ಸಹೋದ್ಯೋಗಿಗೆ ಚುಂಬಿಸಿದ ಬ್ರಿಟನ್ ಆರೋಗ್ಯ ಸಚಿವರ ತಲೆದಂಡ!

ಬ್ರಿಟನ್ ನ ಸಂಪುಟ ಸಚಿವ ಮ್ಯಾಟ್‌ ಹಾನ್‌ಕಾಕ್‌ ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 
ಮ್ಯಾಟ್‌ ಹಾನ್‌ಕಾಕ್‌
ಮ್ಯಾಟ್‌ ಹಾನ್‌ಕಾಕ್‌

ಲಂಡನ್: ಬ್ರಿಟನ್ ನ ಸಂಪುಟ ಸಚಿವ ಮ್ಯಾಟ್‌ ಹಾನ್‌ಕಾಕ್‌ ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೋವಿಡ್-19 ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮಹಿಳಾ ಸಹೋದ್ಯೋಗಿಗೆ ಚುಂಬಿಸಿದ್ದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದು, ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೆ. 

ಪಾಕಿಸ್ತಾನದ ಮೂಲದ, ಕನ್ಸರ್ವೇಟೀವ್ ಪಕ್ಷದ ಸಂಸದ, ಬ್ರಿಟನ್ ನ ಮಾಜಿ ಚಾನ್ಸಿಲರ್ ಸಾಜಿದ್ ಜಾವಿದ್ ನೂತನ ಆರೋಗ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. 
     
ಮ್ಯಾಟ್ ಹಾನ್ಕಾಕ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಪತ್ರಬರೆದಿದ್ದು, "ಈ ಸಾಂಕ್ರಾಮಿಕದಲ್ಲಿ ತುಂಬಾ ತ್ಯಾಗ ಮಾಡಿದ ಜನರಿಗೆ ನಾವು ನಿರಾಸೆಗೊಳಿಸಿದಾಗ ಪ್ರಾಮಾಣಿಕವಾಗಿರಬೇಕು, ಈ ಕಾರಣಕ್ಕಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ವಿಧಿಸಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆ ಕೋರುತ್ತೇನೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಟ್ವಿಟರ್ ನಲ್ಲಿ ವಿಡಿಯೋವನ್ನೂ ಪೋಸ್ಟ್ ಮಾಡಿರುವ ಹಾನ್ಕಾಕ್, ನಾನು ಆರೋಗ್ಯ ಹಾಗೂ ಸಾಮಾಜಿಕ ಕಾಳಜಿ ಕಾರ್ಯದರ್ಶಿಯ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಪ್ರಧಾನಿಯನ್ನು ಭೇಟಿ ಮಾಡಿದ್ದೆ. "ದೇಶದಲ್ಲಿ ಪ್ರತಿಯೊಬ್ಬರ ತ್ಯಾಗವನ್ನೂ ಅರ್ಥ ಮಾಡಿಕೊಳ್ಳುತ್ತೇನೆ, ಕಾನೂನುಗಳನ್ನು ರಚಿಸುವ ನಾವೇ ಅದನ್ನು ಪಾಲಿಸಬೇಕು, ಅದಕ್ಕಾಗಿಯೇ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಹಾನ್ಕಾಕ್ ತಿಳಿಸಿದ್ದಾರೆ. 

ವಿವಾಹಿತರಾಗಿರುವ ಹಾನ್ಕಾಕ್ (42) ತಮ್ಮ ಕಚೇರಿಯಲ್ಲಿದ್ದ ಗಿನಾ ಕೊಲಾಡಾಂಜೆಲೊ ಎಂಬ ಮಹಿಳೆಯನ್ನು ಚುಂಬಿಸುತ್ತಿರುವುದು ಸಿಸಿಟಿವಿ ಕ್ಯಾಮರಾ ದೃಶ್ಯಗಳಿಂದ ಬಹಿರಂಗಗೊಂಡಿತ್ತು. ಕೊಲಾಡಾಂಜೆಲೊ ಹಾನ್ಕಾಕ್ ಅವರ ಹಳೆಯ ಸ್ನೇಹಿತೆಯಾಗಿದ್ದು, ಹಾಲಿ ಸಹೋದ್ಯೋಗಿಯೂ ಆಗಿದ್ದರು. ಈ ದೃಶ್ಯಗಳನ್ನು ದಿ ಸನ್ ನ್ಯೂಸ್ ಪೇಪರ್ ಜೂ.25 ರಂದು ಪ್ರಕಟಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com