ಕೊರೋನಾ ವೈರಸ್ ಮೂಲದ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯ ವಿಶ್ವಾಸಾರ್ಹತೆ ಮೇಲೆ ತಜ್ಞರ ಶಂಕೆ!

ಇಡೀ ಜಗತ್ತನ್ನೇ ಮಾರಣಾಂತಿಕವಾಗಿ ಪೀಡಿಸುತ್ತಿರುವ ಮಾರಕ ಕೊರೋನಾ ವೈರಸ್ ಮೂಲದ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯ ವಿಶ್ವಾಸಾರ್ಹತೆಯನ್ನು ಜಾಗತಿಕ ತಜ್ಞರ ತಂಡ ಪ್ರಶ್ನೆ ಮಾಡುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ

ವಾಷಿಂಗ್ಟನ್: ಇಡೀ ಜಗತ್ತನ್ನೇ ಮಾರಣಾಂತಿಕವಾಗಿ ಪೀಡಿಸುತ್ತಿರುವ ಮಾರಕ ಕೊರೋನಾ ವೈರಸ್ ಮೂಲದ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯ ವಿಶ್ವಾಸಾರ್ಹತೆಯನ್ನು ಜಾಗತಿಕ ತಜ್ಞರ ತಂಡ ಪ್ರಶ್ನೆ ಮಾಡುತ್ತಿದೆ.

ಶೀಘ್ರದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ಮೂಲದ ಕುರಿತ ತನ್ನ 2ನೇ ಹಂತದ ತನಿಖೆಗೆ ಸಿದ್ಧತೆ ನಡೆಸುತ್ತಿರುವಂತೆಯೇ ಜಾಗತಿಕ ತಜ್ಞರ ತಂಡ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ಪ್ರಸ್ತುತೆಯನ್ನು ಪ್ರಶ್ನೆ ಮಾಡುತ್ತಿದ್ದ, ದಿನಕಳೆದಂತೆ ಈ ಪಟ್ಟಿ ಬೆಳೆಯುತ್ತಲೇ ಇದೆ. ಅಚ್ಚರಿ ವಿಚಾರವೆಂದರೆ ಈ  ಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವಿರುವ ದೇಶಗಳ ತಜ್ಞರೇ ಸಂಸ್ಥೆಯ ತನಿಖಾ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಕೊರೋನಾ ವೈರಸ್ ವಿಚಾರವಾಗಿ ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟು ಕೂಡ ಮುಂದುವರೆದಿದ್ದು, ಇಂತಹ ಪರಿಸ್ಥಿತಿಯಲ್ಲಿ  ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯಿಂದ ನಿಸ್ಪಕ್ಷಪಾತ ವರದಿ ಬರುತ್ತದೆಯೇ ಎಂದು ತಜ್ಞರು ಪ್ರಶ್ನಿಸುತ್ತಿದ್ದಾರೆ.

ಈ ಹಿಂದೆ ಮಾರ್ಚ್ ನಲ್ಲಿ ನಡೆದ ಮೊದಲ ಹಂತದ ತನಿಖೆಯಲ್ಲಿ ಕೊರೋನಾ ವೈರಸ್ ಮಾನವ ನಿರ್ಮಿತ ಅಥವಾ ಚೀನಾ ಲ್ಯಾಬ್ ನಿಂದ ಸೋರಿಕೆಯಾದ ವೈರಸ್ ಅಲ್ಲ. ಇದು ಪ್ರಾಣಿಗಳಿಂದ ಅಂದರೆ ಬಾವಲಿ ಅಥವಾ ಇತರೆ ಪ್ರಾಣಿಗಳ ಮೂಲಕವಾಗಿ ಮಾನವರಿಗೆ ಹಬ್ಬಿದೆ ಎಂದು ಹೇಳಲಾಗಿತ್ತು. ಆದರೆ ಬ್ರಿಟನ್  ಸೇರಿದಂತೆ ಕೆಲ ದೇಶಗಳ ತಜ್ಞರು ಕೊರೋನಾ ವೈರಸ್ ನ ಸುದೀರ್ಘ ತನಿಖೆ ನಡೆಸಿ ಅದು ಮಾನವ ನಿರ್ಮಿತ ಎಂದು ಹೇಳಿದ್ದರು. ವೈರಸ್ ನ ಸ್ಪೈಕ್ ಗಳು ಕೃತಕವಾಗಿದ್ದು, ವೈರಸ್ ಗೆ ಸ್ಪೈಕ್ ಅನ್ನು ಲ್ಯಾಬ್ ನಲ್ಲೇ ನೀಡಲಾಗಿದೆ ಎಂದು ವಾದಿಸಿದ್ದರು. ಇದೀಗ ಇಂತಹುದೇ ವಾದ ಮಂಡಿಸುತ್ತಿರುವ ತಜ್ಞರ ಸಂಖ್ಯೆ  ಏರಿಕೆಯಾಗುತ್ತಿದ್ದು, ಈ ತನಿಖೆಯಿಂದ 1986 ಚೆರ್ನೋಬಿಲ್ ನ್ಯುಕ್ಲಿಯರ್ ದುರಂತದ ರೀತಿಯಲ್ಲಿ ವಿಶಾಲ, ಸ್ವತಂತ್ರ ವಿಶ್ಲೇಷಣಾ ವರದಿ ಬೇಕು ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.

ವೈರಸ್ ಮೇಲೆ ನಡೆದಿತ್ತು ರಿವರ್ಸ್ ಎಂಜಿನಿಯರಿಂಗ್
ಈ ಹಿಂದೆ ನಾರ್ವೇ, ಅಮೆರಿಕ ಮತ್ತು ಬ್ರಿಟನ್ ದೇಶದ ಕೆಲ ವಿಜ್ಞಾನಿಗಳು ಕೊರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಇದಕ್ಕೆ ಸಾಕಷ್ಟು ಸಾಕ್ಷಿಗಳನ್ನೂ ಕೂಡ ನೀಡಿದ್ದರು. ಕೊರೋನಾ ವೈರಸ್ ನ ರಚನೆ ಅತ್ಯಂತ ಸೂಕ್ಷ್ಮವಾಗಿ  ಗಮನಿಸಿದರೆ ಅದು ಮಾನವ ಸೃಷ್ಟಿ ಎಂದು ತಿಳಿಯುತ್ತದೆ ಎಂದು ಹೇಳಿದ್ದರು. ಅಲ್ಲದೆ ಈ ವೈರಸ್ ಮಾನವ ನಿರ್ಮಿತ ಅಲ್ಲ ಎಂದು ಸಾಬೀತು ಮಾಡಲು ವಿಜ್ಞಾನಿಗಳು ರಿವರ್ಸ್ ಇಂಜಿನಿಯರಿಂಗ್ ವರ್ಷನ್‌ನಿಂದ ಟ್ರ್ಯಾಕ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಚೀನಾದ ರೆಟ್ರೋ ಇಂಜಿನಿಯರಿಂಗ್‌ನ ಸಾಕ್ಷಿ ತಮ್ಮ ಬಳಿ  ಇದೆ ಎಂದು ವಾದಿಸಿದ್ದಾರೆ.

ತನಿಖೆ ಆದೇಶಿಸಿದ್ದ ಅಮೆರಿಕ ಸರ್ಕಾರ
ಇತ್ತ ಅಮೆರಿಕ ಅಧ್ಯಕ್ಷ ಜೋ  ಬೈಡನ್ ಕೂಡ ಕೋವಿಡ್ ವೈರಸ್ ನ ಮೂಲದ ಬಗ್ಗೆ ತನಿಖೆ ನಡೆಸಿ 90 ದಿನಗಳಲ್ಲಿ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದ್ದರು. ಈಗಾಗಲೇ ಅಮೆರಿಕ ತಜ್ಞರು ಮತ್ತು ವಿಜ್ಞಾನಿಗಳು ಕೋವಿಡ್-19 ವೈರಸ್ ನ ಮೂಲದ ಕುರಿತು ತನಿಖೆ ನಡೆಸುತ್ತಿದ್ದು, ಇದರ  ಜೊತೆಗೆ ಅಮೆರಿಕ ಗುಪ್ತಚರ ಇಲಾಖೆಗಳ ಕೆಲ ತಂಡಗಳೂ ಕೂಡ ಈ ತನಿಖೆ ನಡೆಸುತ್ತಿವೆ. ಈ ಬಗ್ಗೆ ಮಾಹಿತಿ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, 'ಕೊರೋನಾ ವೈರಸ್ ಮೂಲದ ಕುರಿತು ಒಂದು ನಿಶ್ಚಿತ ತೀರ್ಮಾನಕ್ಕೆ ಹತ್ತಿರವಾಗಬಲ್ಲ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲುಸ ಗುಪ್ತಚರ  ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನಡೆಯುತ್ತಿರುವ ತನಿಖೆಯನ್ನು  ಚುರುಕುಗೊಳಿಸಿ 90 ದಿನಗಳಲ್ಲಿ ಈ ಕುರಿತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಪ್ರಯತ್ನದಲ್ಲಿ ನಮ್ಮ ನ್ಯಾಷನಲ್ ಲ್ಯಾಬ್ಸ್ ಮತ್ತು ನಮ್ಮ ಸರ್ಕಾರದ ಇತರ ಇಂಟೆಲಿಜೆನ್ಸ್ ಏಜೆನ್ಸಿಗಳು ಪ್ರಯತ್ನಗಳನ್ನು ಹೆಚ್ಚಿಸಲು  ಕೆಲಸ ಮಾಡಬೇಕೆಂದು ನಾನು ಕೇಳಿದ್ದೇನೆ ಎಂದು ಹೇಳಿದ್ಗರು.

ತನಿಖೆಯ ನಿರ್ಣಾಯಕ ಭಾಗದಲ್ಲಿದ್ದೇವೆ ಎಂದು ಹೇಳಿದ್ದ ವಿಶ್ವ ಆರೋಗ್ಯ ಸಂಸ್ಥೆ
ಇನ್ನು ಕಳೆದ ತಿಂಗಳು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ, ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಡಾ. ಮೈಕೆಲ್ ರ್ಯಾನ್ ಅವರು, ನಾವು ತನಿಖೆಯ ನಿರ್ಣಾಯಕ ಭಾಗದಲ್ಲಿದ್ದೇವೆ. ಹೀಗಾಗಿ ತನಿಖೆಗೆ ಚೀನಾ ತಮಗೆ ಸಹಕಾರ ನೀಡಬೇಕು ಎಂದು ಹೇಳಿದ್ದರು.

WHO ವೈರಸ್ ಮೂಲ ಶೋಧ ಅಸಾಧ್ಯ
ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಕಾನೂನು ಮತ್ತು ಮಾನವ ಹಕ್ಕುಗಳ ಕುರಿತ WHO ಸಹಯೋಗ ಕೇಂದ್ರದ ನಿರ್ದೇಶಕ ಲಾರೆನ್ಸ್ ಗೋಸ್ಟಿನ್ ಅವರು, ವಿಶ್ವ ಆರೋಗ್ಯ ಸಂಸ್ಥೆ ನಡೆಸುತ್ತಿರುವ  ತನಿಖೆಯಿಂದ ವೈರಸ್ ಪತ್ತೆ ಅಸಾಧ್ಯ. ಕಳೆದ ಒಂದೂವರೆ ವರ್ಷದಿಂದ ತನಿಖೆ ನಡೆದಿದ್ದು, ಈ ತನಿಖೆ ಮೇಲೆ ಚೀನಾ ಛಾಯೆ ಖಂಡಿತಾ ಇದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯಿಂದ ವೈರಸ್ ಮೂಲ ಪತ್ತೆ ಅಸಾಧ್ಯ ಎಂಬುದು ಬಹಿರಂಗವಾಗಿಯೇ ತಿಳಿಯುತ್ತದೆ. ಅಂತೆಯೇ ಅಮೆರಿಕ ಮತ್ತು ಇತರ  ದೇಶಗಳು ತಮ್ಮಲ್ಲಿರುವ ಬುದ್ಧಿವಂತಿಕೆ ಮತ್ತು ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಈ ತನಿಖೆ ಮಾಡಲು ಪ್ರಯತ್ನಿಸಬಹುದು. ಅಂತೆಯೇ WHO ಗೆ ಅಗತ್ಯವಿರುವ ಅಧಿಕಾರವನ್ನು ನೀಡಲು ಅಂತಾರಾಷ್ಟ್ರೀಯ ಆರೋಗ್ಯ ಕಾನೂನುಗಳನ್ನು ಪರಿಷ್ಕರಿಸಬಹುದು ಅಥವಾ ತನಿಖೆ ನಡೆಸಲು ಕೆಲವು ಹೊಸ ಘಟಕವನ್ನು  ರಚಿಸಬಹುದು ಎಂದು ಸಲಹೆ ನೀಡಿದ್ದಾರೆ. 

ವಿಜ್ಞಾನಿಗಳ ವರದಿ ಕಿತ್ತುಕೊಂಡ ಗಣಿ ಮಾಲೀಕರು
ಇತ್ತ ಚೀನಾದ ಮೊಜಿಯಾಂಗ್ ಗಣಿಯಲ್ಲಿ ಸೋಂಕಿತ ಬಾವಲಿಗಳಿಂದ ಸೋಂಕಿಗೆ ತುತ್ತಾದ ಆರು ಗಣಿ ಕಾರ್ಮಿಕರು ಕೋವಿಡ್ ರೀತಿಯ ನ್ಯುಮೋನಿಯಾದಿಂದ ಬಳಲುತ್ತಿದ್ದರು. 2012ರಲ್ಲೇ ಈ ರೀತಿಯ ವಿಚಿತ್ರ ಸೋಂಕನ್ನು ಕಂಡುಹಿಡಿಯಲಾಗಿತ್ತು. ಆದಾಗ್ಯೂ, ಕಳೆದ ವರ್ಷದಲ್ಲಿ, ಚೀನಾದ ಅಧಿಕಾರಿಗಳು ಗಣಿ  ಮುಚ್ಚಿ ವಿಜ್ಞಾನಿಗಳಿಂದ ಮಾದರಿಗಳನ್ನು ಮುಟ್ಟುಗೋಲು ಹಾಕಿಕೊಂಡರು. ಅಲ್ಲದೆ ಗಣಿಗೆ ಭೇಟಿ ನೀಡುವ ಪತ್ರಕರ್ತರೊಂದಿಗೆ ಮಾತನಾಡದಂತೆ ಸ್ಥಳೀಯರಿಗೆ ಆದೇಶಿಸಿದ್ದರು. ಇನ್ನು ಕಳೆದ ಡಿಸೆಂಬರ್‌ನಲ್ಲಿ ನಡೆದ ಅಸೋಸಿಯೇಟೆಡ್ ಪ್ರೆಸ್ ತನಿಖೆಯಲ್ಲಿ ಚೀನಾ ಸರ್ಕಾರ ಕೋವಿಡ್-19 ಸಂಶೋಧನೆಯ  ಪ್ರಕಟಣೆಗೆ ನಿರ್ಬಂಧಗಳನ್ನು ವಿಧಿಸಿತ್ತು. ಅಲ್ಲದೆ ಇದರಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳ ಕಡ್ಡಾಯ ಪರಿಶೀಲನೆಯನ್ನು ಕಡ್ಡಾಯಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com