ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರಕ್ಕೆ ದಿನಗಣನೆ: ದೇಶಾದ್ಯಂತ ಬಿಗಿ ಭದ್ರತೆ
ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರು ಜನವರಿ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ದೇಶಾದ್ಯಂತ ಬಿಗಿ ಭದ್ರತೆ ನಿಯೋಜಿಸಲಾಗಿದೆ.
Published: 18th January 2021 08:36 PM | Last Updated: 18th January 2021 08:36 PM | A+A A-

ಜೋ ಬೈಡೆನ್
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರು ಜನವರಿ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ದೇಶಾದ್ಯಂತ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಇದೇ ವೇಳೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ 49ನೇ ಉಪಾಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಏರುವರು. ಈ ಮೂಲಕ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಏರಿದ ಮೊಟ್ಟಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಇನ್ನು ಎರಡು ದಿನಗಳಲ್ಲಿ ನಿರ್ಗಮಿಸಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೇಶದ 50ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿರುವ ಹಿನ್ನೆಲೆಯಲ್ಲಿ, ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಲಾಕ್ ಡೌನ್ ಕೂಡ ಜಾರಿಗೊಳಿಸಲಾಗಿದೆ.
ಶ್ವೇತ ಭವನದ ಸುತ್ತಮುತ್ತಲಿನ ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪ್ರಮಾಣ ವಚನ ಸ್ವೀಕಾರ ಸ್ಥಳದಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮಿಚಿಗನ್, ವರ್ಜಿನಿಯಾ, ವಾಷಿಂಗ್ಟನ್ ಸೇರಿದಂತೆ ಹಲವು ರಾಜ್ಯಗಳ ರಾಜಧಾನಿಗಳಲ್ಲಿ ಫೆಡರಲ್ ಭದ್ರತಾ ಪಡೆಗಳ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.
ಈಗಾಗಲೇ ಕ್ಯಾಪಿಟಲ್ ಹಿಲ್ ಮೇಲೆ ಭೀಕರವಾದ ದಾಳಿ ನಡೆದಿದೆ. ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್ ಒಳಗೆ ನುಗ್ಗಿ ಹಿಂಸೆ ನಡೆಸಿದ್ದಾರೆ. ಜನವರಿ 6ರಂದು ಹಿಂಸಾಚಾರ ನಡೆದಿದ್ದು, ಜನವರಿ 20ರಂದು ಹಿಂಸಾಚಾರ ನಡೆದಿದ್ದ ಜಾಗದಲ್ಲೇ ಬೈಡನ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಭಾರಿ ಮುಂಜಾಗ್ರತೆ ಕೈಗೊಂಡಿರುವ ಅಮೆರಿಕ ಭದ್ರತಾ ಸಂಸ್ಥೆಗಳು, ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸಿವೆ. ಅನಾಮಿಕರು ಕ್ಯಾಪಿಟಲ್ ಹಿಲ್ ಕಟ್ಟಡದ ಬಳಿ ಸುಳಿಯದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.