ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್-19 B.1.617 ರೂಪಾಂತರಿ ವೈರಸ್ ಈಗ 53 ದೇಶಗಳಲ್ಲಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ

ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಕೋವಿಡ್-19 B.1.617 ರೂಪಾಂತರಿ ವೈರಸ್ ಇದೀಗ 53 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೋವಿಡ್-19 (ಸಾಂಕೇತಿಕ ಚಿತ್ರ)
ಕೋವಿಡ್-19 (ಸಾಂಕೇತಿಕ ಚಿತ್ರ)

ಜಿನೀವಾ: ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಕೋವಿಡ್-19 B.1.617 ರೂಪಾಂತರಿ ವೈರಸ್ ಇದೀಗ 53 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಭಾರತದಲ್ಲಿ ಮಾರಕ ಕೊರೋನಾ ವೈರಸ್ 2ನೇ ಅಲೆ ಅಟ್ಟಹಾಸ ಮುಂದುವರೆದಿರುವಂತೆಯೇ ಇತ್ತ ಭಾರತದ ಈ ಪರಿಸ್ಥಿತಿಗೆ ಕೋವಿಡ್ ವೈರಸ್ ನ ರೂಪಾಂತರವೇ ಕಾರಣ ಎಂಬ ವಿಶ್ಲೇಷಣೆಗಳು ಕೂಡ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಇದೇ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಪ್ರತಿಕ್ರಿಯೆ  ನೀಡಿದ್ದು, ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಕೋವಿಡ್-19 B.1.617 ರೂಪಾಂತರಿ ವೈರಸ್ ಇದೀಗ 53 ದೇಶಗಳಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ.

ಮೇ 25 ರಂದು ಪ್ರಕಟವಾದ ವಿಶ್ವ ಆರೋಗ್ಯ ಸಂಸ್ಥೆಯ COVID-19 ವೀಕ್ಲಿ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 'ಕಳೆದ ಏಳು ದಿನಗಳಲ್ಲಿ ಭಾರತವು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 23 ರಷ್ಟು ಇಳಿಕೆ ದಾಖಲಿಸಿದೆಯಾದರೂ ಜಾಗತಿಕ ಮಟ್ಟದಲ್ಲಿ ಅದು ಗರಿಷ್ಠ  ಪ್ರಮಾಣದ್ದಾಗಿದೆ. ಕಳೆದೊಂದು ವಾರದಲ್ಲಿ ಜಾಗತಿಕವಾಗಿ ಹೊಸ ಸೋಂಕು ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಜಗತ್ತಿನಾದ್ಯಂತ 4.1 ದಶಲಕ್ಷಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಮತ್ತು 84,000 ಹೊಸ ಸಾವುಗಳು ವರದಿಯಾಗಿವೆ. ಈ ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ  ಈ ವಾರದ ಸೋಂಕು ಪ್ರಮಾಣ ಶೇ.14ರಷ್ಟು ಮತ್ತು ಸಾವಿನ ಪ್ರಮಾಣ ಶೇ.2ರಷ್ಟು ಕುಸಿತಕಂಡಿದೆ.

