ನಿಮಗೆ ತಿಳಿದಿರಬೇಕಾದ ತಾಲಿಬಾನಿ ನಾಯಕರು: ನೂತನ ಸರ್ಕಾರದಲ್ಲಿ ಅವರ ಪಾತ್ರ

ಈ ಹಿಂದಿನ ತಾಲಿಬಾನ್ ಸರ್ಕಾರದಲ್ಲಿ ಯಾರು ಯಾರು ಯಾವಯಾವ ಖಾತೆಯನ್ನು, ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಸ್ಪಷ್ಟತೆ ನೀಡಲಾಗಿರಲಿಲ್ಲ. ಈಗಲೂ ಆ ಸಂಸ್ಕೃತಿ ಮುಂದುವರಿಯುವ ಲಕ್ಷಣಗಳು ಗೋಚರಿಸಿದೆ. 
ಮುಲ್ಲಾ ಅಬ್ದುಲ್ ಘನಿ ಬರಾದರ್
ಮುಲ್ಲಾ ಅಬ್ದುಲ್ ಘನಿ ಬರಾದರ್

ಕಾಬೂಲ್: ತಾಲಿಬಾನ್ ಇನ್ನೂ ಹೊಸ ಸರ್ಕಾರದ ಘೋಷಣೆಯನ್ನು ಮಾಡಿಲ್ಲ. ಭಾನುವಾರವಷ್ಟೇ ತನ್ನ ಸರ್ವೋಚ್ಛ ನಾಯಕ ಹಿಬತುಲ್ಲಾ ಅಕುಂಡ್ಜಾದ ದೇಶದಲ್ಲಿದ್ದು ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಾಲಿಬಾನ್ ತಿಳಿಸಿತ್ತು. 

ಹಿಂದಿನಿಂದಲೂ ತಾಲಿಬಾನ್ ಗೌಪ್ಯತೆ ಕಾಪಾಡಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದೆ. ಈ ಹಿಂದೆಯೂ, ಅಂದರೆ 1996- 2001ರ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯಿದ್ದಾಗಲೂ ತಾಲಿಬಾನ್ ಸರ್ಕಾರದಲ್ಲಿ ಯಾರು ಯಾರು ಯಾವಯಾವ ಖಾತೆಯನ್ನು, ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಸ್ಪಷ್ಟತೆ ನೀಡಲಾಗಿರಲಿಲ್ಲ. ಈಗಲೂ ಆ ಸಂಸ್ಕೃತಿ ಮುಂದುವರಿಯುವ ಲಕ್ಷಣಗಳು ಗೋಚರಿಸಿದೆ. 

ಹಿಬತುಲ್ಲಾ ಅಕುಂಡ್ಜಾದ, ಸರ್ವೋಚ್ಚ ತಾಲಿಬಾನ್ ನಾಯಕ

2016ರಲ್ಲಿ ತಾಲಿಬಾನ್ ಸರ್ವೋಚ್ಛ ನಾಯಕ ಮುಲ್ಲಾ ಮನ್ಸೂರ್ ಅಖ್ತರ್ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಹತನಾಗಿದ್ದ. ಆಗ ಆತನ ಸ್ಥಾನವನ್ನು ತುಂಬಿದ್ದು ಇದೇ ಹಿಬತುಲ್ಲಾ ಅಕುಂಡ್ಜಾದ. ಈ ಹುದ್ದೆಗೆ ಏರುವ ಮುನ್ನ ಚಿಕ್ಕ ಪುಟ್ಟ ಹುದ್ದೆಯನ್ನು ಆತ ಸಂಘಟನೆಯಲ್ಲಿ ನಿರ್ವಹಿಸಿದ್ದ. ಆತನನ್ನು ಮಿಲಿಟರಿ ಕಮ್ಯಾಂಡರ್ ಎಂದು ಪರಿಗಣಿಸುವುದಕ್ಕಿಂತ ಹೆಚ್ಚಾಗಿ ತಾಲಿಬಾನ್ ಆತನನ್ನು ಧಾರ್ಮಿಕ ಮುಖಂಡನಾಗಿ ಪರಿಗಣಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 
 
ಆತ ತಾಲಿಬಾನ್ ಸರ್ವೋಚ್ಛ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ಶ್ಲಾಘಿಸಿದ್ದ. ಆತನ ಸಹಾಯದಿಂದಾಗಿ ತಾಲಿಬಾನ್ ಸಂಘಟನೆಯಲ್ಲಿ ಹಿಬತುಲ್ಲಾ ತನ್ನ ಸ್ಥನವನ್ನು ಗಟ್ಟಿ ಮಾಡಿಕೊಂಡಿದ್ದ. ಇಂದಿಗೂ ಹಿಬತುಲ್ಲಾ ಬಗ್ಗೆ ಜಗತ್ತಿಗೆ ಹೆಚ್ಚಿನ ಮಾಹಿತಿ ಲಭ್ಯವಿಲ. ಹಬ್ಬಗಲ ಸಂಅಯದಲ್ಲಿ ಆತ ನೀಡುತ್ತಿದ್ದ ಧಾರ್ಮಿಕ ಸಂದೇಶಗಳಷ್ಟೇ ಹೊರಜಗತ್ತಿಗೆ ಗೊತ್ತು. 

