
ಜೋ ಬೈಡನ್-ಕಮಲಾ ಹ್ಯಾರಿಸ್
ವಾಷಿಂಗ್ಟನ್: ಅಗ್ರ ರಾಷ್ಟ್ರ ಅಮೆರಿಕಾದ ಮುಂದಿನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಸಮಾರಂಭಕ್ಕಾಗಿ ಕ್ಯಾಪಿಟಲ್ ಭವನವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಜೋ ಬೈಡನ್ 46 ನೇ ಅಧ್ಯಕ್ಷರಾಗಿ, ಕಮಲಾ ಹ್ಯಾರಿಸ್ 49 ನೇ ಉಪಾಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲು ಆದ್ಯತೆ ನೀಡಲಾಗಿದೆ. ಇದರಿಂದಾಗಿ ಪ್ರತಿ ಬಾರಿಯೂ ಲಕ್ಷಾಂತರ ಜನರು ಸೇರುತ್ತಿದ್ದ ಈ ಸಮಾರಂಭ ಅತ್ಯಲ್ಪ ಜನರ ಸಮ್ಮುಖದಲ್ಲಿ ನಡೆಯಲಿದೆ. ಅಧಿಕೃತ ಮಾಹಿತಿಯ ಪ್ರಕಾರ, ಸುಮಾರು ಒಂದು ಸಾವಿರ ಜನರು ಮಾತ್ರ ಈ ಕಾರ್ಯಕ್ರಮದಲ್ಲಿ ಹಾಜರಾಗುವ ನಿರೀಕ್ಷೆಯಿದೆ.
ಬುಧವಾರ ರಾತ್ರಿ 8.30 ರಿಂದ (ಭಾರತೀಯ ಕಾಲಮಾನ ಪ್ರಕಾರ) ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಅಧ್ಯಕ್ಷರ ಉದ್ಘಾಟನಾ ಸಮಿತಿ (ಪಿಐಸಿ) ತಿಳಿಸಿದೆ. ಆ ಸಮಯದಿಂದ ಸಮಯದಿಂದ ಸಾಮಾಜಿಕ ಮಾಧ್ಯಮಗಳು ಮತ್ತು ಟಿವಿ ಚಾನೆಲ್ಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿವೆ. ಆದರೆ, ರಾತ್ರಿ 10 ಗಂಟೆಗೆ ಅಮೆರಿಕಾ ರಾಷ್ಟ್ರಗೀತೆಯೊಂದಿಗೆ ಪ್ರಮಾಣವಚನ ಸಮಾರಂಭ ಪ್ರಾರಂಭವಾಗುತ್ತದೆ.
ಈ ಪ್ರಮಾಣ ವಚನ ಸ್ವೀಕಾರ ಸಮಾರಂಭ bideninaugural.org ವೆಬ್ ಸೈಟ್ ನಲ್ಲಿ ನೇರಪ್ರಸಾರವಾಗಲಿದೆ. ಈ ಮೂಲಕ ಯೂಟ್ಯೂಬ್, ಫೇಸ್ಬುಕ್ ಮತ್ತು ಟ್ವಿಟರ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕಾರ್ಯಕ್ರಮ ವೀಕ್ಷಿಸಬಹುದು. ಎಲ್ಲಾ ಸುದ್ದಿ ಚಾನೆಲ್ಗಳಲ್ಲಿ ಇದೇ ಸಮಯದಲ್ಲಿ ಸಮಯದಲ್ಲಿ ನೇರ ಪ್ರಸಾರ ಬಿತ್ತರಿಸಲಿವೆ. ಕಾರ್ಯಕ್ರಮವನ್ನು ಸುಮಾರು ಒಂದೂವರೆ ಗಂಟೆ ನೇರ ಪ್ರಸಾರ ಮಾಡಲಿವೆ. ಈ ಕಾರ್ಯಕ್ರಮವನ್ನು 'ಸೆಲೆಬ್ರೇಟಿಂಗ್ ಅಮೇರಿಕಾ' ಹೆಸರಿನಲ್ಲಿ ಟಾಮ್ ಹ್ಯಾಂಕ್ಸ್ ನಿರೂಪಿಸಿಕೊಡಲಿದ್ದಾರೆ.
ಎಂದಿನಂತೆ, ಕ್ಯಾಪಿಟಲ್ ಹಿಲ್ ಭವನದ ಮೆಟ್ಟಿಲುಗಳ ಮೇಲೆ ನಿರ್ಮಿಸಿರುವ ವೇದಿಕೆಯಲ್ಲಿ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂಲಗಳ ಪ್ರಕಾರ ಮೊದಲು ಉಪಾಧ್ಯಕ್ಷೆ ಕಮಲಾ ಮೊದಲು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ನಂತರ ಅಧ್ಯಕ್ಷ ಬೈಡೆನ್ ನಂತರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೈಡೆನ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣವಚನ ಬೋಧಿಸಲಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು 127 ವರ್ಷಗಳ ಹಳೆಯ ಬೈಬಲ್ ಮೇಲೆ ಪ್ರಮಾಣ ಸ್ವೀಕರಿಸಲಿದ್ದಾರೆ.
ಇನ್ನೂ 1937ರ ಜನವರಿ 20 ರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದೆ. ಮೊದಲ ಬಾರಿ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಜನವರಿ 20 ರಂದು ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ಅಂದಿನಿಂದ, ಹೊಸ ಅಧ್ಯಕ್ಷರ ಪ್ರಮಾಣವಚನ ಸಮಾರಂಭ ಅದೇ ದಿನ ನಡೆಯಲಿದೆ. ಇದಕ್ಕೂ ಮೊದಲು ಈ ಕಾರ್ಯಕ್ರಮ ಮಾರ್ಚ್ 4 ರಂದು ನಡೆಯುತ್ತಿತ್ತು. ಆದರೆ ಈ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದೆ. ಇಡೀ ವಾಷಿಂಗ್ಟನ್ ನಗರಕ್ಕೆ ದಿಗ್ಬಂಧನ ವಿಧಿಸಲಾಗಿದೆ. ಪ್ರಮಾಣ ವಚನ ಸ್ವೀಕಾರ ದಿನದಂದು ಆಂತರಿಕ ಗಲಭೆಗಳು ಸಂಭವಿಸುವ ಸಾಧ್ಯತೆಯಿದೆ ಎಂಭ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್ಎಸ್ಎ) ವರದಿ ಹಿನ್ನಲೆಯಲ್ಲಿ ರಾಜಧಾನಿಯಲ್ಲಿ 25 ಸಾವಿರ ನ್ಯಾಷನಲ್ ಗಾರ್ಡ್ಗಳೊಂದಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.