Source : Online Desk
ವಾಷಿಂಗ್ಟನ್: ಅಮೆರಿಕ ಇತಿಹಾಸದಲ್ಲೇ 2 ಬಾರಿ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಗುರಿಯಾಗಿದ್ದು, ಟ್ರಂಪ್ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷರೇನೂ ಅಲ್ಲ.
ಹೌದು.. ಡೊನಾಲ್ಡ್ ಟ್ರಂಪ್ ಗೂ ಮೊದಲು ಅಮೆರಿಕದ ಇಬ್ಬರು ಖ್ಯಾತ ಅಧ್ಯಕ್ಷರು ದೋಷಾರೋಪಣೆಗೆ ಗುರಿಯಾಗಿದ್ದರು. 1868ರಲ್ಲಿ ಆಂಡ್ರೂ ಜಾನ್ಸನ್, 1973ರಲ್ಲಿ ರಿಚರ್ಡ್ ನಿಕ್ಸನ್ ಮತ್ತು 1998ರಲ್ಲಿ ಬಿಲ್ ಕ್ಲಿಂಟನ್ ವಾಗ್ದಂಡನೆಯ ಮೂಲಕ ಅಮೆರಿಕದ ಅಧ್ಯಕ್ಷಗಿರಿ ಕಳೆದುಕೊಂಡಿದ್ದರು.
ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿ ಆಂಡ್ರೂ ಜಾನ್ಸನ್ ಅವರದ್ದಾಗಿದೆ. ಜಾನ್ಸನ್ ಅವರು ಪ್ರಬಲ ಪ್ರಜಾಪ್ರಭುತ್ವವಾದಿ ಮತ್ತು ಬಿಳಿಯರ ಪ್ರಾಬಲ್ಯವಾದಿಯಾಗಿದ್ದರು. ಅಬ್ರಹಾಂ ಲಿಂಕನ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಉಪಾಧ್ಯಕ್ಷರಾಗಿದ್ದರು. ಬಳಿಕ ಅಬ್ರಾಹಂ ಲಿಂಕನ್ ಹತ್ಯೆಯಾದಾಗ ಅಧ್ಯಕ್ಷರಾದರು. 1868ರಲ್ಲಿ ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಜಾನ್ಸನ್ ವಿರುದ್ಧ ದೋಷಾರೋಪಣೆ ಮಾಡಲಾಗಿತ್ತು. ಫ್ರೀಡ್ಮೆನ್ಸ್ ಬ್ಯೂರೋ ಮಸೂದೆ ಮತ್ತು 1866 ರ ನಾಗರಿಕ ಹಕ್ಕುಗಳ ಕಾಯ್ದೆಯನ್ನು ವೀಟೋ ಮಾಡಿದ್ದರು. ಈ ಕ್ರಮ ಮಾಜಿ ಗುಲಾಮರಿಗೆ ಅಮೆರಿಕ ಪೌರತ್ವವನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ಆದರೆ ಬಳಿಕ ಅಮೆರಿಕ ಕಾಂಗ್ರೆಸ್ ನಾಗರಿಕ ಹಕ್ಕುಗಳ ಕಾಯ್ದೆಯ ವೀಟೋವನ್ನು ರದ್ದುಗೊಳಿಸಿತು. ಅಲ್ಲದೆ ಜಾನ್ಸನ್ ರನ್ನು ದೋಷಾರೋಪಣೆಗೆ ಗುರಿ ಮಾಡಿತ್ತು.
1973ರಲ್ಲಿ ರಿಚರ್ಡ್ ನಿಕ್ಸನ್ ರನ್ನು ದೋಷಾರೋಪಣೆಗೆ ಗುರಿ ಪಡಿಸಲಾಗಿತ್ತು. ಆ ಮೂಲಕ ದೋಷಾರೋಪಣೆಗೆ ಗುರಿಯಾದ 2ನೇ ಅಧ್ಯಕ್ಷ ಎಂಬ ಕುಖ್ಯಾತಿಗೆ ರಿಚರ್ಡ್ ನಿಕ್ಸನ್ ಗುರಿಯಾದರು. 1972ರಲ್ಲಿ ನಡೆದಿದ್ದ ವಾಟರ್ ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ 1973ರಲ್ಲಿ ರಿಚರ್ಡ್ ನಿಕ್ಸನ್ ರನ್ನು ದೋಷಾರೋಪಣೆಗೆ ಗುರಿ ಪಡಿಸಲಾಗಿತ್ತು.
ನಿಕ್ಸನ್ ಬೆಂಬಲಿಗರು ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಚೇರಿಗೆ ನುಗ್ಗಿ ದಾಂಧಲೆ ಸೃಷ್ಟಿಸಿದ್ದರು. ಮುಂಬರುವ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಬೃಹತ್, ಸಂಘಟಿತ ಪ್ರಯತ್ನವಾಗಿ ಈ ದಾಳಿ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಅಂತೆಯೇ 1998ರಲ್ಲಿ ಅಮೆರಿಕದ ಪ್ರಸಿದ್ಧ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರನ್ನೂ ದೋಷಾರೋಪಣೆಗೆ ಗುರಿ ಮಾಡಲಾಗಿತ್ತು. ಶ್ವೇತಭವನದ ಸಹದ್ಯೋಗಿಯೊಂದಿಗೆ ಕ್ಲಿಂಟನ್ ಅಕ್ರಮ ಲೈಂಗಿಕ ಸಂಬಂಧ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅವರನ್ನು ದೋಷಾರೋಪಣೆಗೆ ಗುರಿ ಮಾಡಲಾಗಿತ್ತು. ಕ್ಲಿಂಟನ್ ತಮಗಿಂತಲೂ 30 ವರ್ಷ ಚಿಕ್ಕವರಾದ 22 ವರ್ಷದ ಮೋನಿಕಾ ಲೆವಿನ್ಸ್ಕಿ ಅವರೊಂದಿಗೆ ಅಕ್ರಮ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿತ್ತು. ಈ ಘಟನೆ ಅಮೆರಿಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಧ್ಯಕ್ಷರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಹೋದ್ಯೋಗಿಯೊಂದಿಗೆ ಅಕ್ರಮ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಇದು ಇತರರಿಗೂ ಇದೇ ರೀತಿಯ ಅಧಿಕಾರ ದುರುಪಯೋಗಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅಮೆರಿಕ ಕಾಂಗ್ರೆಸ್ ಹೇಳಿತ್ತು. ಆದರೆ ಕ್ಲಿಂಟನ್ ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿ, ತಾವು ಯಾರೊಂದಿಗೂ ಅಕ್ರಮ ಲೈಂಗಿಕ ಸಂಪರ್ಕ ಹೊಂದಿಲ್ಲ ಎಂದು ಹೇಳಿದ್ದರು. ದೋಷಾರೋಪಣೆ ಮಾಡಲ್ಪಟ್ಟಿದ್ದರೂ, ಅವರು ಅತ್ಯಂತ ಜನಪ್ರಿಯ ಅಧ್ಯಕ್ಷರಾಗಿದ್ದರು.
2019ರಲ್ಲಿ ನಡೆದಿದ್ದ ಟ್ರಂಪ್ ವಿರುದ್ಧ ಮಹಾಭಿಯೋಗ
ಅಧಿಕಾರ ದುರುಪಯೋಗ ಮತ್ತು ಕಾಂಗ್ರೆಸ್ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದರ ಎರಡು ಅಂಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ ವಿರುದ್ಧ ಡಮಾಕ್ರಟಿಕ್ ಪಕ್ಷದ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ಜನಪ್ರತಿನಿಧಿಗಳ ಸಭೆಯ ನ್ಯಾಯಾಂಗ ಸಮಿತಿಯು ಇದಕ್ಕೆ 23-17ರ ಮತಗಳಲ್ಲಿ ಅನುಮೋದನೆ ನೀಡಿತ್ತು. ಬಳಿಕ ಇದು ಜನಪ್ರತಿನಿಧಿಗಳ ಸಭೆಗೆ (ಕೆಳಮನೆ) ಬಂದಿತ್ತು.