ಯುದ್ಧ ಅಪರಾಧಗಳಿಗಾಗಿ ಪುಟಿನ್‌ರನ್ನು ಶಿಕ್ಷಿಸುವುದು ಸುಲಭವಲ್ಲ!

ನಿಜವಾಗಿಯೂ ಈಗ ನಡೆಯುತ್ತಿರುವ ಯುದ್ಧವನ್ನು ನರಮೇಧ ಎಂದು ಕರೆಯುವುದು ಸೂಕ್ತವೇ? ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧಾಪರಾಧಗಳು ನರಮೇಧ ಎನ್ನುವಷ್ಟರ ಮಟ್ಟಿಗೆ ಇವೆಯೇ? ಎಂದು ಕೇಳಿದರೆ, ಪ್ರತಿಯೊಬ್ಬರ ಅಭಿಪ್ರಾಯಗಳೂ ಭಿನ್ನವಾಗಿರುತ್ತವೆ ಮತ್ತು ಸದ್ಯಕ್ಕಂತೂ ಯಾವುದೇ ಒಮ್ಮತವಿಲ್ಲ.

Published: 20th April 2022 02:25 PM  |   Last Updated: 29th April 2022 05:53 PM   |  A+A-


ಉಕ್ರೇನ್ ಜನವಸತಿ ಪ್ರದೇಶದ ಮೇಲೆ ರಷ್ಯಾ ದಾಳಿಯಿಂದಾದ ಹಾನಿಯ ಚಿತ್ರ

The New Indian Express

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಉಕ್ರೇನ್ ವಿರುದ್ಧ ಪುಟಿನ್ ನಡೆಸುತ್ತಿರುವ ಅವಿರತ ಯುದ್ಧಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ನೀಡಿರುವ ಹೆಸರು 'ಜನಾಂಗೀಯ ಹತ್ಯೆ'. ಅವರು ಪುಟಿನ್ ಅವರನ್ನು "ಯುದ್ಧ ಅಪರಾಧಿ" ಎಂದೂ ಬಣ್ಣಿಸಿದ್ದಾರೆ. ಉಕ್ರೇನ್‌ನಲ್ಲಿ ತನ್ನ ಕಾರ್ಯಗಳನ್ನು ವಿವರಿಸಲು ಬೈಡನ್ ಬಳಸಿದ ಪದ ಎಷ್ಟು ಮಾತ್ರಕ್ಕೂ ತನಗೆ "ಸ್ವೀಕಾರಾರ್ಹವಲ್ಲ" ಎಂದು ಮಾಸ್ಕೋ ಹೇಳಿದೆ.

ರಷ್ಯಾ ಅಷ್ಟಕ್ಕೇ ನಿಲ್ಲದೆ, "ಇಂತಹ ವ್ಯಾಖ್ಯಾನವನ್ನು ನಾವು ಎಷ್ಟು ಮಾತ್ರಕ್ಕೂ ಒಪ್ಪಲಾರೆವು. ಈ ರೀತಿಯಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಯಾವುದೇ ಪ್ರಯತ್ನವು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುತ್ತೇವೆ" ಎಂದಿದೆ.

 "ಇತ್ತೀಚಿನ ದಿನಗಳಲ್ಲಿ ಹಲವಾರು ಕುಖ್ಯಾತ ಅಪರಾಧಗಳನ್ನು ನಡೆಸಿದ ಅಮೆರಿಕ ಅಧ್ಯಕ್ಷರಿಂದ ಇಂತಹ ಮಾತುಗಳು ಯಾರಿಗೂ ಸ್ವೀಕಾರಾರ್ಹವಾಗದು" ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪತ್ರಿಕಾ ಕಾರ್ಯದರ್ಶಿ ಹಾಗೂ ರಾಜತಾಂತ್ರಿಕ ಡಿಮಿಟ್ರಿ ಪೆಸ್ಕೋವ್  ಪ್ರತಿಕ್ರಿಯಿಸಿದ್ದಾರೆ.

