ಕೋವಿಡ್ ಲಸಿಕೆ ಕೊರತೆ: ಬ್ರೆಜಿಲ್ ವಿದೇಶಾಂಗ ಸಚಿವ ರಾಜಿನಾಮೆ
ಬ್ರೆಜಿಲ್ ನಲ್ಲಿ ಕೊರೋನಾ ವೈರಸ್ ಲಸಿಕೆಗೆ ಕೊರತೆಯುಂಟಾದ ಹಿನ್ನಲೆಯಲ್ಲಿ ಭುಗಿಲೆದ್ದಿರುವ ಆಕ್ರೋಶದಿಂದಾಗಿ ಬ್ರೆಜಿಲ್ ವಿದೇಶಾಂಗ ಸಚಿವ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
Published: 30th March 2021 05:05 PM | Last Updated: 30th March 2021 05:05 PM | A+A A-

ಬ್ರೆಜಿಲ್ ವಿದೇಶಾಂಗ ಸಚಿವ ರಾಜಿನಾಮೆ
ಬ್ರೆಸಿಲಿಯಾ: ಬ್ರೆಜಿಲ್ ನಲ್ಲಿ ಕೊರೋನಾ ವೈರಸ್ ಲಸಿಕೆಗೆ ಕೊರತೆಯುಂಟಾದ ಹಿನ್ನಲೆಯಲ್ಲಿ ಭುಗಿಲೆದ್ದಿರುವ ಆಕ್ರೋಶದಿಂದಾಗಿ ಬ್ರೆಜಿಲ್ ವಿದೇಶಾಂಗ ಸಚಿವ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಬ್ರೆಜಿಲ್ ನಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಜೋರಾಗಿರುವಂತೆಯೇ ಲಸಿಕೆಗಾಗಿ ಆ ದೇಶದಲ್ಲಿ ಹಾಹಾಕಾರ ಸೃಷ್ಟಿಯಾಗಿದೆ. ಲಸಿಕೆ ಕೊರತೆ ವಿಚಾರವಾಗಿ ಇದೀಗ ಬ್ರೆಜಿಲ್ ವಿದೇಶಾಂಗ ಸಚಿವ ಅರ್ನೆಸ್ಟೊ ಅರೌಜೊ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಕೊರತೆಗೆ ವಿದೇಶಾಂಗ ಸಚಿವ ಅರ್ನೆಸ್ಟೊ ಅರೌಜೊ ಅವರ ರಾಜತಾಂತ್ರಿಕ ಹಿನ್ನಡೆಯೇ ಕಾರಣ. ದೇಶದ ಜನರು ಕೊರೋನಾ ವೈರಸ್ ಸೋಂಕಿನಿಂದ ಸಾಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಸಿಕೆ ಉತ್ಪಾದನಾ ದೇಶಗಳೊಂದಿಗೆ ರಾಜತಾಂತ್ರಿಕವಾಗಿ ಚರ್ಚಿಸಿ ಲಸಿಕೆ ಪಡೆಯುವಲ್ಲಿ ಅರ್ನೆಸ್ಟೊ ಅರೌಜೊ ವಿಫಲರಾಗಿದ್ದಾರೆ ಎಂದು ವಿಪಕ್ಷಗಳು ಆಗ್ರಹ ವ್ಯಕ್ತಪಡಿಸಿದ್ದರು.
ಬ್ರೆಜಿಲ್ ನಲ್ಲಿ ಅರ್ನೆಸ್ಟೊ ಅರೌಜೊ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ. ರಾಜಿನಾಮೆ ಪತ್ರವನ್ನು ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಅರ್ನೆಸ್ಟೊ ಅರೌಜೊ ಅವರ ರಾಜಿನಾಮೆ ವಿಚಾರದ ಕುರಿತು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.
ಬ್ರಿಜಿಲ್ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದ ಲಸಿಕೆ
ಇನ್ನು ಈ ಹಿಂದೆಯೂ ಕೂಡ ಇದೇ ಕೋವಿಡ್ ಲಸಿಕೆ ವಿಚಾರ ಬ್ರೆಜಿಲ್ ಸಂಸತ್ತಿನಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿತ್ತು. ಬ್ರಿಜಿಲ್ ಸರ್ಕಾರ ಕೋವಿಡ್ ಲಸಿಕೆ ಪಡೆಯುವ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದಿದೆ. ಪರಿಣಾಮ ದೇಶದಲ್ಲಿ ಕೋವಿಡ್ ಲಸಿಕೆಯ ಕೊರತೆಯುಂಟಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಬ್ರಿಜಿಲ್ ಅಧ್ಯಕ್ಷರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗೆ ನಿಕಟ ಸಂಪರ್ಕ ಇಟ್ಟಿಕೊಂಡಿದ್ದ ಕಾರಣದಿಂದಲೇ ಚೀನಾ ದೇಶ ಬ್ರೆಜಿಲ್ ಗೆ ಲಸಿಕೆ ರವಾನಿಸುವಲ್ಲಿ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದರು.
ಒಂದೇ ದಿನ 3,650 ಸೋಂಕಿತರ ಸಾವು
ಇನ್ನು ಬ್ರೆಜಿಲ್ ನಲ್ಲಿ ಶನಿವಾರ ಒಂದೇ ದಿನ ಅತ್ಯಧಿಕ ಪ್ರಮಾಣದ ಅಂದರೆ 3,650 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಬ್ರೆಜಿಲ್ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3,12,000ಕ್ಕೆ ಏರಿಕೆಯಾಗಿದೆ.