"ಭಾರತದಲ್ಲಿನ ಸುಧಾರಣೆಗಳು ಜಗತ್ತನ್ನೇ ಬದಲಾಯಿಸುತ್ತವೆ": ವಿಶ್ವಸಂಸ್ಥೆ ಭಾಷಣದಲ್ಲಿ ಪ್ರಧಾನಿ ಮೋದಿ 

ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯ 76 ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದು ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ತಿವಿದಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ
ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯ 76 ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದು ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ತಿವಿದಿದ್ದಾರೆ.

ಕೋವಿಡ್-19 ಗೆ ಬಲಿಯಾದವರಿಗೆ ಗೌರವ ಸಲ್ಲಿಸಿ ಭಾಷಣ ಪ್ರಾರಂಭಿಸಿದ ಮೋದಿ, ಕೋವಿಡ್-19, ಭಯೋತ್ಪಾದನೆ, ಭಾರತದ ಪ್ರಜಾಪ್ರಭುತ್ವ, ಆರ್ಥಿಕತೆ, ಅಫ್ಘಾನಿಸ್ತಾನ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. 

"ಒಂದು ವರೆ ವರ್ಷಗಳಿಂದ ಜಗತ್ತು ಕಳೆದ 100 ವರ್ಷಗಳಲ್ಲೇ ಎದುರಿಸದೇ ಇರುವ ಸಾಂಕ್ರಾಮಿಕವನ್ನು ಎದುರಿಸುತ್ತಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದು, ಕೋವಿಡ್-19 ನಿಂದ ಮೃತಪಟ್ಟವರಿಗೆ ಗೌರವ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.

ಇದೇ ವೇಳೆ ಭಾರತದ ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವ ಹಾಗೂ ಜಗತ್ತಿಗೆ ಅದರ ಮೌಲ್ಯಗಳ ಪ್ರಾಮುಖ್ಯತೆಯ ಬಗ್ಗೆಯೂ ಮೋದಿ ಮಾತನಾಡಿದ್ದು, ಭಾರತದಲ್ಲಿನ ಸುಧಾರಣೆಗಳು ಜಗತ್ತನ್ನು ಬದಲಾವಣೆ ಮಾಡುವುದಕ್ಕೆ ಸಹಕಾರಿಯಾಗಿವೆ ಎಂದು ಹೇಳಿದ್ದಾರೆ.

"ಭಾರತ ಬೆಳೆದರೆ ಜಗತ್ತೂ ಬೆಳೆಯಲಿದೆ. ಭಾರತದಲ್ಲಿನ ಸುಧಾರಣೆಗಳು ಜಗತ್ತನ್ನು ಬದಲಾಯಿಸುತ್ತವೆ" ಎಂದು ಮೋದಿ ಹೇಳಿದ್ದಾರೆ. ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳುವಂತಿರಬೇಕು, ಸರ್ವರನ್ನೂ ತಲುಪುವಂತಿರಬೇಕು ಇದು ನಮ್ಮ ಆದ್ಯತೆ ಎಂದು ಮೋದಿ ಹೇಳಿದ್ದಾರೆ.

ಭಾರತವೂ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಉಲ್ಲೇಖಿಸಿರುವ ಮೋದಿ, ಮಲಿನಗೊಂಡಿರುವ ನೀರಿನ ಸಮಸ್ಯೆ ಭಾರತಕ್ಕೆ ಅಷ್ಟೇ ಸೀಮಿತವಾಗಿಲ್ಲ. ಬಡ ಹಾಗೂ ಅಭಿವೃದ್ಧಿಯಾಗುತ್ತಿರುವ ದೇಶಗಳಲ್ಲೂ ಈ ಸಮಸ್ಯೆ ಇದೆ" ಎಂದು ಹೇಳಿದ್ದಾರೆ.

ಈ ಸಮಸ್ಯೆಯನ್ನು ಕೊನೆಗಾಣಿಸುವುದಕ್ಕಾಗಿ 17 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವ ಅಭಿಯಾನ ಕೈಗೊಂಡಿದ್ದೇವೆ ಎಂದು ಮೋದಿ ಮಾಹಿತಿ ನೀಡಿದ್ದಾರೆ.

ಭಾರತ ಉಜ್ವಲ ಉತ್ಸಾಹಭರಿತ ಪ್ರಜಾಪ್ರಭುತ್ವಕ್ಕೆ ಉದಾಹರಣೆ ಎಂದು ಮೋದಿ ಹೇಳಿದ್ದು, ನಮ್ಮಲ್ಲಿನ ವೈವಿಧ್ಯತೆ ಬಲಿಷ್ಠ ಪ್ರಜಾಪ್ರಭುತ್ವದ ಗುರುತಾಗಿದೆ ಎಂದಿದ್ದಾರೆ. ಇದೇ ವೇಳೆ ಕೋವಿಡ್-19 ಲಸಿಕೆಗಳನ್ನು ಭಾರತದಲ್ಲಿ ಉತ್ಪಾದಿಸಲು ಮೋದಿ ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಇನ್ನು ತಮ್ಮ ಭಾಷಣದಲ್ಲಿ ಪಾಕಿಸ್ತಾನವನ್ನು ಬಿಡದ ಮೋದಿ, "ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ರಾಜಕೀಯ ಸಾಧನವಾಗಿ ಬಳಾಕೆ ಮಾಡಿಕೊಳ್ಳುತ್ತಿದೆ ಎಂದು ತಿವಿದಿದ್ದಾರೆ. ಅಫ್ಘಾನಿಸ್ತಾನದ ಬಗ್ಗೆಯೂ ಮೋದಿ ಮಾತನಾಡಿದ್ದು, ಅಫ್ಘಾನ್ ನ ಭೂ ಭಾಗವನ್ನು ಭಯೋತ್ಪಾದನೆ, ಭಯೋತ್ಪಾದಕ ಚಟುವಟಿಕೆಗಳಿಗಾಗಿ ಬಳಕೆ ಮಾಡದಂತೆ ಖಾತ್ರಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com