ಅಮೆರಿಕ ಮತ್ತು ಪಶ್ಚಿಮದ ಇತರ ರಾಷ್ಟ್ರಗಳ ಕ್ಯಾರೇ ಅನ್ನದೆ ವ್ಲಾಡಿಮಿರ್ ಪುಟಿನ್‌ 50 ದಿನಗಳ ನಂತರವೂ ಉಕ್ರೇನ್ ಮೇಲೆ ವಿನಾಶಕಾರಿ ಆಕ್ರಮಣವನ್ನು ಮುಂದುವರೆಸಿದ್ದಾರೆ. ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಹೇರಿದ ಆರ್ಥಿಕ ಮತ್ತು ಇತರ ರೀತಿಯ ನಿರ್ಬಂಧಗಳೂ ಸಹ ಪುಟಿನ್ ಅವರ ನಿಲುವನ್ನು ಕದಲಿಸಲು ಸಾಧ್ಯವಾಗಿಲ್ಲ. ಬಹುಶಃ ಇದರಿಂದ ಹತಾಶರಾದ ಬೈಡನ್  ಯುದ್ಧವನ್ನು "ಜನಾಂಗೀಯ ಹತ್ಯೆ" ಎಂದು ಬಣ್ಣಿಸಿದ್ದಾರೆ.

ನಿಜವಾಗಿಯೂ ಈಗ ನಡೆಯುತ್ತಿರುವ ಯುದ್ಧವನ್ನು ನರಮೇಧ ಎಂದು ಕರೆಯುವುದು ಸೂಕ್ತವೇ? ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧಾಪರಾಧಗಳು ನರಮೇಧ ಎನ್ನುವಷ್ಟರ ಮಟ್ಟಿಗೆ ಇವೆಯೇ? ಎಂದು ಕೇಳಿದರೆ, ಪ್ರತಿಯೊಬ್ಬರ ಅಭಿಪ್ರಾಯಗಳೂ ಭಿನ್ನವಾಗಿರುತ್ತವೆ ಮತ್ತು ಸದ್ಯಕ್ಕಂತೂ ಯಾವುದೇ ಒಮ್ಮತವಿಲ್ಲ. ಏಕೆಂದರೆ ಈ ವಿಷಯವನ್ನು ಇನ್ನೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಂಪೂರ್ಣವಾಗಿ ಚರ್ಚಿಸಬೇಕಾಗಿದೆ.

ಏಪ್ರಿಲ್ 12 ರಂದು, ಬೈಡನ್ ಅಯೋವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಾನು ಇದನ್ನು ನರಮೇಧ ಎಂದು ಕರೆಯುತ್ತೇನೆ. ಏಕೆಂದರೆ ಉಕ್ರೇನ್ ಎಂಬ ದೇಶವೊಂದು ಇತ್ತು ಎಂಬ ಕಲ್ಪನೆಯನ್ನೇ ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅದಕ್ಕೆ ಪುರಾವೆಗಳೂ ಸಾಕಷ್ಟು ಸಿಗುತ್ತಿವೆ. ಇದು  ಸ್ಪಷ್ಟವಾಗಿದೆ" ಎಂದು ವ್ಯಾಖ್ಯಾನಿಸಿದ್ದರು.

ಹಾಗಿದ್ದರೂ, "ನರಮೇಧ ಹೌದೇ, ಅಲ್ಲವೇ ಎಂಬ ತೀರ್ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಧರಿಸಲು ವಕೀಲರಿಗೆ ನಾವು ಅವಕಾಶ ನೀಡುತ್ತೇವೆ; ಆದರೆ ನನ್ನ ಮಟ್ಟಿಗಂತೂ ಅದು ನರಮೇಧದಂತೆಯೇ ಖಚಿತವಾಗಿ ತೋರುತ್ತದೆ" ಎಂದು ಬೈಡನ್ ಹೇಳಿದ್ದರು.

