ಟ್ರಂಪ್-ಕಿಮ್ ಮಾತುಕತೆಯ ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದ ಬಿಬಿಸಿ
ಪ್ರಜಾಪ್ರಭುತ್ವ ದೇಶವೊಂದು ಸರ್ವಾಧಿಕಾರಿ ದೇಶದೊಂದಿಗೆ ಮಾತುಕತೆ ನಡೆಸುವುದೇ ವಿಶೇಷ. ಅದರಲ್ಲೂ ಟ್ರಂಪ್- ಕಿಮ್ ರಂತಹ ನಾಯಕರು ಮಾತುಕತೆ ನಡೆಸಿದ್ದು 2 ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಹೆಡ್ಲೈನ್ ಗಳನ್ನು ಆವರಿಸಿಕೊಂಡಿತ್ತು...
Published: 22nd February 2021 06:31 PM | Last Updated: 22nd February 2021 06:31 PM | A+A A-

ಟ್ರಂಪ್-ಕಿಮ್ ಮಾತುಕತೆ (ಸಂಗ್ರಹ ಚಿತ್ರ)
ಸಿಯೋಲ್: ಪ್ರಜಾಪ್ರಭುತ್ವ ದೇಶವೊಂದು ಸರ್ವಾಧಿಕಾರಿ ದೇಶದೊಂದಿಗೆ ಮಾತುಕತೆ ನಡೆಸುವುದೇ ವಿಶೇಷ. ಅದರಲ್ಲೂ ಟ್ರಂಪ್- ಕಿಮ್ ರಂತಹ ನಾಯಕರು ಮಾತುಕತೆ ನಡೆಸಿದ್ದು ಎರಡು ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಹೆಡ್ಲೈನ್ ಗಳನ್ನು ಆವರಿಸಿಕೊಂಡಿತ್ತು. ಈಗ ಇದೇ ವಿಷಯ ಮತ್ತೊಮ್ಮೆ ಸದ್ದು ಮಾಡುತ್ತಿದೆ.
ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 2019 ರಲ್ಲಿ ವಿಯೆಟ್ನಾಮ್ ನಲ್ಲಿ ಸಭೆ ನಡೆಸಿದಾಗ ಟ್ರಂಪ್- ಕಿಮ್ ಜಾಂಗ್ ಉನ್ ನಡುವಿನ ಕೆಲವು ಸ್ವಾರಸ್ಯಕರ ಹಾಗೂ ಅಚ್ಚರಿಯ ಅಂಶಗಳನ್ನು ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಬಹಿರಂಗಪಡಿಸಿದೆ.
ಜಗತ್ತು ಎಂದೂ ಕಾಣದ ವಿಲಕ್ಷಣ ಗುಣಗಳನ್ನು ಹೊಂದಿದ್ದ ಟ್ರಂಪ್ ಈ ಸಭೆಯಲ್ಲಿ ಅತ್ಯಂತ ನುರಿತ ರಾಜತಾಂತ್ರಿಕ ಅಧಿಕಾರಿಗಳೂ ದಂಗಾಗಿ ಹುಬ್ಬೇರಿಸುವಂತೆ ನಡೆದುಕೊಂಡಿದ್ದರು ಎನ್ನುತ್ತಿದೆ ಬಿಬಿಸಿಯ ಈ ಡಾಕ್ಯುಮೆಂಟರಿ.
ಆಗಿದ್ದು ಇಷ್ಟೇ, ಸಾಮಾಜಿಕ ಜಾಲತಾಣಗಳಲ್ಲಿ, ಭಾಷಣಗಳಲ್ಲಿ ಒಬ್ಬರನ್ನೊಬ್ಬರು ನಿಂದಿಸಿ, ಬೆದರಿಕೆ ಹಾಕುತ್ತಿದ್ದ ಉಭಯ ನಾಯಕರೂ ಭೇಟಿಯಾದಾಗ, ನಾನು ನಿಮ್ಮನ್ನು ಏರ್ ಫೋರ್ಸ್ ಒನ್ (ಅಮೆರಿಕ ಅಧ್ಯಕ್ಷರ ಅಧಿಕೃತ ವಿಮಾನ) ನಲ್ಲೇ ನಿಮ್ಮೂರಿಗೆ ಕರೆದುಕೊಂಡು ಹೋಗಿ ಬಿಡಲೇ? ಎಂದು ಡೊನಾಲ್ಡ್ ಟ್ರಂಪ್ ಕಿಮ್ ಜಾಂಗ್ ಉನ್ ಗೆ ಕೇಳಿದ್ದಾರೆ.
