ಮಾರ್ಚ್ 31ರವರೆಗೆ ವಲಸೆ, ಕೆಲಸದ ವೀಸಾಗೆ ಅಮೆರಿಕದಲ್ಲಿ ನಿರ್ಬಂಧ ಮುಂದುವರಿಕೆ: ಸಾವಿರಾರು ಮಂದಿ ವಿದೇಶಿ ನೌಕರರಿಗೆ ಸಂಕಷ್ಟ
ಕೋವಿಡ್-19 ಸಾಂಕ್ರಾಮಿಕ ನಡುವೆ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿರುವ ಸಂದರ್ಭದಲ್ಲಿ ದೇಶದ ನಾಗರಿಕರನ್ನು ರಕ್ಷಿಸಲು ವಲಸೆ ನೀತಿಗಳಿಗೆ ಸಂಬಂಧಿಸಿದ ನಿಷೇಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದುವರಿಸಿದ್ದಾರೆ.
Published: 01st January 2021 10:39 AM | Last Updated: 01st January 2021 12:24 PM | A+A A-

ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕ ನಡುವೆ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿರುವ ಸಂದರ್ಭದಲ್ಲಿ ದೇಶದ ನಾಗರಿಕರನ್ನು ರಕ್ಷಿಸಲು ವಲಸೆ ನೀತಿಗಳಿಗೆ ಸಂಬಂಧಿಸಿದ ನಿಷೇಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದುವರಿಸಿದ್ದಾರೆ.
ಇದರಿಂದ ಹಲವು ಗ್ರೀನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮತ್ತು ತಾತ್ಕಾಲಿಕ ವಿದೇಶ ಕೆಲಸಗಾರರ ವೀಸಾದಡಿ ಅಮೆರಿಕಕ್ಕೆ ಹೋದವರಿಗೆ ಸಮಸ್ಯೆಯಾಗಲಿದೆ. ಈ ನೀತಿ ಮಾರ್ಚ್ ವರೆಗೆ ಮುಂದುವರಿಯಲಿದೆ. ಕಳೆದ ಏಪ್ರಿಲ್ ಮತ್ತು ಜೂನ್ ನಲ್ಲಿ ಹೊರಡಿಸಲಾಗಿದ್ದ ಈ ನಿಷೇಧ ನೀತಿ ನಿನ್ನೆಗೆ ಮುಕ್ತಾಯವಾಗಿತ್ತು. ಆದರೆ ಅದನ್ನು ನಿನ್ನೆ ಡೊನಾಲ್ಡ್ ಟ್ರಂಪ್ ಮಾರ್ಚ್ 31ರವರೆಗೆ ಮುಂದುವರಿಸಿದ್ದಾರೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಇದೇ 20ರಂದು ಅಧಿಕಾರ ವಹಿಸಿಕೊಳ್ಳಲಿರುವ ಜೊ ಬೈಡನ್ ಈ ನಿರ್ಬಂಧವನ್ನು ಟೀಕಿಸಿದ್ದರು, ಅವರು ಅಧಿಕಾರಕ್ಕೆ ಬಂದ ಕೂಡಲೇ ಈ ನಿಷೇಧವನ್ನು ಹಿಂತೆಗೆದುಕೊಳ್ಳುತ್ತಾರೆಯೇ ಎಂಬ ಬಗ್ಗೆ ಹೇಳಿಕೆ ನೀಡಿಲ್ಲ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಸುಗ್ರೀವಾಜ್ಞೆ ಅಧಿಕಾರ ಮೂಲಕ ನಿನ್ನೆ ಈ ಆದೇಶ ಹೊರಡಿಸಿದ್ದಾರೆ.