ಈಗ ನಮ್ಮ ಮುಂದಿರುವ ಪ್ರಶ್ನೆ- 'ನರಮೇಧ' ಎಂದರೇನು? ವಿಶ್ವಸಂಸ್ಥೆಯ ಪ್ರಕಾರ ಯಾವ ಅಪರಾಧಗಳು "ಜನಾಂಗೀಯ ಹತ್ಯೆ" ಎಂಬ ಹಣೆಪಟ್ಟಿಯನ್ನು  ಪಡೆಯಲು ಸೂಕ್ತವಾಗಿವೆ? ವಿಶ್ವಸಂಸ್ಥೆಯ ವೆಬ್‌ಸೈಟ್ ಹೇಳುವಂತೆ "ಜನಾಂಗೀಯ ಹತ್ಯೆ" ಎಂಬ ಪದವನ್ನು ಪೋಲಿಷ್ ವಕೀಲ ರಾಫೆಲ್ ಲೆಮ್ಕಿನ್ ಅವರು 1944 ರಲ್ಲಿ ತಮ್ಮ ಆಕ್ಸಿಸ್ ರೂಲ್ ಇನ್ ಆಕ್ಯುಪೈಡ್ ಯುರೋಪ್‌ ಎಂಬ ಕೃತಿಯಲ್ಲಿ ಬಳಸಿದ್ದಾರೆ. ಗ್ರೀಕ್ ಭಾಷೆಯಲ್ಲಿ ಜೀನೋಸ್ ಎಂದರೆ ಜನಾಂಗ ಅಥವಾ ಬುಡಕಟ್ಟು, ಮತ್ತು ಲ್ಯಾಟಿನ್ ಭಾಷೆಯಲ್ಲಿ ಸೈಡ್ ಎಂದರೆ ಕೊಲ್ಲುವುದು. ಹತ್ಯಾಕಾಂಡದ ಸಮಯದಲ್ಲಿ ಯಹೂದಿ ಜನರ ವ್ಯವಸ್ಥಿತ ಹತ್ಯೆಯ ನಾಜಿ ನೀತಿಗಳಿಗೆ ಸಂವಾದಿಯಾಗಿ ಲೆಮ್ಕಿನ್ ಈ ಪದವನ್ನು ಸೃಷ್ಟಿಸಿದರು. ಇತಿಹಾಸದಲ್ಲಿ ನಡೆದ ನಿರ್ದಿಷ್ಟ ಜನರ ಗುಂಪುಗಳ ಸರ್ವನಾಶವನ್ನೇ ಗುರಿಯಾಗಿಟ್ಟುಕೊಂಡ ಉದ್ದೇಶಿತ ಕ್ರಮಗಳ ಪೂರ್ವ ನಿದರ್ಶನಗಳನ್ನೂ ಗಮನದಲ್ಲಿಟ್ಟುಕೊಂಡು ಅವರು ಈ ಪದವನ್ನು ಬಳಸಿದರು.

ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ನರಮೇಧವನ್ನು ಅಪರಾಧವೆಂದು ವಿಶ್ವಸಂಸ್ಥೆ 1946 ರಲ್ಲಿ ಗುರುತಿಸಿತು. 1948 ರ ಜನಾಂಗ ಹತ್ಯೆಯ ಅಪರಾಧದ ತಡೆಗಟ್ಟುವಿಕೆ ಮತ್ತು ಶಿಕ್ಷೆಯ ಸಮಾವೇಶದಲ್ಲಿ ಇದನ್ನು ಪ್ರತ್ಯೇಕ ಅಪರಾಧವೆಂದು ಕ್ರೋಡೀಕರಿಸಲಾಗಿದೆ, (ಸಾಮಾನ್ಯ ಬಳಕೆಯಲ್ಲಿ ಈ ಸಮಾವೇಶವನ್ನು ನರಮೇಧದ ಸಮಾವೇಶ ಎಂದು ಕರೆಯಲಾಗುತ್ತದೆ.) ಈ ಸಮಾವೇಶದ ನಿರ್ಣಯವನ್ನು 149 ದೇಶಗಳು ಅಂಗೀಕರಿಸಿದವು. ನರಹತ್ಯೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ನಿಷೇಧಿತ ಅಪರಾಧವಾಗಿದೆ. ಯಾವುದೇ ಉಲ್ಲಂಘನೆಯು 10 ರಿಂದ 30 ವರ್ಷಗಳ ಜೈಲು ಶಿಕ್ಷೆ ಸೇರಿದಂತೆ ಕಾನೂನು ಶಿಕ್ಷೆಗೆ ಪಾತ್ರವಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳುತ್ತದೆ.

