ಟ್ರಂಪ್ ಗೆ ತಾತ್ಕಾಲಿಕ ನಿರಾಳ: ಉಚ್ಚಾಟನೆಗೆ 25 ನೇ ತಿದ್ದುಪಡಿ ಹೇರಿಕೆ ತಿರಸ್ಕರಿಸಿದ ಉಪಾಧ್ಯಕ್ಷ ಮೈಕ್ ಪೆನ್ಸ್
ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಸಂವಿಧಾನದ 25 ನೇ ತಿದ್ದುಪಡಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಾನು ಬೆಂಬಲಿಸುವುದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮಂಗಳವಾರ ಸದನ ಮುಖಂಡರಿಗೆ ತಿಳಿಸಿದ್ದಾರೆ.
Published: 13th January 2021 11:02 AM | Last Updated: 13th January 2021 11:05 AM | A+A A-

ಮೈಕ್ ಪೆನ್ಸ್
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಸಂವಿಧಾನದ 25 ನೇ ತಿದ್ದುಪಡಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಾನು ಬೆಂಬಲಿಸುವುದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಮಂಗಳವಾರ ಸದನ ಮುಖಂಡರಿಗೆ ತಿಳಿಸಿದ್ದಾರೆ.
ಈ ಕುರಿತಂತೆ ಸ್ಪೀಕರ್ ನ್ಯಾನ್ಸಿ ಪೆಲೋಸಿಗೆ ಅವರಿಗೆ ಪತ್ರ ಬರೆದಿರುವ ಮೈಕ್ ಪೆನ್ಸ್ ಅವರು, 'ಅಧ್ಯಕ್ಷರ ಅವಧಿಯಲ್ಲಿ ಕೇವಲ ಎಂಟು ದಿನಗಳು ಬಾಕಿ ಇರುವಾಗ, ನೀವು ಮತ್ತು ಡೆಮೋಕ್ರಾಟಿಕ್ ಸದಸ್ಯರು, ಕ್ಯಾಬಿನೆಟ್ ಮತ್ತು ನಾನು 25 ನೇ ತಿದ್ದುಪಡಿಯನ್ನು ಹೇರಬೇಕೆಂದು ಒತ್ತಾಯಿಸುತ್ತಿದ್ದೀರಿ. ಅಂತಹ ಕ್ರಮವು ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಅಥವಾ ನಮ್ಮ ಸಂವಿಧಾನಕ್ಕೆ ಅನುಗುಣವಾಗಿದೆ ಎಂದು ನಾನು ನಂಬುವುದಿಲ್ಲ ಎಂದು ಹೇಳಿದ್ದಾರೆ.
ಟ್ರಂಪ್ ತಮ್ಮ ಕರ್ತವ್ಯಗಳನ್ನು ಪೂರೈಸಿಲ್ಲ ಎಂಬ ಕಾರಣದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಉಳಿದ ಅವಧಿಗೆ ಪೆನ್ಸ್ ಅವರನ್ನು ತಾತ್ಕಾಲಿಕ ಅಧ್ಯಕ್ಷರಾಗಿ ಮುಂದುವರೆಸುವ ಪ್ರಕ್ರಿಯೆಯನ್ನು ಅವರು ಉಲ್ಲೇಖಿಸಿದ್ದಾರೆ. 25 ನೇ ತಿದ್ದುಪಡಿ ಅನ್ವಯ ಟ್ರಂಪ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗೆ ಮತ ಪ್ರಕ್ರಿಯೆ ಆರಂಭಕ್ಕೂ ಕೆಲ ಗಂಟೆಗಳ ಮುನ್ನವೇ ಪೆನ್ಸ್ ಈ ನಿರ್ಧಾರ ಪ್ರಕಟಿಸಿದ್ದಾರೆ.
ಕಳೆದ ಬುಧವಾರ ಕ್ಯಾಪಿಟಲ್ ಹಿಲ್ಸ್ನಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರ ದಾಂಧಲೆ ಬಳಿಕ ಟ್ರಂಪ್ ಅವರನ್ನು ಅಧಿಕಾರದಿಂದ ಕಿತ್ತುಹಾಕುವ ವಾಗ್ದಂಡನೆ ಪ್ರಕ್ರಿಯೆಗೆ ಡೆಮಾಕ್ರಟಿಕ್ ಪಕ್ಷದ ಸದಸ್ಯರು ವೇಗವಾಗಿ ಚಾಲನೆ ನೀಡಿದ್ದರು.
ಅಂದು ನಡೆದ ಟ್ರಂಪ್ ಬೆಂಬಲಿಗರ ಹಿಂಸಾತ್ಮಕ ಕೃತ್ಯದಲ್ಲಿ ಗಲಭೆಕೋರರು ಪೊಲೀಸರನ್ನು ಮೀರಿ ಕಟ್ಟಡಕ್ಕೆ ನುಗ್ಗಿ ದಾಂಧಲೆ ಮಾಡಿದ್ದರು. ಜೋ ಬಿಡನ್ ಅವರ ಚುನಾವಣಾ ವಿಜಯವನ್ನು ಪ್ರಮಾಣೀಕರಿಸದಂತೆ ಕಾಂಗ್ರೆಸ್ಗೆ ಒತ್ತಾಯ ಹೇರಿದ್ದರು. ಗಲಭೆಯು ಎಷ್ಟು ಮಿತಿ ಮೀರಿತ್ತೆಂದರೆ ಉಪಾಧ್ಯಕ್ಷ ಪೆನ್ಸ್, ಸ್ಪೀಕರ್ ಪೆಲೋಸಿ ಮತ್ತು ಇತರ ಸದಸ್ಯರು ಗಲಭೆಕೋರರಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟಿದ್ದರು. ಘಟನೆಯಲ್ಲಿ ಐವರು ಮೃತಪಟ್ಟಿದ್ದರು.