ಭಾರತದಲ್ಲಿ ಪತ್ತೆಯಾಗಿದ್ದ ವೈರಸ್ ರೂಪಾಂತರ 53 ದೇಶಗಳಲ್ಲಿ ಪತ್ತೆ
ಇನ್ನು ಇದೇ ವೇಳೆ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಕೋವಿಡ್-19 B.1.617 ರೂಪಾಂತರಿ ವೈರಸ್ ಇದೀಗ 53 ದೇಶಗಳಲ್ಲಿ ಪತ್ತೆಯಾಗಿದೆ. B.1.617 ರೂಪಾಂತರಿ ವೈರಸ್‌ ಅನ್ನು ಮೂರು ವಂಶಾವಳಿಗಳಾಗಿ ವಿಂಗಡಿಸಲಾಗಿದ್ದು,  B.1.617.1, B.1.617.2 ಮತ್ತು  B.1.617.3 ಗಳಾಗಿ ವಿಂಗಡಿಸಲಾಗಿದೆ. ಬಿ .1.617.1 41 ದೇಶಗಳಲ್ಲಿ ಕಂಡುಬಂದಿದ್ದು, ಬಿ .1.617 54 ದೇಶಗಳಲ್ಲಿ ಮತ್ತು ಆರರಲ್ಲಿ ದೇಶಗಳಲ್ಲಿ B.1.617.3 ರೂಪಾಂತರ ಪತ್ತೆಯಾಗಿದೆ. ಇದಲ್ಲದೆ, B.1.617.1, B.1.617.2 ಉಪ-ವಂಶಾವಳಿಗಳ ಮಾಹಿತಿಯನ್ನು ಚೀನಾ ಸೇರಿದಂತೆ  11 ದೇಶಗಳ ಅನಧಿಕೃತ ಮೂಲಗಳಿಂದ ಡಬ್ಲ್ಯುಎಚ್‌ಒ ಸ್ವೀಕರಿಸಿದೆ ಮತ್ತು ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದ್ದಂತೆ ಪರಿಶೀಲಿಸಲಾಗುವುದು ಎಂದು ಹೇಳಿದೆ.

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ B.1.617 ರೂಪಾಂತರಿ ತಳಿಯನ್ನು ಕಾಳಜಿಯ ರೂಪಾಂತರ ವೈರಸ್ ಎಂದು ಪರಿಗಣಿಸಿದೆ. ಈ ರೂಪಾಂತರಿ ತಳಿಯಲ್ಲಿ ಸೋಂಕು ಪ್ರಸರಣದ ವೇಗ ಹೆಚ್ಚಿದ್ದು, ರೋಗದ ತೀವ್ರತೆಯ ಕುರಿತ ಸಂಶೋಧನೆ ಪ್ರಗತಿಯಲ್ಲಿದೆ ಎಂದು ಹೇಳಿದೆ. 

ಜಾಗತಿಕ ಸೋಂಕು ಪ್ರಮಾಣ ಇಳಿಕೆ
ಕಳೆದ ಏಳು ದಿನಗಳಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಹೊಸ ಕೋವಿಡ್-19 ಪ್ರಕರಣಗಳು ಭಾರತದಿಂದ ವರದಿಯಾಗಿದ್ದು, ಭಾರತದಲ್ಲಿ ಒಟ್ಟು 1,846,055 ಹೊಸ ಪ್ರಕರಣಗಳು ವರದಿಯಾಗಿದೆ. ಆದರೆ ಇದರ ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ ಹೊಸ ಸೋಂಕು ಪ್ರಕರಣಗಳ ಪ್ರಮಾಣದಲ್ಲಿ ಶೇ.23ರಷ್ಟು  ಕಡಿಮೆಯಾಗಿದೆ. ಉಳಿದಂತೆ ಬ್ರೆಜಿಲ್ (451,424 ಹೊಸ ಪ್ರಕರಣಗಳು; ಶೇಕಡಾ 3 ರಷ್ಟು ಹೆಚ್ಚಳ), ಅರ್ಜೆಂಟೀನಾ (213,046 ಹೊಸ ಪ್ರಕರಣಗಳು; ಶೇ.41ರಷ್ಟು ಹೆಚ್ಚಳ), ಅಮೇರಿಕಾ (188,410 ಹೊಸ ಪ್ರಕರಣಗಳು; ಶೇ.20 ರಷ್ಟು ಇಳಿಕೆ), ಮತ್ತು ಕೊಲಂಬಿಯಾ (107,590 ಹೊಸ ಪ್ರಕರಣಗಳು; 7 ಶೇಕಡಾ ಇಳಿಕೆ)  ಇದೆ.

ಬಹುತೇಕ ದೇಶಗಳಲ್ಲಿ ಸೋಂಕು ಪ್ರಮಾಣ ತಗ್ಗಿದೆಯಾದರೂ ಸಾಕಷ್ಟು ದೇಶಗಳಲ್ಲಿ ಸೋಂಕು ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಾಳಜಿ ವ್ಯಕ್ತಪಡಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com