ನರಮೇಧದ ಸಮಾವೇಶದ ಪ್ರಕಾರ, ಈ ಕೆಳಗಿನ ಐದು ಕೃತ್ಯಗಳಲ್ಲಿ ಯಾವುದಾದರೂ ಒಂದು ರಾಷ್ಟ್ರೀಯ, ನೈತಿಕ, ಜನಾಂಗೀಯ ಅಥವಾ ಧಾರ್ಮಿಕ ಗುಂಪನ್ನು ಸಂಪೂರ್ಣ ಅಥವಾ ಭಾಗಶಃ ನಾಶಮಾಡುವ ಉದ್ದೇಶದಿಂದ ಮಾಡಿದ ಕೃತ್ಯವಾಗಿದ್ದರೆ, ಗುಂಪಿನ ವಿರುದ್ಧ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.

ಇಂತಹ ಕೃತ್ಯಗಳು ಯಾವುವೆಂದರೆ- ಗುಂಪಿನ ಸದಸ್ಯರಿಗೆ ಗಂಭೀರ ಪ್ರಮಾಣದ ದೈಹಿಕ ಅಥವಾ ಮಾನಸಿಕ ಹಾನಿಗೆ  ಕಾರಣವಾಗುವುದು; ಉದ್ದೇಶಪೂರ್ವಕವಾಗಿ ಇಡೀ ಅಥವಾ ಭಾಗಶಃ ಅದರ ಭೌತಿಕ ವಿನಾಶವನ್ನು ಉಂಟುಮಾಡುವಂತೆ ಯೋಜಿತವಾಗಿ ಗುಂಪಿನ ಮೇಲೆ ಕಠಿಣ ಪರಿಸ್ಥಿತಿಗಳನ್ನು  ಹೇರುವುದು;  ಗುಂಪಿನೊಳಗೆ ಮಕ್ಕಳ ಜನನವನ್ನು ತಡೆಗಟ್ಟಲು ಕ್ರಮಗಳನ್ನು ಹೇರುವುದು ಮತ್ತು ಗುಂಪಿನ ಮಕ್ಕಳನ್ನು ಬಲವಂತವಾಗಿ ಮತ್ತೊಂದು ಗುಂಪಿಗೆ ವರ್ಗಾಯಿಸುವುದು.

ಪ್ರಸ್ತುತ, ರಷ್ಯಾದ ಸೈನಿಕರು ಉದ್ದೇಶಪೂರ್ವಕವಾಗಿ ಉಕ್ರೇನ್ ನಾಗರಿಕರನ್ನು ಕೊಂದಿದ್ದಾರೆ ಎನ್ನುವುದು ಅಥವಾ ಕೊಂದಿದ್ದಾರೆ ಎಂದು ಋಜುವಾತು ಪಡಿಸುವುದು ಕಠಿಣವಾಗಿದೆ. ಹತ್ಯೆಗಳು ಉಕ್ರೇನ್ ಜನರನ್ನು ಅಳಿಸಿಹಾಕುವ ಉದ್ದೇಶಪೂರ್ವಕ ಪ್ರಯತ್ನದ ಭಾಗವೆಂದು ಸಾಬೀತುಪಡಿಸುವ ಜವಾಬ್ದಾರಿ ಉಕ್ರೇನಿಯನ್ನರ ಮೇಲಿದೆ. ಅಮೆರಿಕ ಅಥವಾ ರಷ್ಯಾದೊಂದಿಗೆ ಸಂಬಂಧ ಕಡಿದುಕೊಂಡಿರುವ ಯಾವುದೇ ಇತರ ದೇಶಗಳ ಮೇಲೆ ಈ ಜವಾಬ್ದಾರಿಯಿಲ್ಲ. ನರಮೇಧ ಎಂಬ ವಾದವನ್ನು ಬೆಂಬಲಿಸುವ ರೀತಿಯಲ್ಲಿ ಉಕ್ರೇನಿಯನ್ನರು ಅಪರಾಧ ಘಟನೆಗಳನ್ನು ದಾಖಲಿಸಿದರೆ ಆಗ ಅದು ಸಾಕ್ಷಿಯಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಸ್ವತಂತ್ರ ಸಂಸ್ಥೆಯು ಇದುವರೆಗೆ ಯುದ್ಧವನ್ನು ನರಮೇಧ ಎಂದು ಕರೆದಿಲ್ಲ.

