ಉಕ್ರೇನ್ ಗೆ ಪಾಶ್ಚಾತ್ಯ ದೇಶಗಳಿಂದ ಶಸ್ತ್ರಾಸ್ತ್ರ ಪೂರೈಕೆ; ಮೂರನೇ ಮಹಾಯುದ್ಧದ ಎಚ್ಚರಿಕೆ ರವಾನಿಸಿದ ರಷ್ಯಾ!!
ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಸುವುದನ್ಗು ವಿರೋಧಿಸಿರುವ ರಷ್ಯಾ, ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.
Published: 26th April 2022 12:24 PM | Last Updated: 26th April 2022 01:35 PM | A+A A-

ಕೀವ್ ಮೇಲೆ ರಷ್ಯಾ ಸೇನೆ ದಾಳಿ (ಸಂಗ್ರಹ ಚಿತ್ರ)
ಮಾಸ್ಕೋ: ಉಕ್ರೇನ್‌ಗೆ ಪಾಶ್ಚಾತ್ಯ ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಸುವುದನ್ಗು ವಿರೋಧಿಸಿರುವ ರಷ್ಯಾ, ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.
ಉಕ್ರೇನ್‌ಗೆ ಮತ್ತಷ್ಟು ಶಸ್ತ್ರಾಸ್ತ್ರ ಪೂರೈಕೆ ಮಾಡುವ ಕುರಿತು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನಡುವೆ ಇಂದು ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಷ್ಯಾ ಹೇಳಿಕೆ ಕುತೂಹಲ ಕೆರಳಿಸಿದೆ. ಈ ಕುರಿತು ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು, '‘ನಿಜ, ನೀವು 3ನೇ ಮಹಾ ಯುದ್ಧವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಮೂರನೇ ಮಹಾಯುದ್ಧ ಆರಂಭವಾಗುವ ಅಪಾಯ ಗಂಭೀರಗೊಳ್ಳುತ್ತಿದೆ. ಅಲ್ಲದೆ, ಉಕ್ರೇನ್ ಶಾಂತಿ ಮಾತುಕತೆಗಳನ್ನು ವಿಫಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಷ್ಯಾ ಯುದ್ಧ ಸಾರಿದಾಗಿನಿಂದಲೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಪಾಶ್ಚಾತ್ಯ ರಾಷ್ಟ್ರಗಳಿಂದ ಮಿಲಿಟರಿ ನೆರವು ಕೇಳುತ್ತಲೇ ಬಂದಿದ್ದಾರೆ. ಶಸ್ತ್ರಾಸ್ತ್ರಗಳಿದ್ದರೆ, ಉಕ್ರೇನ್ ಪಡೆಗಳು ಯುದ್ಧ ಗೆಲ್ಲುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ಮಾಸ್ಕೋದ ಎಚ್ಚರಿಕೆಯ ನಡುವೆಯೂ ಪಾಶ್ಚಾತ್ಯ ರಾಷ್ಟ್ರಗಳು ಈಗ ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದ ಮಿಲಿಟರಿ ನೆರವು ನೀಡಲು ಮುಂದೆ ಬರುತ್ತಿವೆ.
ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಟದಲ್ಲಿ ಉಕ್ರೇನ್ ಗೆ ಹೊಸ ಮಿಲಿಟರಿ ನೆರವು: ಅಮೆರಿಕ ಭರವಸೆ
ಈ ಹಿಂದೆ ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ವಾರ ಉಕ್ರೇನ್ ರಾಜಧಾನಿ ಕೀವ್‌ಗೆ ತೆರಳಿದ್ದ ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಸ್ಥ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿ 53 ಸಾವಿರ ಕೋಟಿ ರೂ ಮೊತ್ತದ ಮಿಲಿಟರಿ ನೆರವಿನ ಭರವಸೆ ನೀಡಿ ಬಂದಿದ್ದಾರೆ.
ಉಕ್ರೇನ್‌ಗೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕುರಿತು ಚರ್ಚಿಸಲು ಅಮೆರಿಕ ನೀಡಿರುವ ಆಹ್ವಾನದ ಮೇರೆಗೆ 40 ದೇಶಗಳು ಮಂಗಳವಾರ ಜರ್ಮನಿಯಲ್ಲಿ ಭದ್ರತಾ ಶೃಂಗಸಭೆ ನಡೆಸಲಿವೆ. ಹಾಗೆಯೇ, ಉಕ್ರೇನ್‌ನಲ್ಲಿ ಯುದ್ಧ ಮುಗಿದ ನಂತರ ದೀರ್ಘಾವಧಿಯ ಭದ್ರತೆಯನ್ನು ಖಚಿತಪಡಿಸುವ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.