
ಟ್ರಂಪ್ ಬಗ್ಗೆ ಮಾತನಾಡಿ ಹೆಚ್ಚು ಸಮಯ ವ್ಯಯಿಸುವುದಿಲ್ಲ: ಶ್ವೇತ ಭವನ
ವಾಷಿಂಗ್ ಟನ್: ಅಮೆರಿಕದ ನಿಕಟಪೂರ್ವ ಡೊನಾಲ್ಡ್ ಟ್ರಂಪ್ ಅಧಿಕಾರದ ಅವಧಿಯ ನಂತರವೂ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ.
ಎರಡು ಬಾರಿ ವಾಗ್ದಂಡನೆಗೆ ಗುರಿಯಾಗಿದ್ದ ಏಕೈಕ ಅಮೆರಿಕದ ಅಧ್ಯಕ್ಷರೆಂಬ ಹಣೆಪಟ್ಟಿ ಹೊತ್ತನಂತರವೂ ಸುದ್ದಿ-ಮಾಧ್ಯಮಗಳಲ್ಲಿ ಟ್ರಂಪ್ ಹವಾ ಕಡಿಮೆಯಾಗಿಲ್ಲ. ಈಗ ಟ್ರಂಪ್ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಮಾತನಾಡಿದ್ದು, ಟ್ರಂಪ್ ಬಗ್ಗೆ ಮಾತನಾಡಿ ಹೆಚ್ಚು ಸಮಯ ವ್ಯಯಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ನಂಬುವುದಕ್ಕೆ ಕಷ್ಟವಾಗಬಹುದು ಆದರೆ ನಾವು ಮಾಜಿ ಅಧ್ಯಕ್ಷರ ಬಗ್ಗೆ ಯೋಚಿಸುವುದಕ್ಕಾಗಲಿ ಮಾತನಾಡುವುದಕ್ಕಾಗಲಿ ನಾವು ಹೆಚ್ಚು ಸಮಯ ವ್ಯಯಿಸುವುದಿಲ್ಲ, ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಟ್ರಂಪ್ ಬಗ್ಗೆ ಯೋಚಿಸುವುದಕ್ಕಾಗಲೀ, ಮಾತನಾಡುವುದಕ್ಕಾಗಲೀ ಹೆಚ್ಚು ಸಮಯ ಖರ್ಚು ಮಾಡುವುದಿಲ್ಲ ಎಂದು ಜೆನ್ ಸಾಕಿ ತಿಳಿಸಿದ್ದಾರೆ.
ಎಂದಿನಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಜೆನ್ ಸಾಕಿಗೆ ಪತ್ರಕರ್ತರು "ಟ್ರಂಪ್ ಅನುಪಸ್ಥಿತಿ ನಿಮ್ಮ ಕೆಲಸಗಳನ್ನು ಸುಲಭಗೊಳಿಸಿದೆಯೇ ಅಥವಾ ಶ್ವೇತ ಭವನದ ಕೆಲಸಗಳನ್ನು ಸುಲಭಗೊಳಿಸಿದೆಯೇ, ಪ್ರಮುಖವಾಗಿ ಕೋವಿಡ್-19 ಮಾತುಕತೆಯ ಸಂದರ್ಭಗಳಲ್ಲಿ? ಇದನ್ನು ತಿಳಿದುಕೊಳ್ಳುವ ಕುತೂಹಲವಿದೆ ಎಂದು ಪತ್ರಕರ್ತರು ಜೆನ್ ಸಾಕಿಗೆ ಪ್ರಶ್ನೆ ಕೇಳಿದ್ದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಜೆನ್ ಸಾಕಿ, ಈ ಪ್ರಶ್ನೆ ರಿಪಬ್ಲಿಕನ್ ಸದಸ್ಯರಿಗೆ ಹೆಚ್ಚು ಸೂಕ್ತವಾದದ್ದು, ಆದರೆ ನಾಮಗಂತೂ ಟ್ವಿಟರ್ ನಲ್ಲಿ ಟ್ರಂಪ್ ಅನುಪಸ್ಥಿತಿ ಬಾಧಿಸುತ್ತಿಲ್ಲ ಎಂದು ಜೆನ್ ಸಾಕಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತು ತಪ್ಪು ಮಾಹಿತಿಯನ್ನು ನೀಡಿ ಟ್ವೀಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ನಿರ್ಬಂಧ ವಿಧಿಸಲಾಗಿದೆ.