ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ವಿದೇಶಿ ಪಿತೂರಿ: ಇಮ್ರಾನ್ ಖಾನ್ ಆರೋಪ ತಳ್ಳಿಹಾಕಿದ ಯುಎಸ್
ತಮ್ಮನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ‘ವಿದೇಶಿ ಪಿತೂರಿ’ಯಲ್ಲಿ ವಾಷಿಂಗ್ಟನ್ ಪಾತ್ರವಿದೆ ಎಂದಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪವನ್ನ ಅಮೆರಿಕ ತಳ್ಳಿಹಾಕಿದೆ.
Published: 01st April 2022 01:14 PM | Last Updated: 01st April 2022 01:14 PM | A+A A-

ಇಮ್ರಾನ್ ಖಾನ್
ವಾಷಿಂಗ್ಟನ್: ತಮ್ಮನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ‘ವಿದೇಶಿ ಪಿತೂರಿ’ಯಲ್ಲಿ ವಾಷಿಂಗ್ಟನ್ ಪಾತ್ರವಿದೆ ಎಂದಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪವನ್ನ ಅಮೆರಿಕ ತಳ್ಳಿಹಾಕಿದೆ.
“ಈ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ. ನಾವು ಪಾಕಿಸ್ತಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಾವು ಪಾಕಿಸ್ತಾನದ ಸಾಂವಿಧಾನಿಕ ಪ್ರಕ್ರಿಯೆ ಮತ್ತು ಕಾನೂನಿನ ನಿಯಮವನ್ನು ಗೌರವಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ತಿಳಿಸಿದ್ದಾರೆ.
ಅವಿಶ್ವಾಸ ನಿರ್ಣಯದ ಹಿನ್ನೆಲೆ ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್, “ಇಮ್ರಾನ್ ಖಾನ್ ಅವರನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ದೇಶವು ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂಬ ಸಂದೇಶವನ್ನು ವಿದೇಶಿ ರಾಷ್ಟ್ರವು ಕಳುಹಿಸಿದೆ” ಎಂದು ಯುಎಸ್ ವಿರುದ್ಧ ಆರೋಪಿಸಿದ್ರು.
ಈಗಾಗ್ಲೇ ಸೇನೆ ಸೇರಿದಂತೆ ವಿಪಕ್ಷಗಳ ವಿಶ್ವಾಸ ಕಳೆದುಕೊಂಡಿರೋ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಕೊನೆಯ ಕ್ಷಣದವರೆಗೂ ಹೋರಾಡುತ್ತೇನೆಂದು ಸವಾಲು ಎಸೆದಿದ್ದಾರೆ.