ಡೊನಾಲ್ಡ್ ಟ್ರಂಪ್ ನಿರ್ಗಮನಕ್ಕೆ ನಾಲ್ಕೇ ದಿನ: ಕ್ಸಿಯೊಮಿ ಸೇರಿದಂತೆ 9 ಚೀನಾ ಕಂಪೆನಿಗಳ ಮೇಲೆ ನಿಷೇಧ ಹೇರಿಕೆ
ಶ್ವೇತಭವನವನ್ನು ತೊರೆಯುವುದಕ್ಕೆ ಇನ್ನು ಕೆಲವೇ ದಿನಗಳು ಇರುವ ಹೊತ್ತಿನಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತೆ 9 ಚೀನಾದ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿದೆ. ಸ್ಮಾರ್ಟ್ ಫೋನ್ ದೈತ್ಯ ಕಂಪೆನಿ ಕ್ಸಿಯೊಮಿ ಸೇರಿದಂತೆ 9 ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.
Published: 16th January 2021 11:19 AM | Last Updated: 16th January 2021 12:50 PM | A+A A-

ಚೀನಾ ಮತ್ತು ಅಮೆರಿಕದ ಧ್ವಜಗಳು
ನವದೆಹಲಿ: ಶ್ವೇತಭವನವನ್ನು ತೊರೆಯುವುದಕ್ಕೆ ಇನ್ನು ಕೆಲವೇ ದಿನಗಳು ಇರುವ ಹೊತ್ತಿನಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತೆ 9 ಚೀನಾದ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿದೆ. ಸ್ಮಾರ್ಟ್ ಫೋನ್ ದೈತ್ಯ ಕಂಪೆನಿ ಕ್ಸಿಯೊಮಿ ಸೇರಿದಂತೆ 9 ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.
ಈ ಕಂಪೆನಿಗಳು ಚೀನಾದ ಮಿಲಿಟರಿ ಜೊತೆ ಸಂಪರ್ಕ ಹೊಂದಿದ್ದು, ಆ ಕಂಪೆನಿಗಳನ್ನು ಕಮ್ಯುನಿಸ್ಟ್ ಚೈನೀಸ್ ಮಿಲಿಟರಿ ಕಂಪೆನಿಗಳು ಎಂದು ಬಣ್ಣಿಸಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಕಾರ್ಯಕಾರಿ ಆದೇಶವನ್ನು ಕ್ಸಿಯೊಮಿ ಮತ್ತು ಇತರ ನಿಷೇಧಿತ ಕಂಪೆನಿಗಳು ಪಾಲಿಸಬೇಕಾಗಿದೆ. ಈ ಕಂಪೆನಿಗಳಿಗೆ ನಿಷೇಧ ಹೇರಿರುವುದರಿಂದ ಅಮೆರಿಕನ್ನರು ಈ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿರುವ ಕಂಪೆನಿಗಳಲ್ಲಿ ಹೂಡಿಕೆ ಮಾಡುವಂತಿಲ್ಲ. ಈ ವರ್ಷದ ನವೆಂಬರ್ ಹೊತ್ತಿಗೆ ಈ ನಿಷೇಧಿತ ಚೀನಾ ಕಂಪೆನಿಗಳಲ್ಲಿ ಅಮೆರಿಕದ ಹೂಡಿಕೆದಾರರು ತಮ್ಮ ಷೇರುಗಳನ್ನು ಹಿಂತೆಗೆದುಕೊಳ್ಳಬೇಕು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೀಜಿಂಗ್ ಮೂಲದ ಕ್ಸಿಯೊಮಿ ಕಂಪೆನಿ, ಚೀನಾದ ಮಿಲಿಟರಿ ಅಥವಾ ಚೀನಾ ಕಮ್ಯುನಿಸ್ಟ್ ಪಾರ್ಟಿ ಜೊತೆ ಕಂಪೆನಿ ಯಾವುದೇ ವ್ಯವಹಾರ, ಸಂಬಂಧ ಹೊಂದಿಲ್ಲ. ಕಂಪೆನಿ ಕಾನೂನುಗಳನ್ನು ಪಾಲಿಸುತ್ತಿದ್ದು ಅಮೆರಿಕದ ಕಾನೂನು ಮತ್ತು ನಿಯಂತ್ರಣಗಳನ್ನು ಪಾಲಿಸಿಕೊಂಡು ವ್ಯವಹಾರ, ಉದ್ಯಮ ನಡೆಸಿಕೊಂಡು ಹೋಗುತ್ತಿದೆ. ನಾಗರಿಕರ ಬಳಕೆಗೆ ಮತ್ತು ವಾಣಿಜ್ಯ ಉಪಯೋಗಗಳಿಗೆ ಕಂಪೆನಿ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಒದಗಿಸುತ್ತದೆ ಎಂದು ಕಂಪೆನಿ ಪುನರುಚ್ಛರಿಸಿದ್ದು, ಚೀನಾದ ಮಿಲಿಟರಿ ಆಡಳಿತದ ಮಾಲೀಕತ್ವದಡಿ ಅಥವಾ ನಿಯಂತ್ರಣದಡಿ ತಮ್ಮ ಕಂಪೆನಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.