
ಶ್ರೀಲಂಕಾಗೆ ನೆರವಿನ ಪ್ಯಾಕೇಜ್
ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಭಾರತ ಸುಮಾರು 1.5 ಬಿಲಿಯನ್ ಡಾಲರ್ ಮೊತ್ತದ ನೆರವಿನ ಪ್ಯಾಕೇಜ್ ನೀಡುತ್ತಿದೆ.
ಇಂಧನ ಮತ್ತು ಆಹಾರ ಸಂಗ್ರಹಣೆಗಾಗಿ ಭಾರತವು ಬಿಕ್ಕಟ್ಟು ಪೀಡಿತ ಶ್ರೀಲಂಕಾಕ್ಕೆ ತನ್ನ ನೆರವಿನ ಕ್ರೆಡಿಟ್ ಲೈನ್ಸ್ (LOCs) ಪ್ರಸ್ತುತ ಒಟ್ಟು 1.5 ಶತಕೋಟಿ ಡಾಲರ್ ಗೆ ಏರಿಕೆ ಮಾಡಿದೆ. ಅಂತೆಯೇ ಸರಕುಗಳ ರವಾನೆ ಮತ್ತಷ್ಟು ಮುಂದುವರಿಯಲಿವೆ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನರ್ ಗೋಪಾಲ್ ಬಾಗ್ಲೇ ಮಂಗಳವಾರ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ಭಾರತವು ತನ್ನ ಆರ್ಥಿಕ ಪ್ಯಾಕೇಜ್ ಅನ್ನು ವಿಸ್ತರಿಸಿದ್ದು, ಅದು ಕೆಲವು ತಕ್ಷಣದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಅದರ ದೇಶೀಯ ಆರ್ಥಿಕತೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ರಾಯಭಾರಿ ಮೊದಲೇ ತಿಳಿಸಿದ್ದಂತೆ ಈ ವರ್ಷದ ಜನವರಿಯಿಂದ ಶ್ರೀಲಂಕಾಕ್ಕೆ ಭಾರತದಿಂದ ಆರ್ಥಿಕ ನೆರವು 2.5 ಶತಕೋಟಿ ಡಾಲರ್ ಮೀರಿತ್ತು. ಫೆಬ್ರವರಿಯಲ್ಲಿ ಇಂಧನ ಖರೀದಿಗಾಗಿ 500 ಮಿಲಿಯನ್ ಡಾಲರ್ ಸಾಲಕ್ಕೆ ಸಹಿ ಹಾಕಲಾಗಿತ್ತು. ಮಾರ್ಚ್ ಆರಂಭದಿಂದ, ಒಟ್ಟು 150,000 ಟನ್ಗಳಷ್ಟು ಜೆಟ್ ವಿಮಾನ ಇಂಧನ, ಡೀಸೆಲ್ ಮತ್ತು ಪೆಟ್ರೋಲ್ ಸೇರಿದಂತೆ ಒಟ್ಟು ನಾಲ್ಕು ಸರಕುಗಳು ಶ್ರೀಲಂಕಾಕ್ಕೆ ಬಂದಿವೆ ಎಂದು ಬಾಗ್ಲೇ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ: ಅಧ್ಯಕ್ಷರಿಂದ ನೇಮಕವಾಗಿದ್ದ ನೂತನ ವಿತ್ತಸಚಿವ ಒಂದು ದಿನದಲ್ಲೇ ರಾಜೀನಾಮೆ
ಮೇ ತಿಂಗಳವರೆಗೆ ಇನ್ನೂ ಐದು ರವಾನೆಗಳನ್ನು ಪೂರ್ಣಗೊಳಿಸಿದ್ದು, ಇದರಲ್ಲಿ ಆಹಾರ, ಔಷಧ ಮತ್ತು ಅಗತ್ಯ ವಸ್ತುಗಳ ಮತ್ತೊಂದು ಸಾಲದ 1 ಬಿಲಿಯನ್ ಡಾಲರ್ ಗೆ ಕಳೆದ ತಿಂಗಳು ಸಹಿ ಹಾಕಲಾಗಿದೆ. ಶ್ರೀಲಂಕಾಗೆ 1 ಬಿಲಿಯನ್ ಡಾಲರ್ ಸಾಲವು ಅವರ ಆಹಾರದ ಬೆಲೆಗಳು ಮತ್ತು ಇಂಧನ ವೆಚ್ಚಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಈ ಕ್ರೆಡಿಟ್ ಸೌಲಭ್ಯದ ಅಡಿಯಲ್ಲಿ ಭಾರತದಿಂದ ಅಕ್ಕಿಯ ಮೊದಲ ರವಾನೆಯು ಶ್ರೀಲಂಕಾಕ್ಕೆ ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ ಎಂದು ಬಾಗ್ಲಿ ಹೇಳಿದರು.