ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮತಿ

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಸರ್ಕಾರ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.

Published: 28th February 2021 11:16 AM  |   Last Updated: 28th February 2021 11:16 AM   |  A+A-


Johnson and Johnson's Covid vaccine

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆ

Posted By : Srinivasamurthy VN
Source : PTI

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಸರ್ಕಾರ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಂಸ್ಥೆಯ ಕೋವಿಡ್‌ ಲಸಿಕೆಯ ಪ್ರಯೋಗಾತ್ಮಕ ವರದಿಯಲ್ಲಿ ಲಸಿಕೆ ಸೋಂಕಿತರ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಮಾಹಿತಿ ಬಂದಿತ್ತು. ಇದರ  ಬೆನ್ನಲ್ಲೇ ಅಮೆರಿಕ ಸರ್ಕಾರ ತನ್ನ ದೇಶದಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.  ಆ ಮೂಲಕ ಅಮೆರಿಕದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಅನುಮತಿ ದೊರೆತಿರುವ ಮೂರನೇ ಲಸಿಕೆ ಇದಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೈಝರ್‌ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮತಿ ನೀಡಲಾಗಿತ್ತು.

ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಈ ಲಸಿಕೆಯ ಒಂದು ಡೋಸ್‌ ಹಾಕಿಸಿಕೊಂಡರೆ ಸಾಕಾಗುತ್ತದೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆಯನ್ನು ಸಾಮಾನ್ಯ ಫ್ರಿಡ್ಜ್‌ ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ, ಇದರಿಂದಾಗಿ ಸಾಗಣೆ ಮತ್ತು ಸಂಗ್ರಹ ಸರಳವಾಗಲಿದೆ. ಈವರೆಗೂ ಅಮೆರಿಕದಲ್ಲಿ 6.5 ಕೋಟಿ ಜನರು ಫೈಝರ್‌ ಮತ್ತು ಮಾಡರ್ನಾ ಲಸಿಕೆ ಡೋಸ್‌ ಹಾಕಿಸಿಕೊಂಡಿದ್ದಾರೆ. ಆ ಎರಡೂ ಲಸಿಕೆಗಳೂ ಸುಮಾರು ಶೇ 95ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿಯಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ  ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಎಫ್‌ಡಿಎ, 'ಹೊಸ ಸ್ವರೂಪದ ಕೊರೊನಾ ವೈರಸ್‌ ಸೇರಿದಂತೆ ಕೋವಿಡ್‌-19 ನಿಯಂತ್ರಣದಲ್ಲಿ ಲಸಿಕೆಯ ಬಳಕೆ ಪರಿಣಾಮಕಾರಿಯಾಗಲಿದೆ ಎಂದು ಹೇಳಿದೆ.

ಇದೇ ವಿಚಾರವಾಗಿ ಪ್ರಕಟಣೆ ಹೊರಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, 'ಎಲ್ಲ ಅಮೆರಿಕನ್ನರಿಗೂ ಇದು ಒಳ್ಳೆಯ ಸುದ್ದಿಯಾಗಿದೆ, ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನದಲ್ಲಿ ಇದು ಪ್ರೋತ್ಸಾಹದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಕೋವಿಡ್‌ ಲಸಿಕೆಯು ಅಮೆರಿಕದಲ್ಲಿ ಶೇ 85.9ರಷ್ಟು ಪರಿಣಾಮಕಾರಿಯಾಗಿರುವುದು ತಿಳಿದು ಬಂದಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿರುವ ಪ್ರಯೋಗಗಳಲ್ಲಿ ಶೇ 81.7 ಹಾಗೂ ಬ್ರೆಜಿಲ್‌ನಲ್ಲಿ ಶೇ 87.6ರಷ್ಟು ಪರಿಣಾಮಕಾರಿಯಾಗಿರುವುದು ದಾಖಲಾಗಿದೆ. ಒಟ್ಟು 39,321 ಜನರನ್ನು ಲಸಿಕೆ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಮಾರ್ಚ್‌ ಅಂತ್ಯದೊಳಗೆ ಲಸಿಕೆಯ 2 ಕೋಟಿ ಡೋಸ್‌ಗಳ ಪೂರೈಕೆ ಮಾಡುವುದಾಗಿ ಜಾನ್ಸನ್‌ ಆ್ಯಂಡ್‌ ಜಾನ್ಸನ್ ಹೇಳಿದೆ. ಜೂನ್‌ ವೇಳೆಗೆ 10 ಕೋಟಿ ಡೋಸ್‌ಗಳಷ್ಟು ಲಸಿಕೆ ಸಿಗಲಿದೆ. 
 

Stay up to date on all the latest ಅಂತಾರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp