ಪಾಕ್ ಸಂವಿಧಾನಿಕ ಬಿಕ್ಕಟ್ಟು: ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್!
ಅವಿಶ್ವಾಸ ಗೊತ್ತುವಳಿ ತಿರಸ್ಕೃತ ಪ್ರಕರಣ ಹಾಗೂ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯನ್ನು ಗುರುವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿದೆ.
Published: 06th April 2022 10:09 PM | Last Updated: 07th April 2022 01:24 PM | A+A A-

ಪಾಕಿಸ್ತಾನ ಸುಪ್ರೀಂ ಕೋರ್ಟ್
ಇಸ್ಲಾಮಾಬಾದ್: ಅವಿಶ್ವಾಸ ಗೊತ್ತುವಳಿ ತಿರಸ್ಕೃತ ಪ್ರಕರಣ ಹಾಗೂ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯನ್ನು ಗುರುವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ಅಧ್ಯಕ್ಷರ ಪರವಾಗಿ ಇಂದು ವಕೀಲರೊಬ್ಬರು ವಾದ ಮಂಡಿಸಿದರು. ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ಅವರ ವಕೀಲ ಅಲಿ ಜಾಫರ್, 'ಡೆಪ್ಯುಟಿ ಸ್ಪೀಕರ್ ನಿರ್ಧಾರವನ್ನು ಕೇಳುವ ಹಕ್ಕು ಕೋರ್ಟ್ಗೆ ಇಲ್ಲ. ನ್ಯಾಯಾಲಯದ ತೀರ್ಪನ್ನು ಸಂಸತ್ತಿನಲ್ಲಿ ಹೇಗೆ ಚರ್ಚಿಸಲಾಗುವುದಿಲ್ಲವೋ ಅದೇ ರೀತಿ ಸಂಸತ್ತಿನ ಕಲಾಪದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ವಾದ ಮಂಡಿಸಿದರು.
ಇದಕ್ಕೂ ಮೊದಲು ಕೋರ್ಟ್, ಎನ್‌ಎಸ್‌ಸಿ(ರಾಷ್ಟ್ರೀಯ ಭದ್ರತಾ ಮಂಡಳಿ) ಸಭೆಯ ನಡಾವಳಿಗಳನ್ನು ಒದಗಿಸುವಂತೆ ಇಮ್ರಾನ್ ಸರ್ಕಾರ ಅವರ ವಕೀಲರಿಂದ ಕೇಳಿದೆ. ಇದೇ ಸಭೆಯಲ್ಲೇ ಎನ್‌ಎಸ್‌ಸಿಯೊಂದಿಗೆ ವಿದೇಶಿ ಪ್ರತಿನಿಧಿಗಳು ಇಮ್ರಾನ್ ಸರ್ಕಾರದ ವಿರುದ್ಧ ಪಿತೂರಿ ಮಾಡಿರುವ ಪುರಾವೆಗಳನ್ನು ಒಳಗೊಂಡ ಪತ್ರವನ್ನು ಕೋರ್ಟ್ ಗೆ ಪುಷ್ಟಿಯಾಗಿ ನೀಡಿದ್ದರು.
ಇದನ್ನೂ ಓದಿ: ಅಮೆರಿಕಾ ಹೇಳಿದಂತೆ ಕೇಳದ್ದಕ್ಕೆ ಇಮ್ರಾನ್ ಖಾನ್ ಗೆ ಈ ದುಸ್ಥಿತಿ ಬಂದಿದೆ: ರಷ್ಯಾ
ಅಲ್ಲದೆ, ಇದೇ ಪತ್ರ ಇಟ್ಟುಕೊಂಡು ಸಾರ್ವಜನಿಕ ರಾಲಿಯಲ್ಲಿ ಇಮ್ರಾನ್ ಖಾನ್ ಪ್ರದರ್ಶನ ಮಾಡಿದ್ದರು. ವಿಶೇಷವೆಂದರೆ ಎನ್ಎಸ್‌ಸಿ ಸಭೆಯಲ್ಲಿ ಸೇನಾ ಮುಖ್ಯಸ್ಥರು ಮತ್ತು ಐಎಸ್‌ಐ ಕೂಡ ಉಪಸ್ಥಿತರಿದ್ದರು. ಆದರೆ, ವಿದೇಶಿ ಪಿತೂರಿ ಒಳಗೊಂಡ ಪುರಾವೆಗಳೆಲ್ಲ ಸುಳ್ಳು ಎಂದು ಪಾಕ್ ಸೇನಾ ಮುಖಂಡರು ಪ್ರತಿಕ್ರಿಯಿಸಿದ್ದಾರೆ.
ಕೋರ್ಟ್ ಹೊರಗೆ ಜಟಾಪಟಿ!
ಇನ್ನು ಸುಪ್ರೀಂಕೋರ್ಟ್ ಹೊರಗೆ ಸಂಸದ ಫವಾದ್ ಚೌಧರಿ ಸುದ್ದಿಗೋಷ್ಠಿ ವೇಳೆ ಗಲಾಟೆ ನಡೆದಿದೆ. ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಮುನ್ನ ಫವಾದ್ ಮತ್ತು ಮಾಜಿ ಸಚಿವ ಅಸದ್ ಉಮರ್ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಹಿರಿಯ ಪತ್ರಕರ್ತ ಮತಿಯುಲ್ಲಾ ಜಾನ್, ಇಮ್ರಾನ್ ಪತ್ನಿ ಬುಶ್ರಾ ಬೀಬಿ ಅವರ ಸ್ನೇಹಿತ ಫರಾ ಖಾನ್ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಫವಾದ್ ಕಿಡಿಕಾರಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದಾದ ನಂತರ ಫವಾದ್ ಚೌಧರಿ ಅವರನ್ನು ಕ್ಷಮೆ ಕೋರುವಂತೆ ಪತ್ರಕರ್ತರು ಆಗ್ರಹಿಸಿ ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದರು.