ನ್ಯೂಜಿಲೆಂಡ್ ಸೂಪರ್ ಮಾರ್ಕೆಟ್ ನಲ್ಲಿ ಉಗ್ರ ದಾಳಿ; ಆರು ಜನರಿಗೆ ಚಾಕು ಇರಿತ, ಭದ್ರತಾ ಪಡೆಗಳಿಂದ ಉಗ್ರನ ಹತ್ಯೆ
ನ್ಯೂಜಿಲೆಂಡ್ ಸೂಪರ್ ಮಾರ್ಕೆಟ್ ನಲ್ಲಿ ಉಗ್ರ ದಾಳಿ ಸಂಭವಿಸಿದ್ದು, ಮಾರ್ಕೆಟ್ ಪ್ರವೇಶಿಸಿದ ಶಂಕಿತ ಉಗ್ರ ಚಾಕುವಿನಿಂದ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದು ಈ ವೇಳೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Published: 03rd September 2021 01:20 PM | Last Updated: 03rd September 2021 02:07 PM | A+A A-

ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಸೂಪರ್ ಮಾರ್ಕೆಟ್ ನಲ್ಲಿ ಉಗ್ರ ದಾಳಿ ಸಂಭವಿಸಿದ್ದು, ಮಾರ್ಕೆಟ್ ಪ್ರವೇಶಿಸಿದ ಶಂಕಿತ ಉಗ್ರ ಚಾಕುವಿನಿಂದ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದು ಈ ವೇಳೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಸ್ಫೂರ್ತಿ ಪಡೆದ ದಾಳಿಕೋರ ಶುಕ್ರವಾರ, ಸೆಪ್ಟೆಂಬರ್ 3, 2021 ರಂದು ನ್ಯೂಜಿಲೆಂಡ್‌ನ ಸೂಪರ್ ಮಾರ್ಕೆಟ್‌ನಲ್ಲಿ ಆರು ಜನರನ್ನು ಇರಿದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಪಡೆಗಳು ಆತನನ್ನು ಹೊಡೆದುರುಳಿಸಿವೆ.
ಇನ್ನು ಈ ಬಗ್ಗೆ ಸ್ವತಃ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಮಾಹಿತಿ ನೀಡಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಿಂದ ಸ್ಪೂರ್ತಿ ಪಡೆದಿದ್ದ ಶಂಕಿತ ಉಗ್ರ ಈ ದಾಳಿ ಮಾಡಿದ್ದು, ಆತನನ್ನು ಈ ಮೊದಲೇ ಉಗ್ರ ಚಟುವಟಿಕೆ ಶಂಕೆ ಮೇರೆಗೆ ಭದ್ರತಾ ಪಡೆಗಳ ಕಣ್ಗಾವಲಿನಲ್ಲಿನಲ್ಲಿರಿಸಲಾಗಿತ್ತು ಎಂದು ಹೇಳಿದ್ದಾರೆ.
New Zealand supermarket stabbing a 'terrorist' attack, says PM Jacinda Ardern, reports AFP
— ANI (@ANI) September 3, 2021
(file photo) pic.twitter.com/7M1B0KjlPF
2011 ರಲ್ಲಿ ನ್ಯೂಜಿಲ್ಯಾಂಡ್‌ಗೆ ಆಗಮಿಸಿದ್ದ ಮತ್ತು ಭಯೋತ್ಪಾದನೆ ವೀಕ್ಷಣಾ ಪಟ್ಟಿಯಲ್ಲಿದ್ದ ಶ್ರೀಲಂಕಾ ಪ್ರಜೆ ನ್ಯೂಜಿಲೆಂಡ್ ನ ಆಕ್ಲೆಂಡ್‌ನ ಉಪನಗರದಲ್ಲಿರುವ ಶಾಪಿಂಗ್ ಮಾಲ್‌ಗೆ ಪ್ರವೇಶಿಸಿ, ಅಲ್ಲಿದ್ದ ಚಾಕುವನ್ನು ಕಸಿದು ಅಲ್ಲಿದ್ದ ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಆರು ಮಂದಿ ಗಾಯಗೊಂಡಿದ್ದು, ದಾಳಿ ಆರಂಭವಾದ 60 ಸೆಕೆಂಡುಗಳಲ್ಲಿ ಆತನ ಮೇಲೆ ನಿಗಾ ಇಟ್ಟಿದ್ದ ಪೋಲಿಸರು ಗುಂಡು ಹಾರಿಸಿ ಆತನನ್ನು ಕೊಂದು ಹಾಕಿದ್ದಾರೆ. ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದು, ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು.
"ಇಂದು ನಡೆದದ್ದು ಹೇಯ, ದ್ವೇಷ, ತಪ್ಪು,. ಈತ ಯಾವುದೇ ನಂಬಿಕೆ ಅಥವಾ ಸಮುದಾಯದ ಪ್ರತಿನಿಧಿಯಲ್ಲ. ಇದು ಹಿಂಸಾತ್ಮಕ ಸಿದ್ಧಾಂತ ಮತ್ತು ಐಸಿಸ್- ಪ್ರೇರಿತ ದಾಳಿ. 2016 ರಿಂದ ಕಣ್ಗಾವಲಿನಲ್ಲಿರುವ ವ್ಯಕ್ತಿಯ ಬಗ್ಗೆ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ, ಆತ ನ್ಯಾಯಾಲಯ ನಿಗ್ರಹದ ಆದೇಶಗಳ ವಿಷಯವಾಗಿರುತ್ತಾನೆ. ಪೊಲೀಸ್ ಕಮೀಷನರ್ ಆಂಡ್ರ್ಯೂ ಕೋಸ್ಟರ್ ಅವರು ಉತ್ತಮ ನಿರ್ವಹಣೆ ಮಾಡಿದ್ದು ಮತ್ತು ಸಮುದಾಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಜಸ್ಸಿಂಡಾ ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ನ್ಯೂಜಿಲ್ಯಾಂಡ್‌ನ ಕೆಟ್ಟ ಭಯೋತ್ಪಾದಕ ದಾಳಿಯು 2019 ರ ಮಾರ್ಚ್‌ನಲ್ಲಿ ನಡೆದ ಕ್ರೈಸ್ಟ್‌ಚರ್ಚ್ ಮಸೀದಿಗಳ ಗುಂಡಿನ ದಾಳಿಯಾಗಿದ್ದು, ಒಬ್ಬ ಬಂದೂಕುಧಾರಿ 51 ಮುಸ್ಲಿಮರನ್ನು ಕೊಂದು 40 ಜನರನ್ನು ತೀವ್ರವಾಗಿ ಗಾಯಗೊಳಿಸಿದನು.