ಅಮೆರಿಕಾದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ ಎರಡನೇ ವಿಶ್ವ ಯುದ್ಧದಲ್ಲಿ ಸಾವನ್ನಪ್ಪಿದವರಿಗಿಂತ ಹೆಚ್ಚು!
ಕೊರೊನಾ ವೈರಸ್ ದಾಳಿಗೆ ಅಗ್ರರಾಷ್ಟ್ರ ಅಮೆರಿಕಾ ಇನ್ನಲ್ಲದಂತೆ ತತ್ತರಿಸಿಹೋಗಿದೆ. ವಿಶ್ವದಲ್ಲೇ ಸೋಂಕಿನ ಅತಿ ಹೆಚ್ಚು ತೀವ್ರತೆ ಹೊಂದಿರುವ ಅಮೆರಿಕಾದಲ್ಲಿ, ಕೊರೊನಾ ಸಾವಿನ ಸಂಖ್ಯೆ ಎರಡನೇ ಮಹಾಯುದ್ಧದಲ್ಲಿ ಮರಣ ಹೊಂದಿದ ಅಮೆರಿಕನ್ನರ ಸಂಖ್ಯೆಯನ್ನು ಮೀರಿದೆ.
Published: 21st January 2021 04:54 PM | Last Updated: 21st January 2021 04:59 PM | A+A A-

ಕೋವಿಡ್ ಲಸಿಕೆ
ವಾಷಿಂಗ್ಟನ್: ಕೊರೊನಾ ವೈರಸ್ ದಾಳಿಗೆ ಅಗ್ರರಾಷ್ಟ್ರ ಅಮೆರಿಕಾ ಇನ್ನಲ್ಲದಂತೆ ತತ್ತರಿಸಿಹೋಗಿದೆ. ವಿಶ್ವದಲ್ಲೇ ಸೋಂಕಿನ ಅತಿ ಹೆಚ್ಚು ತೀವ್ರತೆ ಹೊಂದಿರುವ ಅಮೆರಿಕಾದಲ್ಲಿ, ಕೊರೊನಾ ಸಾವಿನ ಸಂಖ್ಯೆ ಎರಡನೇ ಮಹಾಯುದ್ಧದಲ್ಲಿ ಮರಣ ಹೊಂದಿದ ಅಮೆರಿಕನ್ನರ ಸಂಖ್ಯೆಯನ್ನು ಮೀರಿದೆ.
ಆದರೂ, ಅಮೆರಿಕಾದಲ್ಲಿ ಕೊರೊನಾ ಸಾಂಕ್ರಾಮಿಕದ ಬೆದರಿಕೆ ಇನ್ನು ಇಳಿಮುಖಗೊಂಡಿಲ್ಲ. ಮುಂದಿನ ದಿನಗಳಲ್ಲಿ ಸಾಂಕ್ರಾಮಿಕದ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಮೆರಿಕಾ ಹೊಸ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಮೊದಲ ದಿನ ಶ್ವೇತ ಭವನದಲ್ಲಿ ಕೊರೊನಾ ವೈರಸ್ ವಿರುದ್ದ ಹೋರಾಟದ ಕಾರ್ಯತಂತ್ರ ಕುರಿತು ಜೋ ಬೈಡನ್ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಪ್ರಕಾರ, ಅಮೆರಿಕಾದಲ್ಲಿ 4,05,400 ಮಂದಿ ಸಾವನ್ನಪ್ಪಿದ್ದಾರೆ. ಇದು ಎರಡನೇಯ ಮಹಾಯುದ್ಧದಲ್ಲಿ ಮರಣ ಹೊಂದಿದ ಅಮೆರಿಕನ್ನರ ಸಂಖ್ಯೆ(4,05,399)ಕ್ಕಿಂತ ಹೆಚ್ಚು. ಪ್ರಸ್ತುತ ಕೊರೊನಾ ತೀವ್ರತೆ ಹೆಚ್ಚಿನ ಪ್ರಮಾಣದಲ್ಲಿಯೇ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಅಪಾಯಕಾರಿ ಸಮಯಕ್ಕೆ ಕಾಲಿಡುತ್ತಿದ್ದೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಈ ಕರಾಳ ಸಮಯವನ್ನು ಎದುರಿಸಬೇಕಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಅಮೆರಿಕಾ, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು. ಇನ್ನೂ ಗುರುವಾರ ನಡೆಯಲಿರುವ ಡಬ್ಲ್ಯುಎಚ್ ಓ ಮಂಡಳಿಯ ಕಾರ್ಯಕಾರಿ ಸಭೆಯಲ್ಲಿ ಆಂಥೋನಿ ಫೌಚಿ ನೇತೃತ್ವದ ತಂಡ ಭಾಗವಹಿಸಲಿದೆ ಎಂದು ಬೈಡೆನ್ ಹೇಳಿದ್ದಾರೆ.