ಬೈಡನ್ ಮೊದಲ ತಿಂಗಳ ಆಡಳಿತ ವಿನಾಶಕಾರಿ: ಟ್ರಂಪ್ ಕಿಡಿ

ಆಧುನಿಕ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಮೊದಲ ತಿಂಗಳ ಆಡಳಿತವನ್ನು ಜೋ ಬೈಡನ್ ನೀಡಿದ್ದಾರೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Published: 01st March 2021 09:04 AM  |   Last Updated: 01st March 2021 09:06 AM   |  A+A-


Donald Trump

ಡೊನಾಲ್ಡ್ ಟ್ರಂಪ್

Posted By : Srinivasamurthy VN
Source : UNI

ವಾಷಿಂಗ್ಟನ್: ಆಧುನಿಕ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಮೊದಲ ತಿಂಗಳ ಆಡಳಿತವನ್ನು ಜೋ ಬೈಡನ್ ನೀಡಿದ್ದಾರೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಹಾಲಿ ಅಧ್ಯಕ್ಷ ಜೋ ಬೈಡೆನ್ ಮೊದಲ ತಿಂಗಳ ಆಡಳಿತ, ಮತ್ತು ಅವರ ನೀತಿಯನ್ನು ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನಡೆದ 2021 ರ ಕನ್ಸರ್ವೇಟಿವ್ ಪೊಲಿಟಿಕಲ್ ಸಮಾವೇಶದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲವಾಗಿ ಟೀಕಿಸಿದ್ದಾರೆ.

ಜೋ ಬೈಡೆನ್ ಮೊದಲ ತಿಂಗಳ ಅಧಿಕಾರ ಇತಿಹಾಸದಲ್ಲಿ ಯಾವುದೇ ಅಧ್ಯಕ್ಷರ ಅತ್ಯಂತ ವಿನಾಶಕಾರಿ ಎಂದು ಟ್ರಂಪ್ ಭಾನುವಾರ ಅಧಿಕಾರದಿಂದ ಹೊರಬಂದ ನಂತರ ತಮ್ಮ ಮೊದಲ ಪ್ರಮುಖ ಸಾರ್ವಜನಿಕ ಭಾಷಣದಲ್ಲಿ ದೂರಿದರು. ಟ್ರಂಪ್ ವಿಶೇಷವಾಗಿ ಗಡಿ ಬಿಕ್ಕಟ್ಟನ್ನು ಪ್ರಸ್ತಾಪಿಸಿ ಬೈಡೆನ್ ಅವರ ವಲಸೆ ನೀತಿಯನ್ನು ಟೀಕಿಸಿದರು ಮತ್ತು ಇದು ಅಮೆರಿಕದ ಪ್ರಮುಖ ಮೌಲ್ಯಗಳಿಗೆ ಮಾಡುತ್ತಿರುವ ದೊಡ್ಡ ದ್ರೋಹ ಎಂದು ಜರಿದರು. 

ಜೋ ಬೈಡನ್ ನೇತೃತ್ವದ ಹೊಸ ಆಡಳಿತವು ಉದ್ಯೋಗ ವಿರೋಧಿ, ಕುಟುಂಬ ವಿರೋಧಿ, ಮಹಿಳಾ ವಿರೋಧಿ ಮತ್ತು ವಿಜ್ಞಾನ ವಿರೋಧಿಯಾಗಿದೆ. ಆಧುನಿಕ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಮೊದಲ ತಿಂಗಳ ಆಡಳಿತವನ್ನು ಜೋ ಬೈಡನ್ ಹೊಂದಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.  ಇದೇ ವೇಳೆ ಚುನಾವಣಾ ವಂಚನೆಯ ಆರೋಪಗಳನ್ನು ಪುನರಾವರ್ತಿಸಿರುವ ಟ್ರಂಪ್ ಮುಂದಿನ ನಾಲ್ಕು ವರ್ಷಗಳಲ್ಲಿ ಡೆಮಾಕ್ರಾಟ್‌ಗಳು ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ. ಕೇವಲ ಒಂದು ತಿಂಗಳಲ್ಲಿ 'ಅಮೆರಿಕ ಮೊದಲು' (ಅಮೆರಿಕ ಫಸ್ಟ್) ರಿಂದ 'ಅಮೆರಿಕ ಕೊನೆ' (ಅಮೆರಿಕ ಲಾಸ್ಟ್)ಗೆ ಹೋಗಿದ್ದೇವೆ ಎಂದು ಹೇಳಿದರು.

ಮೂರನೇ ಬಾರಿಗೆ ಸ್ಪರ್ಧೆ!
ಶ್ವೇತಭವನ ಬಿಟ್ಟು ಹೋದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೂರನೇ ಬಾರಿಗೆ ಅಧ್ಯಕ್ಷಗಾದಿಗಿಳಿಯುವ ಸಾಧ್ಯತೆಯನ್ನು ಅಲ್ಲಗಳೆದಿಲ್ಲ. ಅಲ್ಲದೆ ಹೊಸ ಪಕ್ಷವನ್ನು ರೂಪಿಸುವ ಯಾವುದೇ ಯೋಜನೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಕಳೆದ ತಿಂಗಳು ಶ್ವೇತಭವನದಿಂದ ನಿರ್ಗಮಿಸಿದ ಬಳಿಕ ಮೊದಲ ಬಾರಿಗೆ ಭಾಷಣ ಮಾಡಿರುವ ಡೊನಾಲ್ಡ್ ಟ್ರಂಪ್, ನಾಲ್ಕು ವರ್ಷಗಳ ಹಿಂದೆ ನಾವು ಜೊತೆಯಾಗಿ ಆರಂಭಿಸಿದ ಅದ್ಭುತ ಪ್ರಯಾಣವು ಇನ್ನು ಕೊನೆಗೊಂಡಿಲ್ಲ ಎಂಬುದನ್ನು ಘೋಷಿಸಲು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು.

ಕನ್ಸರ್ವೇಟಿವ್ ಪಾಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ (ಸಿಪಿಎಸಿ) 2021 ಉದ್ದೇಶಿಸಿ ಮಾತನಾಡಿದ ಟ್ರಂಪ್, ಭವಿಷ್ಯದ ಬಗ್ಗೆ ಮಾತನಾಡಲು ನಾವಿಲ್ಲಿ ಒಗ್ಗೂಡಿದ್ದೇವೆ. ಭವಿಷ್ಯದ ಚಳವಳಿ, ನಮ್ಮ ಪಕ್ಷದ ಭವಿಷ್ಯ ಮತ್ತು ನಮ್ಮ ಪ್ರೀತಿಯ ದೇಶದ ಭವಿಷ್ಯ ಎಂದು ಹೇಳಿದರು. 'ನೀವು ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ? ಎಂಬ ಪ್ರಶ್ನೆಯೊಂದಿಗೆ ಭಾಷಣವನ್ನು ಪ್ರಾರಂಭಿಸಿದ ಟ್ರಂಪ್, ಹೊಸ ರಾಜಕೀಯ ಪಕ್ಷವನ್ನು ರಚಿಸುವುದಿಲ್ಲ ಎಂದು ಘೋಷಿಸಿದರು. ಡೆಮಾಕ್ರಾಟ್ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಟ್ರಂಪ್, ಯಾರಿಗೆ ಗೊತ್ತು ಮೂರನೇ ಬಾರಿಗೆ ಅವರನ್ನು ಸೋಲಿಸಲು ನಾನು ನಿರ್ಧರಿಸಬಹುದು ಎಂದು ಹೇಳಿದರು.
 

Stay up to date on all the latest ಅಂತಾರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp