ಪಾಕ್ ನಲ್ಲಿ ಅರಾಜಕತೆ, ಇಮ್ರಾನ್ ಸರ್ಕಾರ ನಾಲಾಯಕ್ ಸರ್ಕಾರ: ನವಾಜ್ ಶರೀಫ್ ಪುತ್ರಿ
ಆದಷ್ಟು ಬೇಗನೆ ಪಾಕ್ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ತಮ್ಮ ತಂದೆ ಲಂಡನ್ ನಿಂದ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಮರಿಯಂ ಹೇಳಿದ್ದಾರೆ.
Published: 02nd September 2021 12:42 PM | Last Updated: 02nd September 2021 12:42 PM | A+A A-

ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ವಿರುದ್ಧ ಕಿಡಿ ಕಾರಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಪುತ್ರಿ, ಪಿಎಂಎಲ್- ಎನ್ ಪಕ್ಷದ ಉಪಾಧ್ಯಕ್ಷೆ ಮರಿಯಂ ನವಾಜ್, ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಸರ್ಕಾರ ಅನಧಿಕೃತ ಹಾಗೂ ನಾಲಾಯಕ್ ಎಂದು ಇದೇ ಸಂದರ್ಭದಲ್ಲಿ ಅವರು ಅವಹೇಳನ ಮಾಡಿದ್ದಾರೆ.
ಭ್ರಷ್ಟಾಚಾರ ಪ್ರಕರಣದ ವಿಚಾರಣೆಗೆ ಇಸ್ಲಾಮಾಬಾದ್ ಹೈಕೋರ್ಟಿಗೆ ಹಾಜರಾಗಿದ್ದ ಮರಿಯಂ ನವಾಜ್, ನಂತರ ಪತ್ರಿಕಾ ಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 8 ಕ್ಕೆ ಮುಂದೂಡಿಕೆಯಾಗಿದೆ.
ದೇಶದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲ. ಪಾಕ್ ಇತಿಹಾಸದಲ್ಲೇ ಇಷ್ಟೊಂದು ನಾಲಯಕ್ಕಾದ ಸರ್ಕಾರ ಬಂದಿರಲಿಲ್ಲ. ದೇಶವನ್ನು ಬರ್ಬಾದ್ ಮಾಡುವುದರಲ್ಲಿ ಇಮ್ರಾನ್ ಖಾನ್ ಸರ್ಕಾರ ನಿರತವಾಗಿದೆ ಎಂದು ಮರಿಯಂ ಆಪಾದಿಸಿದ್ದಾರೆ.
ಚಿಕಿತ್ಸೆ ನೆಪದಲ್ಲಿ ಲಂಡನ್ ಗೆ ಪರಾರಿಯಾಗಿದ್ದ ನವಾಜ್ ಶರೀಫ್ ಮತ್ತೆ ಮರಳುವರೇ ಎನ್ನುವ ಪ್ರಶ್ನೆಗೆ ಮರಿಯಂ ಉತ್ತರಿಸಿದಉ. ಆದಷ್ಟು ಬೇಗನೆ ಪಾಕ್ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ತಮ್ಮ ತಂದೆ ಲಂಡನ್ ನಿಂದ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಮರಿಯಂ ಹೇಳಿದ್ದಾರೆ.