2019 ರಲ್ಲಿ ವಿಯೆಟ್ನಾಮ್ ನಲ್ಲಿ ನಡೆದ ಸಭೆ ಮುಕ್ತಾಯಗೊಂಡ ನಂತರ ಡೊನಾಲ್ಡ್ ಟ್ರಂಪ್ ಕಿಮ್ ಜಾಂಗ್ ಉನ್ ಅವರನ್ನುದ್ದೇಶಿಸಿ "ನಿಮಗೆ ಬೇಕಾದರೆ, ಏರ್ ಫೋರ್ಸ್ ಒನ್ ನಲ್ಲಿ ಕೇವಲ ಎರಡು ಗಂಟೆಗಳಲ್ಲಿ ನೀವು ಉತ್ತರ ಕೊರಿಯಾಗೆ ತಲುಪಿಸುತ್ತೇನೆ" ಎಂದು ಹೇಳಿದ್ದರಂತೆ ಆದರೆ ಕಿಮ್ ಅದಕ್ಕೆ ಒಪ್ಪಿಗೆ ನೀಡಲಿಲ್ಲ ಬಿಬಿಸಿ ವರದಿ ಮಾಡಿದೆ.
ಒಂದು ವೇಳೆ ಕಿಮ್ ಅದಕ್ಕೆ ಒಪ್ಪಿಕೊಂಡಿದ್ದರೆ, ಅಮೆರಿಕ ಅಧ್ಯಕ್ಷರ ಅಧಿಕೃತ ವಿಮಾನದಲ್ಲಿ ಉತ್ತರ ಕೊರಿಯಾ ನಾಯಕ ಇರುವುದು ಹಾಗೂ ಅದು ಉತ್ತರ ಕೊರಿಯಾದ ವಾಯು ಪ್ರದೇಶವನ್ನು ಪ್ರವೇಶಿಸಿ ಹಲವಾರು ಭದ್ರತಾ ಮುನ್ನೆಚ್ಚರಿಕೆಗಳಿಗೆ ಆಸ್ಪದ ಮಾಡಿಕೊಡುತ್ತಿತ್ತು ಎಂದು ವಿಶ್ಲೇಷಿಸಲಾಗಿದೆ.
ಕಿಮ್ ಡೊನಾಲ್ಡ್ ಟ್ರಂಪ್ ಅವರ ಆಹ್ವಾನವನ್ನು ಒಪ್ಪಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಪರಿಷತ್ ನಲ್ಲಿ ಏಷ್ಯಾ ವ್ಯವಹಾರಗಳ ತಜ್ಞರಾಗಿದ್ದ ಮ್ಯಾಥ್ಯೂ ಪಾಟಿಂಗರ್ ಹೇಳಿದ್ದಾರೆ.
ಕಿಮ್ ಚೀನಾ ಮೂಲಕ ರೈಲಿನಲ್ಲಿ ಹಲವು ದಿನಗಳು ಸಂಚರಿಸಿ ಬಂದಿದ್ದಾರೆಂಬುದು ಅಧ್ಯಕ್ಷರಿಗೆ ತಿಳಿದಿತ್ತು. ಅದಕ್ಕಾಗಿಯೇ ಅವರು "ಕೇವಲ ಎರಡು ಗಂಟೆಗಳಲ್ಲಿ ನಿಮ್ಮನ್ನು ಉತ್ತರ ಕೊರಿಯಾಗೆ ತಲುಪಿಸುತ್ತೇನೆ" ಎಂಬ ಆಹ್ವಾನವಿತ್ತಿದ್ದನ್ನು ಮ್ಯಾಥ್ಯೂ ಪಾಟಿಂಗರ್ ಬಿಬಿಸಿ ಎದುರು ಬಹಿರಂಗಪಡಿಸಿದ್ದಾರೆ.
ಇದಕ್ಕೂ ಮುನ್ನ 2018 ರಲ್ಲಿ ಸಿಂಗಪೂರ್ ನಲ್ಲಿ ನಡೆದ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ದಿ ಬೀಸ್ಟ್ ಕಾರಿನ ಒಳಭಾಗವನ್ನು ಕಿಮ್ ಜಾಂಗ್ ಉನ್ ಗೆ ತೋರಿಸುವ ಮೂಲಕ ಜಗತ್ತಿನೆದುರು ಸ್ನೇಹ-ಸೌಹಾರ್ದತೆಯನ್ನು ಪ್ರದರ್ಶಿಸಿದ್ದರು.