ಮುಲ್ಲಾ ಅಬ್ದುಲ್ ಘನಿ ಬರಾದರ್, ತಾಲಿಬಾನ್ ಸ್ಥಾಪಕ ಸದಸ್ಯ

ಅಫ್ಘಾನಿಸ್ತಾನದಲ್ಲಿ ಸೋವಿಯತ್ ಕಾಳಗ ನಡೆಯುತ್ತಿದ್ದ ಸಮಯದಲ್ಲಿ ಒಕ್ಕಣ್ಣ, ಕುಖ್ಯಾತ ಧಾರ್ಮಿಕ ನಾಯಕ  ಮುಲ್ಲಾ ಓಮರ್ ಜೊತೆ ಅಬ್ದುಲ್ ಘನಿ ಕೂಡಾ ಬಂದೂಕು ಹಿಡಿದು ರಷ್ಯನ್ನರ ವಿರುದ್ಧ ಹೋರಾಟ ನಡೆಸಿದ್ದ ಎನ್ನುವ ಕಥೆ ತಾಲಿಬಾನಿಗಳ ನಡುವೆ ಪ್ರಚಲಿತದಲ್ಲಿದೆ. 90ರ ದಶಕದಲ್ಲಿವರಿಬ್ಬರೂ ಸೇರಿ ತಾಲಿಬಾನ್ ಸಂಘಟನೆಯನ್ನು ಸ್ಥಾಪಿಸಿದ್ದರು. 2010ರಲ್ಲ್ಲಿ ಅಬ್ದುಲ್ ಘನಿ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿದ್ದ. 2018ರಲ್ಲಿ ಅಮೆರಿಕದ ಒತ್ತಾಯದ ಮೇರೆಗೆ ಪಾಕಿಸ್ತಾನ ಆತನನ್ನು ಬಿಡುಗಡೆಗೊಳಿಸಿತ್ತು. ನಂತರವೇ ಆತ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥನಾಗಿ ಆಯ್ಕೆಯಾಗಿದ್ದು. ನಂತರ ಅಮೆರಿಕ ಸೈನಿಕರ ವಾಪಸಾತಿ ಒಪ್ಪಂದದ ಮಾತುಕತೆಗೆ ತಾಲಿಬಾನ್ ಮುಂದೆ ಬಂದಿದ್ದು.

ಸಿರಾಜುದ್ದೀನ್ ಹಕ್ಕಾನಿ

ತಾಲಿಬಾನ್ ಸಂಘಟನೆಯ ಉಪನಾಯಕ ಮತ್ತು ಕುಖ್ಯಾತ ಹಕ್ಕಾನಿ ಉಗ್ರ ಜಾಲದ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ ಕುರಿತು ಕೇಳದ ರಾಜಕೀಯ ಪರಿಣತನಿಲ್ಲ. ಅಫ್ಘಾನಿಸ್ತಾನದ ಅಪಾಯಕಾರಿ ಉಗ್ರನಾಯಕರಲ್ಲಿ ಈತನ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಆತನ ಜಾಲವನ್ನು ಜಗತ್ತಿನ ಅಪಾಯಕಾರಿ ಉಗ್ರಜಾಲ ಪಟ್ಟಿಗೆ ಅಮೆರಿಕ ಸೇರಿಸಿದೆ. ಕಾಬೂಲಿನಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿರುವ ಆತ್ಮಹತ್ಯಾ ಬಾಂಬ್ ದಾಳಿಗಳು, ಸರ್ಕಾರಿ ಅಧಿಕಾರಿಗಳ ಹತ್ಯೆ ಮತ್ತಿತರ ಕುಕೃತ್ಯಗಳಿಗೆ ಹಕ್ಕಾನಿ ಜಾಲವೇ ಕಾರಣ ಎನ್ನುವ ಗುಮಾನಿಯಿದೆ. 


ಮುಲ್ಲಾ ಯಾಕೂಬ್

ತಾಲಿಬಾನ್ ಸ್ಥಾಪಕ ಸದಸ್ಯ ಮುಲ್ಲಾ ಓಮರ್ ಪುತ್ರನಾದ ಮುಲ್ಲಾ ಯಾಕೂಬ್ ತಾಲಿಬಾನ್ ಸಂಘಟನೆಯಲ್ಲಿನ ಶಕ್ತಿಶಾಲಿ ಸೇನಾ ಸಮಿತಿಯ ಮುಖ್ಯಸ್ಥನಾಗಿದ್ದಾನೆ. ತಾಲಿಬಾನ್ ಸಂಘಟನೆಯ ಹುಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಮುಲ್ಲಾ ಓಮರ್ ಜಿಹಾದಿ ಚಳವಳಿಯ ಹರಿಕಾರ ಎನ್ನುವ ಹೆಸರಿಗೆ ಪಾತ್ರನಾಗಿದ್ದಾನೆ. ಆತನ ತಂದೆಯ ಹೆಸರಿನ ಕಾರಣ ಆತನ ಪುತ್ರನಿಗೆ ಸಂಘಟನೆಯಲ್ಲಿ ಎಲ್ಲಿಲ್ಲದ ಗೌರವವಿದೆ. ಕೇವಲ ನಾಮಕಾವಸ್ಥೆ ಆತನಿಗೆ ಜವಾಬ್ದಾರಿ ನೀಡಲಾಗಿದೆ ಎನ್ನುವ ಮಾತೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com