ಆದರೆ ಮಾಧ್ಯಮ ವೇದಿಕೆಗಳಲ್ಲಿ ಜನರ ಭೀಕರ ಹತ್ಯೆಯನ್ನು ಪ್ರದರ್ಶಿಸುವ ಛಾಯಾಚಿತ್ರಗಳು ಮತ್ತು ವೀಡಿಯೊಗಳು ಕಾಣಿಸಿಕೊಂಡಾಗ ನಿರೂಪಣೆಗಳು ಬದಲಾಗುತ್ತವೆ. ಉಕ್ರೇನ್ ಯುದ್ಧದ ವಿಷಯವೂ ಇದೇ ಆಗಿದೆ. ಏಪ್ರಿಲ್ ಮೊದಲ ವಾರದಲ್ಲಿ, ಕೀವ್‌ ಉಪನಗರವಾದ ಬುಚಾ ಎಂಬಲ್ಲಿ ಕಂಡುಬಂದ ನೂರಾರು ಶವಗಳ ಚಿತ್ರಗಳನ್ನು ಮಾಧ್ಯಮಗಳು ಬಿತ್ತರಿಸಿದವು. ರಷ್ಯಾದ ಸೈನಿಕರು ಬುಚಾವನ್ನು ತೊರೆದ ನಂತರ ಇವುಗಳನ್ನು ಗಮನಿಸಲಾಯಿತು. ಉಕ್ರೇನ್ ಇದನ್ನು ರಷ್ಯಾ ಸೇನೆ ನಡೆಸಿದ ಹತ್ಯಾಕಾಂಡ ಎಂದು ಬಣ್ಣಿಸಿದೆ. ನಾಗರಿಕ ಉಡುಪುಗಳಲ್ಲಿ 400 ಕ್ಕಿಂತಲೂ ಹೆಚ್ಚು ದೇಹಗಳು ಬೀದಿಗಳಲ್ಲಿ ಮತ್ತು ಸಾಮೂಹಿಕ ಸಮಾಧಿಗಳಲ್ಲಿ ಚದುರಿ ಬಿದ್ದಿದ್ದವು. ರಷ್ಯಾದ ಸೈನಿಕರು ತನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಹಲವಾರು ಜನರ ದೇಹಗಳ ಮೇಲೆ ಚಿತ್ರಹಿಂಸೆಯ ಚಿಹ್ನೆಗಳು ಸ್ಪಷ್ಟವಾಗಿ ಕಂಡುಬಂದವು. ಭಯಾನಕ ಚಿತ್ರಗಳಿಂದ ಆಘಾತಕ್ಕೊಳಗಾದ ನ್ಯಾಟೋ ರಷ್ಯಾದ ವಿರುದ್ಧ ಮತ್ತಷ್ಟು ನಿರ್ಬಂಧಗಳನ್ನು ಹೇರುವಂತೆ ಶಿಫಾರಸು ಮಾಡಿದೆ. ಯುರೋಪಿಯನ್ ಒಕ್ಕೂಟವು ರಷ್ಯಾದ ಅನಿಲ ಆಮದುಗಳ ಮೇಲೆ ನಿಷೇಧ ಹೇರುವುದಕ್ಕೆ ಪರವಾಗಿದೆ. ಹಾಗಿದ್ದರೂ, ಈ ದೃಶ್ಯಾವಳಿಗಳು ಮಾಧ್ಯಮಗಳು ಸೃಷ್ಟಿಸಿದ "ಭೂತಾಕಾರದ ನಕಲಿ ದೃಶ್ಯಗಳು" ಎಂದು ಹೇಳುವ ಮೂಲಕ ರಷ್ಯಾ ತನ್ನ ಮೇಲಿನ ಆಪಾದನೆಗಳನ್ನು ತಳ್ಳಿಹಾಕಿದೆ.

ಈ ಹಂತದಲ್ಲಿ ರಷ್ಯಾದ ಅಪರಾಧ ಕೃತ್ಯಗಳನ್ನು ನರಮೇಧ ಎಂದು ಕರೆಯುವ ತೀರ್ಮಾನಕ್ಕೆ ಬರಲು ಕಷ್ಟವಾಗಬಹುದು. ಆದರೆ ಉಕ್ರೇನ್‌ನಲ್ಲಿ ಅಮಾನವೀಯ ಮತ್ತು ಅಕ್ಷಮ್ಯ ಅಪರಾಧಗಳು ನಡೆಯುತ್ತಿವೆ ಎಂಬುದು ಸ್ಪಷ್ಟವಾಗಿದೆ. ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್, ಉಕ್ರೇನ್‌ನಲ್ಲಿ ಮಾನವೀಯತೆಯ ವಿರುದ್ಧದ ಯುದ್ಧ ಅಪರಾಧಗಳ ತನಿಖೆಯನ್ನು ಪ್ರಾರಂಭಿಸಿದೆ. ಆದರೆ ಇದು ಅರ್ಥಹೀನವಾಗಬಹುದು. ಏಕೆಂದರೆ ರಷ್ಯಾ ಐಸಿಸಿಯ ಸದಸ್ಯನಲ್ಲ. ಆದ್ದರಿಂದ ನ್ಯಾಯಾಲಯದ ಮುಂದೆ ಅದು ಹಾಜರಾಗಬೇಕಿಲ್ಲ ಮತ್ತು ಸಾಕ್ಷ್ಯ ನೀಡಬೇಕಾಗಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆಯೊಂದಿಗೆ ಮಾತ್ರ ಒಬ್ಬರ ವಿರುದ್ಧ ಯುದ್ಧ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಬಹುದು. ಆದರೆ ಇದಕ್ಕೆ ಸ್ವತಃ ರಷ್ಯಾ ತನ್ನ ಒಪ್ಪಿಗೆಯನ್ನು ನೀಡಬೇಕು. ರಷ್ಯಾವು ತನ್ನ ವಿರುದ್ಧ ವಿಚಾರಣೆಗೆ ತಾನೇ ಒಪ್ಪಿಗೆ ನೀಡಬಹುದೆಂದು ನಿರೀಕ್ಷಿಸಲು ಸಾಧ್ಯವೇ? ಇನ್ನೊಂದು ನೆನಪಿಡಬೇಕಾದ ಅಂಶವೆಂದರೆ, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ಒಪ್ಪಂದಕ್ಕೆ ಅಮೆರಿಕವೇ ಸಹಿ ಹಾಕಿಲ್ಲ.

ರಷ್ಯಾದ ಸೈನಿಕರು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡು ಅವರನ್ನು ಕ್ರೂರವಾಗಿ ಹತ್ಯೆ ಮಾಡುತ್ತಾರೆ ಎಂಬುದು ನಿಜವಾಗಿರಲೂಬಹುದು. ಆದರೆ ನ್ಯಾಯಾಲಯದಲ್ಲಿ ಅದನ್ನು ಸಾಬೀತುಪಡಿಸಲು, ಅದು "ಉದ್ದೇಶಪೂರ್ವಕ" ಎಂಬುದನ್ನು ಸಾಬೀತುಪಡಿಸಲು ಪುರಾವೆಗಳು ಬೇಕಾಗುತ್ತವೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಪುಟಿನ್ ಪ್ರಾಯೋಜಿತ ನರಮೇಧವಾಗಲಿ ಅಥವಾ ಇನ್ಯಾವುದೇ ಅಪರಾಧಗಳಾಗಲಿ, ಇಡೀ ಪ್ರಪಂಚವು ವಿವಿಧ ಬಗೆಯ ಅಪರಾಧಗಳಿಗೆ ಸಾಕ್ಷಿಯಾಗಿದೆ. ರಷ್ಯಾ "ಯುರೋಪಿಗೆ ಗ್ಯಾಸ್ ಸ್ಟೇಷನ್" ಆಗಿದೆ. ಅದರ ತೈಲ ನಿಕ್ಷೇಪಗಳು ಮತ್ತು ಅನಿಲ ವಲಯವು ಯುರೋಪಿಯನ್ ದೇಶಗಳಿಗೆ ಸರಕುಗಳನ್ನು ಕಳುಹಿಸುತ್ತಿರುವವರೆಗೂ, ಮಾಸ್ಕೋದ ದೈತ್ಯ ಶಕ್ತಿಯ ಮಟ್ಟವು ಉನ್ನತವಾಗಿಯೇ ಇರುತ್ತದೆ.

ಇಲ್ಲಿಯವರೆಗೆ ಎಲ್ಲವನ್ನೂ ಹೇಳಿದ್ದಾಯಿತು. ಅಮೆರಿಕವು ನೈತಿಕವಾಗಿ ರಷ್ಯಾಕ್ಕಿಂತ ಯಾವುದೇ ರೀತಿಯಲ್ಲೂ ಮೇಲ್ಮಟ್ಟದಲ್ಲಿಲ್ಲ. ಏಕೆಂದರೆ ಅದು ಯುದ್ಧವನ್ನು ನಡೆಸುವ ವಿಧಾನ ಬೇರೆಯಿದೆ. ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ನಾಗರಿಕ ಅಶಾಂತಿಯನ್ನು ಸೃಷ್ಟಿಸುತ್ತಿರುವುದು ಇಡೀ ಜಗತ್ತಿಗೇ ಗೊತ್ತಿದೆ. ಅಮೆರಿಕವು ಇರಾಕ್‌ನಲ್ಲಿ  2005 ರಲ್ಲಿ 7,299 ನಾಗರಿಕರನ್ನು ಕೊಂದು ಹಾಕಿದೆ ಎಂಬುದನ್ನು ಇರಾಕ್ ಬಾಡಿ ಕೌಂಟ್ ಪ್ರಾಜೆಕ್ಟ್ ನಲ್ಲಿ ದಾಖಲಿಸಲಾಗಿದೆ. ಈ ಎಲ್ಲ ಹತ್ಯೆಗಳು ನಡೆದಿರುವುದು ಅಮೆರಿಕದ ವಾಯುಪಡೆ ಮತ್ತು ನೆಲದ ಮೇಲಿನ ಪಡೆಗಳಿಂದ ಎಂಬುದು ರಹಸ್ಯವಾಗಿ ಉಳಿದಿಲ್ಲ.

ಅದು ಅಮೆರಿಕವೊ, ರಷ್ಯಾವೊ ಅಥವಾ ಚೀನಾ, ಯಾವುದೇ ಆಗಿರಲಿ, ಬಲ ಪ್ರಯೋಗವು  ಮನುಕುಲದ ಒಳಿತಿಗಾಗಿ ಇರಬೇಕೇ ಹೊರತು ನಾಶಕ್ಕಲ್ಲ ಎಂಬುದನ್ನು ಯಾರೂ ಮರೆಯಬಾರದು.

ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 


Stay up to date on all the latest ವಿದೇಶ news
Poll
Parliament

2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷ ಯಾವುದು ಎಂದು ನೀವು ಭಾವಿಸುತ್ತೀರಿ?


Result
ಕಾಂಗ್ರೆಸ್
ಎಎಪಿ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp