ಬಾಂಗ್ಲಾ ಸ್ವಾತಂತ್ರ್ಯ ಸುವರ್ಣ ಮಹೋತ್ಸವಕ್ಕೆ ಪ್ರಧಾನಿ ಮೋದಿ ಅತಿಥಿ: ಬಾಂಗ್ಲಾ ವಿದೇಶಾಂಗ ಸಚಿವ
50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಲ್ಲಿ ಬಾಂಗ್ಲಾದೇಶದಲ್ಲಿ ಆಚರಿಸಲಾಗುತ್ತಿರುವ ಗೋಲ್ಡನ್ ಜುಬಿಲಿ ಸಂಭ್ರಮಾಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬ್ದುಲ್ ಮೊಮೆನ್ ಅವರು ಖಚಿತಪಡಿಸಿದ್ದಾರೆ.
Published: 13th March 2021 11:45 AM | Last Updated: 13th March 2021 12:49 PM | A+A A-

ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬ್ದುಲ್ ಮೊಮೆನ್
ಢಾಕಾ: 50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಲ್ಲಿ ಬಾಂಗ್ಲಾದೇಶದಲ್ಲಿ ಆಚರಿಸಲಾಗುತ್ತಿರುವ ಗೋಲ್ಡನ್ ಜುಬಿಲಿ ಸಂಭ್ರಮಾಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬ್ದುಲ್ ಮೊಮೆನ್ ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 1971ರಲ್ಲಿ ಸ್ವಾತಂತ್ರ್ಯ ಪಡೆದ ಬಾಂಗ್ಲಾದೇಶ ಮಾರ್ಚ್ 26ಕ್ಕೆ 50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ. ಗೋಲ್ಡನ್ ಜುಬಿಲಿ ಆಚರಣೆಯ ಸಂದರ್ಭದಲ್ಲಿ ಮೋದಿ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಭೇಟಿ ವೇಳೆ ಉಭಯ ರಾಷ್ಟ್ರಗಳ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆಗಳೂ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಮೋದಿಯವರು ಬಾಂಗ್ಲಾದೇಶಕ್ಕೆ ಆಗಮಿಸುತ್ತಿರುವುದು ಬಹಳ ಸಂತಸ ತಂದಿದೆ. ಈ ಭೇಟಿ ಅವರಲ್ಲಿರುವ ಪರಿಪಕ್ವತೆ ಮತ್ತು ಸಾಧನೆಯ ಎತ್ತರವನ್ನು ತೋರಿಸುತ್ತದೆ ಎಂದು ಶ್ಲಾಘಿಸಿದ್ದಾರೆ.
ಮಾರ್ಚ್ 26, 1971ರಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಗೊಂಡಿತ್ತು. ಈ ವಿಮೋಚನೆಯಲ್ಲಿ ಬಾಂಗ್ಲಾದೇಶಕ್ಕೆ ಭಾರತ ನೆರವು ನೀಡಿತ್ತು. ಭಾರತದ ನೆರವಿನಿಂದ ಬಾಂಗ್ಲಾದೇಶ ಸೇನೆಮುಂದೆ ಪಾಕಿಸ್ತಾನ ಶರಣಾಗಿತ್ತು. ಡಿಸೆಂಬರ್ 16, 1971ರಲ್ಲಿ ಪಾಕಿಸ್ತಾನ ಶರಣಾಗಿತ್ತು.
ಮಾರ್ಚ್ 26 ರಿಂದ ಬಾಂಗ್ಲಾದೇಶ ಸ್ವತಂತ್ರ ದೇಶವಾಯಿತು. ಇದೀಗ ಮಾರ್ಚ್ 26, 2021ಕ್ಕೆ 50ನೇ ವರ್ಷಾಚರಣೆಗೆ ಬಾಂಗ್ಲಾದೇಶ ಪ್ರದಾನಿ ಶೇಕ್ ಹಸಿನಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಿದ್ದರು. ಆಹ್ವಾನ ಹಿನ್ನೆಲೆಯಲ್ಲಿ ಮೋದಿಯವರೂ 2 ದಿನಗಳ ಕಾಲ ಢಾಕಾ ಪ್ರವಾಸ ಕೈಗೊಳ್ಳುತ್ತಾರೆಂದು ಹೇಳಲಾಗುತ್ತಿತ್ತು.
2020ರ ನವೆಂಬರ್ ಬಳಿಕ ಪ್ರಧಾನಿ ಮೋದಿ ಯಾವುದೇ ದೇಶಕ್ಕೆ ಪ್ರಯಾಣ ಮಾಡಿರಲಿಲ್ಲ. ಡಿಸೆಂಬರ್ ತಿಂಗಳಲ್ಲೇ ಚೀನಾದಲ್ಲಿ ಕೊರೋನಾ ಅಬ್ಬರ ಆರಂಭಗೊಂಡರೆ, 2020ರ ಆರಂಭದಿಂದ ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಕೊರೋನಾ ಭೀತಿ ಆವರಿಸಿಕೊಂಡಿತ್ತು. ಹೀಗಾಗಿ ಮೋದಿ ಪ್ರವಾಸ ಸ್ಥಗಿತಗೊಂಡಿತ್ತು. ಇನ್ನು ಅಂತಾರಾಷ್ಟ್ರೀಯ ಸಮ್ಮೇಳನಗಳೂ ಕೂಡ ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆಯುತ್ತಿದೆ.