
ಕಾಬೂಲ್ ಬಾಂಬ್ ಸ್ಫೋಟದ ಬೆನ್ನಲ್ಲೇ ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ನೆಲೆಯ ಮೇಲೆ ಅಮೆರಿಕಾದ ಮಿಲಿಟರಿ ಪಡೆ ವಾಯುದಾಳಿ ನಡೆಸಿದ್ದು, ದಾಳಿಯಲ್ಲಿ ಒಬ್ಬ ಪ್ರಮುಖ ಉಗ್ರ ಹತನಾಗಿದ್ದಾನೆಂದು ತಿಳಿದುಬಂದಿದೆ.
Published: 28th August 2021 11:27 AM | Last Updated: 28th August 2021 12:10 PM | A+A A-

ಕಾಬುಲ್ ವಿಮಾನ ನಿಲ್ದಾಣ
ಕಾಬೂಲ್: ಕಾಬೂಲ್ ಬಾಂಬ್ ಸ್ಫೋಟದ ಬೆನ್ನಲ್ಲೇ ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ನೆಲೆಯ ಮೇಲೆ ಅಮೆರಿಕಾದ ಮಿಲಿಟರಿ ಪಡೆ ವಾಯುದಾಳಿ ನಡೆಸಿದ್ದು, ದಾಳಿಯಲ್ಲಿ ಒಬ್ಬ ಪ್ರಮುಖ ಉಗ್ರ ಹತನಾಗಿದ್ದಾನೆಂದು ತಿಳಿದುಬಂದಿದೆ.
ಈ ಕುರಿತು ಯುಎಸ್ ಮಿಲಿಟರಿ ಪಡೆ ಮಾಹಿತಿ ನೀಡಿದ್ದು, ಇಸ್ಲಾಮಿಕ್ ಸ್ಟೇಟ್ ಸದಸ್ಯರ ವಿರುದ್ದ ದಾಳಿ ನಡೆಸಲಾಗಿದ್ದು, ದಾಳಿಯಿಂದ ಅಫ್ಘನ್ ನಾಗರಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿಸಿದೆ.
ಮೊನ್ನೆ ಕಾಬುಲ್ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟಿಸಿದ್ದ ಉಗ್ರರು, 180ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿದ್ದರು. ದಾಳಿಯೆ ಹೊಣೆಯನ್ನು ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಸಂಘಟನೆ ಹೊತ್ತುಕೊಂಡಿತ್ತು.
ಇದರ ಬೆನ್ನಲ್ಲೇ ಎಚ್ಚರಿಗೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು, ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದರು.
ಇದರಂತೆ ಅಮೆರಿಕಾ ಪ್ರತೀಕಾರ ತೀರಿಸಿಕೊಂಡಿದ್ದು, ಖೋರಸಾನ್ ಘಟಕದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಸದಸ್ಯನನ್ನು ಗುರಿ ಮಾಡಿ ದಾಳಿ ನಡೆಸಿದೆ. ದಾಳಿಯಲ್ಲಿ ಇಸಿಸ್-ಕೆ 'ಸಂಚುಕೋರ' ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸ್ಫೋಟ ಸಂಭವಿಸುವುದಕ್ಕೂ ಮೂರು ದಿನ ಮೊದಲೇ ಅಮೆರಿಕ ಅದರ ಬಗ್ಗೆ ಸುಳಿವು ನೀಡಿತ್ತು. ಆದರೂ ಬಾಂಬ್ ಸ್ಫೋಟವನ್ನು ತಪ್ಪಿಸಲು ಆಗಲಿಲ್ಲ. ಕುತೂಹಲವೆಂದರೆ, ಕಾಬೂಲ್ನಲ್ಲಿ ಉಗ್ರರಿಂದ ಮತ್ತೊಂದು ಬಾಂಬ್ ಸ್ಫೋಟ ದಾಳಿ ಆಗುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಕುತೂಹಲದ ಸಂಗತಿ ಎಂದರೆ, ಒಂದು ಕಾಲದಲ್ಲಿ ಅಮೆರಿಕದ ಪರಮ ಶತ್ರುವಾಗಿದ್ದ ತಾಲಿಬಾನ್ ಇದೀಗ ತನ್ನ ನೆಲದಲ್ಲಿ ಅಮೆರಿಕದ ಡ್ರೋನ್ ದಾಳಿಗೆ ಅವಕಾಶ ಮಾಡಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಅಫ್ಘಾನಿಸ್ತಾನದಲ್ಲಿ ದಿನೇ ದಿನೇ ಶಕ್ತಿ ವೃದ್ಧಿಸಿಕೊಳ್ಳುತ್ತಿರುವುದು ತಾಲಿಬಾನ್ಗೂ ದೊಡ್ಡ ತಲೆನೋವಾಗಿದೆ. ಬೇರೆ ದೇಶಗಳ ಮೇಲೆ ದಾಳಿ ನಡೆಸಲು ಯಾವುದೇ ಉಗ್ರ ಸಂಘಟನೆಗಳಿಗೆ ಅಫ್ಘನ್ ನೆಲವನ್ನು ಉಪಯೋಗಿಸಿಕೊಳ್ಳಲು ಬಿಡುವುದಿಲ್ಲ ಎಂದು ಅನೇಕ ಬಾರಿ ತಾಲಿಬಾನ್ ಸ್ಪಷ್ಟಪಡಿಸಿದೆ. ಅದು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಉದ್ದೇಶಿಸಿ ನೀಡಿದ ಎಚ್ಚರಿಕೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಸ್ಥಾಪಿಸಿದ ಬೆನ್ನಲ್ಲೇ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೆಚ್ಚು ಚುರುಕು ಕಂಡಿದೆ. ಹೀಗಾಗಿ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯನ್ನ ಅಫ್ಘಾನಿಸ್ತಾನದಲ್ಲಿ ಹತ್ತಿಕ್ಕುವುದು ಅಮೆರಿಕ ಮತ್ತು ತಾಲಿಬಾನ್ ಎರಡಕ್ಕೂ ಬಹಳ ಮುಖ್ಯ.
ಇದೇ ವೇಳೆ, ಕಾಬೂಲ್ ವಿಮಾನ ನಿಲ್ದಾಣದ ಬಳಿ ಅಮೆರಿಕದ ಸೈನಿಕರು ಇನ್ನೂ ಇದ್ದು. ಅಫ್ಘಾನಿಸ್ತಾದಲ್ಲಿರುವ ತನ್ನ ದೇಶದ ಎಲ್ಲಾ ನಾಗರಿಕರನ್ನ ಹೊರಸಾಗಿಸಲು ನೆರವಾಗುತ್ತಿದ್ದಾರೆ.
ಈ ತಿಂಗಳಾಂತ್ಯದವರೆಗೆ ಅಮೆರಿಕ ಗಡುವು ಪಡೆದಿದೆ. ಇದೇ ವೇಳೆ, ಕಾಬೂಲ್ ಏರ್ ಪೋರ್ಟ್ನ ಸಂಪೂರ್ಣ ನಿಯಂತ್ರಣ ಪಡೆಯಲು ತಾಲಿಬಾನ್ ಪ್ರಯತ್ನಿಸುತ್ತಿದೆ.